ಕೇಳಿದ್ದು ತಾಯಿಯ ಮರಣ ಪ್ರಮಾಣ ಪತ್ರ – ಕೈಗೆ ಸಿಕ್ಕಿದ್ದು ಆಕೆಯದ್ದೇ ಮರಣ ಪ್ರಮಾಣ ಪತ್ರ..!
ಮಹಿಳೆಯೊಬ್ಬರು ತಾಯಿಯ ಮರಣ ಪ್ರಮಾಣ ಪತ್ರ ತರಲು ಹೋಗಿದ್ದರು. ಆದರೆ, ಕೈಗೆ ಸಿಕ್ಕ ಮರಣಪತ್ರ ಓದಿದರೆ, ಅದು ಆಕೆಯದ್ದೇ. ತಾನು ಬದುಕಿದ್ದಾಗಲೇ ತನ್ನದೇ ಮರಣಪತ್ರ ಓದಿರುವ ವಿಲಕ್ಷಣ ಘಟನೆಯೊಂದು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ಕೈಯಲ್ಲಿ ಆಕೆಯದ್ದೇ ಮರಣ ಪ್ರಮಾಣ ಪತ್ರ ನೀಡಿ ಅಧಿಕಾರಿಗಳು ದಿಗ್ಬ್ರಮೆ ಮೂಡಿಸಿದ್ದಾರೆ. ಅಂದಹಾಗೆ ಮಹಿಳೆಗೆ ಗೊತ್ತಿಲ್ಲದೇ ಆಕೆಯ ಮರಣಪತ್ರ ರೆಡಿಯಾಗಿದ್ದು ಆಸ್ತಿಗಾಗಿ.
ಇದನ್ನೂ ಓದಿ: ಕಿಡ್ನಿ ಸ್ಟೋನ್ ಅಂತಾ ಬಂದವನ ಮೂತ್ರಪಿಂಡವನ್ನೇ ತೆಗೆದ ವೈದ್ಯರು! –ರೋಗಿ ಸಾವು
ಜನನ ಮತ್ತು ಮರಣ ಪತ್ರ ನೋಂದಣಿ ಕೇಂದ್ರದ ಅಧಿಕಾರಿಗಳ ಎಡವಟ್ಟು ಕೂಡ ಇಲ್ಲಿ ಸಾಬೀತಾಗಿದೆ. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ ಸಾವಿತ್ರಿ ರಾಮಗೊಂಡ ಮಾಳಿ ಎಂಬ 60 ವರ್ಷದ ಮಹಿಳೆ, ಜನನ ಮತ್ತು ಮರಣ ನೋಂದಣಿ ಇಲಾಖೆ ಅಧಿಕಾರಿಗಳ ಬಳಿ ತನ್ನ ತಾಯಿಯ ಮರಣ ಪತ್ರ ಕೇಳಿದ್ದಾರೆ. ಕಚೇರಿಗೆ ಬಂದ ಸಾವಿತ್ರಿಗೆ ಅಧಿಕಾರಿಗಳು ಮರಣ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಆದರೆ, ಆ ಮರಣ ಪ್ರಮಾಣ ಪತ್ರದ ಓದಿದ ಸಾವಿತ್ರಿ ಆಘಾತಕ್ಕೊಳಗಾಗಿದ್ದಾರೆ. ಪತ್ರದ ಪ್ರಕಾರ ಸಾವಿತ್ರಿ 12-03-2001ರಲ್ಲಿಯೇ ನಿಧನರಾಗಿದ್ಧಾರೆ ಎಂದಿದೆ. ಸಾವಿತ್ರಿ ಮೂಲತಃ ವಿಜಯಪುರ ತಾಲೂಕಿನ ಹೊನ್ನಳ್ಳಿ ಗ್ರಾಮದವರು ಇವರ ತಂದೆಗೆ ಒಬ್ಬಳೇ ಮಗಳು. ಸಾವಿತ್ರಿ ಅವರ ತಂದೆ ನಿಧನಾದಂತರ ಅವರ ಹೆಸರಿನಲ್ಲಿದ್ದ 12 ಎಕರೆ ಜಮೀನು ಸಾವಿತ್ರಿ ಅವರ ಹೆಸರಿಗೆ ಬಂದಿತ್ತು. ಈ ಆಸ್ತಿ ಲಪಟಾಯಿಸಲು ತಮ್ಮ ಸಂಬಂಧಿಕರೇ ಮರಣ ಪತ್ರ ಸೃಷ್ಟಿ ಮಾಡಿದ್ದಾರೆ ಎಂದು ಸಾವಿತ್ರಿ ಮಾಳೆ ಆರೋಪಿಸಿದ್ದಾರೆ. ಇನ್ನು ಸಾವಿತ್ರಿ ಮಾಳೆಯ ಪತಿ ನಿಂಗಪ್ಪ ಮಾಳೆ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಸಾವಿತ್ರಿ ಅವರ ಚಿಕ್ಕಪ್ಪನ ಪುತ್ರ ಅಶೋಕ ಹಾಗೂ ಇತರರು ಸಾವಿತ್ರಿ ಹೆಸರಿನಲ್ಲಿರುವ 12 ಎಕರೆ ಜಮೀನು ಕಬಳಿಸಲು 2001ರಲ್ಲಿ ಸಾವಿತ್ರಿ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ 11-03-2001ರಂದು ನಿಧನರಾಗಿದ್ದಾರೆಂದು ಚಡಚಣದ ಗ್ರಾಮಲೆಕ್ಕಾಧಿಕಾರಿ ಮೂಲಕ ಜನನ ಮತ್ತು ಮರಣಗಳ ನೋಂದಣಿ ಕಚೇರಿಯಲ್ಲಿ ಮರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದು ನೊಂದಣಿಯಾಗಿದ್ದು ಮಾತ್ರ 2-01-2013 ರಂದು. ನಂತರ 5-01-2023ರಂದು ಮರಣ ಪ್ರಮಾಣ ಪತ್ರಕ್ಕೆ ಅನುಮೋದನೆ ದೊರೆತಿದೆ. ಇದು ಗೊತ್ತಿಲ್ಲದ ಸಾವಿತ್ರಿ ತಮ್ಮ ತಾಯಿಯ ಮರಣ ಪತ್ರ ಪಡೆಯಲು ಹೋದಾಗ ತನ್ನ ಮರಣ ಪತ್ರ ನೀಡಿದ ಮೇಲೆ ಈ ಪ್ರಕರಣ ಬೆಳಕಿಗೆ ಬಂದಿದೆ. ಇದರಿಂದ ನೊಂದಿರೋ ಸಾವಿತ್ರಿ ಮಾಳಿ ಅವರು ತನ್ನ ಜೀವಿತಾವಧಿಯಲ್ಲಿ ಮರಣ ಪತ್ರ ನೀಡಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಮಾನಸಿಕವಾಗಿ ನೊಂದಿರುವ ತಮಗೆ ಕಾನೂನಿನ ನೆರವು ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ಸಹಾಯಕ್ಕಾಗಿ ಅರ್ಜಿ ಹಾಕಿದ್ದಾರೆ.
ಕಾನೂನು ಪ್ರಾಧಿಕಾರಕ್ಕೆ ಸಾವಿತ್ರಿ ಅರ್ಜಿ ಹಾಕಿದ ಮೇಲೆ ಪ್ರಕರಣ ನ್ಯಾಯವಾದಿಗಳ ಗಮನಕ್ಕೆ ಬಂದಿದೆ. ಜೀವಂತವಿರುವಾಗಲೇ ವೃದ್ಧೆಗೆ ಮರಣ ಪ್ರಮಾಣ ಪತ್ರ ನೀಡಿರುವುದು ದೊಡ್ಡ ಅಪರಾಧವಾಗಿದೆ ಎಂದು ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅಭಿಪ್ರಾಯ ಪಟ್ಟಿದ್ದಾರೆ.