INDIAಗೆ ಎಳ್ಳು ನೀರು.. ಕಾಂಗ್ರೆಸ್ ಒಂಟಿ – ಲೋಕಸಭೆ ಮೈತ್ರಿ ವಿಧಾನಸಭೆಗೆ ಬೇಡ್ವಾ?
ಮಮತಾ ಪಟ್ಟಾಭಿಷೇಕಕ್ಕೆ ನಡೀತಿದ್ಯಾ ತಂತ್ರ?

INDIAಗೆ ಎಳ್ಳು ನೀರು.. ಕಾಂಗ್ರೆಸ್ ಒಂಟಿ – ಲೋಕಸಭೆ ಮೈತ್ರಿ ವಿಧಾನಸಭೆಗೆ ಬೇಡ್ವಾ?ಮಮತಾ ಪಟ್ಟಾಭಿಷೇಕಕ್ಕೆ ನಡೀತಿದ್ಯಾ ತಂತ್ರ?

ವಿಪಕ್ಷಗಳ ‘INDIA’ ಮೈತ್ರಿ ಒಕ್ಕೂಟದ ಗೋಡೆ ಈಗ ಬಿರುಕು ಬಿಡಲಾರಂಭಿಸಿದೆ. ಹರಿಯಾಣ ಮತ್ತು  ಮಹಾರಾಷ್ಟ್ರ ಚುನಾವಣಾ ಸೋಲು ವಿಪಕ್ಷಗಳ ಮೈತ್ರಿಯ ಅಡಿಪಾಯವನ್ನು ಅಲ್ಲಾಡಿಸಿದೆ. ಮತ್ತೊಂದೆಡೆ ಲೋಕಸಭೆಯಲ್ಲಿ ಅಧಿವೇಶನ ವೇಳೆ ಗೌತಮ್ ಅದಾನಿ  ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಡೆಸುತ್ತಿರುವ ಪ್ರತಿಭಟನೆಯಿಂದ ಟಿಎಂಸಿ ಮತ್ತು ಸಮಾಜವಾದಿ ಪಕ್ಷಗಳು ದೂರ ಉಳಿದಿವೆ. ಹೀಗಾಗೀ ಈ ಒಕ್ಕೂಟದಲ್ಲಿ ನಾಯಕತ್ವಕ್ಕಾಗಿ ಹೋರಾಟ ಶುರುವಾಗಿದೆ. ಇತ್ತ ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ, ತಮಗೆ ಅವಕಾಶ ಸಿಕ್ಕರೆ, ಇಂಡಿಯಾ ಕೂಟದ ನೇತೃತ್ವ ವಹಿಸಲು ಸಿದ್ದ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ  ಹೇಳಿರುವುದು ಕೊತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಹಿರಿಯರ ತೀರ್ಮಾನವೇ ಅಂತಿಮ ಎಂದ ನಿಖಿಲ್ ಕುಮಾರಸ್ವಾಮಿ – ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ಫಿಕ್ಸ್‌?

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಸ್ತಿತ್ವಕ್ಕೆ ಬಂದ ಇಂಡಿಯಾ ಒಕ್ಕೂಟ ಈಗ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಪಕ್ಷದ ಸಿದ್ಧಾಂತಗಳು, ನಾಯಕರ ಅಭಿಪ್ರಾಯಗಳು ಇಂಡಿಯಾ ಒಕ್ಕೂಟದಲ್ಲೇ ಬಿರುಗಾಳಿ ಎಬ್ಬಿಸಿವೆ. ಒಬ್ಬೊಬ್ಬರದ್ದೂ ಒಂದೊಂದು ರೀತಿಯ ಆಲೋಚನೆಗಳ ನಡುವೆ ಲೀಡರ್​ಶಿಪ್ ಫೈಟ್ ಕೂಡ ಶುರುವಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಈ ಒಕ್ಕೂಟದ ಪರಿಸ್ಥಿತಿ ಹದಗೆಟ್ಟಿದೆ. ಅರವಿಂದ್ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಾರ್ಟಿ INDIA ಅಲೈಯನ್ಸ್ ಜೊತೆಗಿದೆ. ಆದ್ರೆ ಹರಿಯಾಣದಲ್ಲಿಯೂ ಆಮ್ ಆದ್ಮಿ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸಿದೆ. ಈಗ ಮುಂದಿನ ವರ್ಷ ದೆಹಲಿಯಲ್ಲಿ ಚುನಾವಣೆ ನಡೆಯಲಿದ್ದು, ಅರವಿಂದ್ ಕೇಜ್ರಿವಾಲ್ ವಿಧಾನಸಭಾ ಚುನಾವಣೆಯಲ್ಲೂ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಕಾಂಗ್ರೆಸ್ ಕೈ ಬಿಟ್ಟಿದ್ದಾರೆ. ಮಮತಾ ಬ್ಯಾನರ್ಜಿ ಕೂಡ INDIA ಮೈತ್ರಿಯಿಂದ ದೂರವಿದ್ದಾರೆ. ಮಮತಾ ಅವ್ರ ಪಕ್ಷವೂ ಬಂಗಾಳದಲ್ಲಿ ಪ್ರತ್ಯೇಕವಾಗಿ ಚುನಾವಣೆಗಳನ್ನು ಎದುರಿಸಿತ್ತು. ಅಲ್ಲದೇ ಮಮತಾ ಬ್ಯಾನರ್ಜಿ ಮೊದಲಿನಿಂದಲೂ INDIA ಒಕ್ಕೂಟದ ನಾಯಕತ್ವದ ಮೇಲೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.  INDIA ಮೈತ್ರಿಕೂಟದ ಕಮಾಂಡ್ ಅನ್ನು ತೆಗೆದುಕೊಳ್ಳಲು  ಪ್ರಯತ್ನ ಮಾಡುತ್ತಿದ್ದಾರೆ.  ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನೇತೃತ್ವದ INDIA ಮೈತ್ರಿ ಭವಿಷ್ಯದಲ್ಲಿ ಛಿದ್ರವಾಗುವುದು ನಿಶ್ಚಿತವಾಗಿದೆ. ಇಂಡಿಯಾ ಮೈತ್ರಿ ಒಕ್ಕೂಟ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯದಿದ್ದರೂ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳಿಗೆ ಸ್ಥಾನಗಳನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಲೋಕಸಭೆ ಚುನಾವಣೆ ಬಳಿಕ ಇಂಡಿಯಾ ಒಕ್ಕೂಟ ಮತ್ತಷ್ಟು ಗಟ್ಟಿಗೊಂಡಿತ್ತು. ಆದರೆ ಕಳೆದ ಕೆಲ ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂಡಿಯಾ ಮೈತ್ರಿ ಪಕ್ಷಗಳಲ್ಲಿ ಕೆಲ ಅಸಮಾಧಾನ ಮೂಡಿಸಿದೆ. ಅಲ್ದೇ ಮಮತಾ ಬ್ಯಾನರ್ಜಿ ಅವರು ಅಖಿಲೇಶ್ ಯಾದವ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.  ಅಖಿಲೇಶ್ ಕೋಲ್ಕತ್ತಾಗೆ ಹೋದಾಗಲೆಲ್ಲಾ ಮಮತಾರನ್ನು ಭೇಟಿಯಾಗದೆ ಹಿಂತಿರುಗುವುದಿಲ್ಲ. ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರೊಂದಿಗೂ ಮಮತಾ ಒಳ್ಳೆ ಬಾಂಡಿಂಗ್ ಹೊಂದಿದ್ದಾರೆ. ಮಮತಾ ಅವರ ಪ್ರಮಾಣವಚನ ಸಮಾರಂಭದಲ್ಲೂ ಸೊರೆನ್ ಭಾಗವಹಿಸಿದ್ದರು. ಇನ್ನು ಇತ್ತೀಚೆಗಷ್ಟೇ ಮಮತಾ ಬ್ಯಾನರ್ಜಿ ಅವಕಾಶ ಸಿಕ್ರೆ ಇಂಡಿಯಾ ಮೈತ್ರಿಕೂಟ ನಡೆಸೋಕೆ ಸಿದ್ಧ ಎಂಬ ಹೇಳಿಕೆ ಕೊಟ್ಟಿದ್ರು. ಅಲ್ದೇ ಒಕ್ಕೂಟದ ಬೇರೆ ಬೇರೆ ಪಕ್ಷಗಳ ನಾಯಕರು ಕೂಡ ಇದೇ ಮನಸ್ಥಿತಿಯಲ್ಲಿದ್ದಾರೆ. ಹಾಗೇ ಇಂಡಿಯಾ ಒಕ್ಕೂಟದ ನಾಯಕತ್ವ ಬದಲಾಗಬೇಕು ಎಂಬ ಕೂಗು ಜೋರಾಗಿದ್ದು ಸಮಾಜವಾದಿ ಪಕ್ಷ  ಈ ಬಗ್ಗೆ ಧ್ವನಿ ಎತ್ತಿದೆ. ಆದ್ರೆ ಕಾಂಗ್ರೆಸ್ ಪಕ್ಷ ಈ ನಿಲುವನ್ನು ವಿರೋಧಿಸಿದೆ. ಮಮತಾ ಗೆ ಎಲ್ಲಾ ನಾಯಕರ ಬೆಂಬಲ ಸಿಕ್ಕರೆ ಒಕ್ಕೂಟ ಪೂರ್ತಿ ಛಿದ್ರವಾಗೋದ್ರಲ್ಲಿ ಅನುಮಾನವಿಲ್ಲ.

ಇತ್ತ ಅಖಿಲೇಶ್ ಕೂಡ ಕಾಂಗ್ರೆಸ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮನಸ್ಥಿತಿಯಲ್ಲಿ ಇದ್ದಂತಿಲ್ಲ. ಚುನಾವಣೆಯ ಸಮಯದಲ್ಲಿ ಸೀಟು ಹಂಚಿಕೆಯಾಗಲಿ ಅಥವಾ ಸಂಸತ್ತಿನಲ್ಲಿ ಆಸನ ವ್ಯವಸ್ಥೆಯಾಗಲಿ, ಅಖಿಲೇಶ್ ಕಾಂಗ್ರೆಸ್ ವಿರುದ್ಧ ಕಠಿಣ ಧೋರಣೆ ಅನುಸರಿಸಿದ್ದಾರೆ. ಬಿಹಾರದಲ್ಲಿ ಆರ್‌ಜೆಡಿ ಕೂಡ ಕಾಂಗ್ರೆಸ್ ಅನ್ನು ಹೊರೆ ಎಂದು ಪರಿಗಣಿಸಿದೆ. ಹೀಗಾಗಿ ಮಮತಾಗೆ ತೇಜಸ್ವಿ ಯಾದವ್‌ ಬೆಂಬಲ ಸಿಗಬಹುದು. ಅರವಿಂದ್ ಕೇಜ್ರಿವಾಲ್ ಮತ್ತು ಉದ್ಧವ್ ಠಾಕ್ರೆ ಅವರೊಂದಿಗೆ ಮಮತಾ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಹಿಗಾಗಿ ಮಮತಾ ಇಂಡಿಯಾ ಒಕ್ಕೂಟದ ಮೇಲೆ ಕಣ್ಣು ಇಟ್ಟಿದೆ. ಆದ್ರೆ ಬಿಜೆಪಿಯನ್ನ ಮಣಿಸಲು ಬಂದ ಇಂಡಿಯಾ ಕೂಟ ದಲ್ಲಿ ಒಗ್ಗಟ್ಟಿನ ಕೊರತೆ ಇರೋದು ಎದ್ದು ಕಾಣುತ್ತಿದೆ.

Shwetha M

Leave a Reply

Your email address will not be published. Required fields are marked *