ಟೀಂ ಇಂಡಿಯಾಗೆ ಭರ್ಜರಿ ಜಯ – 112 ವರ್ಷಗಳ ಐತಿಹಾಸಿಕ ದಾಖಲೆ ಸರಿಗಟ್ಟಿದ ಭಾರತ
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಧರ್ಮಶಾಲಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ.
ಸ್ಪಿನ್ನರ್ಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯವನ್ನು ಭಾರತ ಒಂದು ಇನ್ನಿಂಗ್ಸ್ ಮತ್ತು 64 ರನ್ಗಳಿಂದ ಜಯಗಳಿಸಿದೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯನ್ನು ಭಾರತ ತಂಡ 4-1 ಅಂತರದಿಂದ ಗೆದ್ದುಕೊಂಡಿದ್ದು, ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ಕಮಾಲ್ ಮಾಡ್ತಾರಾ ಮುದ್ದಹನುಮೇಗೌಡ? – ದಳಪತಿಗಳ ತವರುಮನೆಯಲ್ಲಿ ಸೋಲಿನ ಪಂಚ್?
259 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 195 ರನ್ಗಳಿಗೆ ಆಲೌಟ್ ಆಯ್ತು. ಸ್ಪಿನ್ನರ್ ಅಶ್ವಿನ್ 5 ವಿಕೆಟ್ ಪಡೆದರೆ ಬುಮ್ರಾ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ರವೀಂದ್ರ ಜಡೇಜಾ 1 ವಿಕೆಟ್ ಕಿತ್ತರು. ಇಂಗ್ಲೆಂಡ್ ಪರ ಜೋ ರೂಟ್ 84 ರನ್(128 ಎಸೆತ, 12 ಬೌಂಡರಿ), ಜಾನಿ ಬೈರ್ಸ್ಟೋವ್ 39 ರನ್, ಟಾಮ್ ಹಾರ್ಟ್ಲಿ 20 ರನ್ ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.
ಐದು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ, ಉಳಿದ ನಾಲ್ಕು ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿದೆ. ಈ ಮೂಲಕ 112 ವರ್ಷಗಳ ಹಳೆಯ ದಾಖಲೆಯನ್ನು ಭಾರತ ತಂಡ ಸರಿಗಟ್ಟಿದೆ.
ಇದಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂತಹದೊಂದು ಅಪರೂಪದ ಫಲಿತಾಂಶದ ದಾಖಲೆ ನಿರ್ಮಾಣವಾಗಿದ್ದು ಕೇವಲ 3 ಬಾರಿ ಮಾತ್ರ. 1897-98 ಮತ್ತು 1901-02 ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸೋತು ಆಸ್ಟ್ರೇಲಿಯಾ ಆ ಬಳಿಕ 4-1 ಅಂತರದಿಂದ 2 ಬಾರಿ ಸರಣಿ ಗೆದ್ದಿತ್ತು. ಇದಾದ ಬಳಿಕ 1912 ರಲ್ಲಿ ಇಂಗ್ಲೆಂಡ್ ತಂಡ ಇಂತಹದೊಂದು ಸಾಧನೆ ಮಾಡಿತ್ತು. ಇದೀಗ 112 ವರ್ಷಗಳ ಬಳಿಕ ಟೀಮ್ ಇಂಡಿಯಾ ಐತಿಹಾಸಿಕ ದಾಖಲೆಯನ್ನು ಬರೆದಿದೆ.