‘ಸಗಣಿಯಿಂದ ಮಾಡಿದ ಮನೆ ಪರಮಾಣು ವಿಕಿರಣ ತಡೆಯುತ್ತೆ’ – ಗುಜರಾತ್ ಕೋರ್ಟ್

‘ಸಗಣಿಯಿಂದ ಮಾಡಿದ ಮನೆ ಪರಮಾಣು ವಿಕಿರಣ ತಡೆಯುತ್ತೆ’ – ಗುಜರಾತ್ ಕೋರ್ಟ್

ಗುಜರಾತ್: ದೇಶದಲ್ಲಿ ಗೋವುಗಳನ್ನು ಸಂರಕ್ಷಿಸುವ ಅಗತ್ಯವನ್ನು ಗುಜರಾತ್‌ನ ತಾಪಿ ಜಿಲ್ಲೆಯ ಸೆಷನ್ಸ್ ನ್ಯಾಯಾಲಯ ಒತ್ತಿ ಹೇಳಿದೆ.  “ಗೋವಿನ ಸಗಣಿಯಿಂದ ಮಾಡಿದ ಮನೆಗಳ ಮೇಲೆ ಪರಮಾಣು ವಿಕಿರಣದ ಪರಿಣಾಮವಿರುವುದಿಲ್ಲ ಎಂದು ವಿಜ್ಞಾನವು ಸಾಬೀತುಪಡಿಸಿದೆ” ಎಂದು ಅಭಿಪ್ರಾಯಪಟ್ಟಿದೆ.

“ಗುಣಪಡಿಸಲಾಗದ ಹಲವು ರೋಗಕ್ಕೆ ಗೋಮೂತ್ರ ಶಮನಕಾರಿಯಾಗಿದೆ. ಗೋವು ಪ್ರಾಣಿಯಲ್ಲ. ಅದು ನಮ್ಮ ತಾಯಿ ಇದ್ದಂತೆ. ಯಾವಾಗ ಗೋವಿನ ಒಂದು ಹನಿ ರಕ್ತ ಬೀಳುವುದಿಲ್ಲವೋ, ಆಗ ಭೂಮಿ ಮೇಲಿನ ಎಲ್ಲಾ ಸಮಸ್ಯೆ ಪರಿಹಾರವಾಗುತ್ತದೆ” ಎಂದಿದೆ. ನಿಯಮ ಉಲ್ಲಂಘಿಸಿ ಗುಜರಾತ್ ನಿಂದ ಮಹಾರಾಷ್ಟ್ರಕ್ಕೆ ಗೋಸಾಗಾಟ ಮಾಡಿದ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸಂದರ್ಭ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವಿವಿಗಳಲ್ಲಿ ಮೋದಿ ಕುರಿತ ನಿಷೇಧಿತ ಸಾಕ್ಷ್ಯಚಿತ್ರ ಪ್ರದರ್ಶನ – ಎಲ್ಲೆಲ್ಲಿ ವಿವಾದ..!?

16 ಕ್ಕೂ ಹೆಚ್ಚು ಹಸುಗಳು ಮತ್ತು ಅದರ ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೊಹಮ್ಮದ್ ಅಮೀನ್ ಎಂಬುವವನ್ನು ಆಗಸ್ಟ್ 27, 2020 ರಂದು ಬಂಧಿಸಲಾಗಿತ್ತು. ಅಂದಿನಿಂದ ಅಮೀನ್ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದ. ಇದೀಗ ಈತನಿಗೆ ಗುಜರಾತ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ರೂ.5 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

ನ್ಯಾಯಾಧೀಶರು ತಮ್ಮ ಆದೇಶದಲ್ಲಿ, ಹಸುವಿನ ಧಾರ್ಮಿಕ ಅಂಶಗಳನ್ನು ಮಾತ್ರವಲ್ಲದೆ ಅದರ ಆರ್ಥಿಕ, ಸಾಮಾಜಿಕ, ವೈಜ್ಞಾನಿಕ ಮತ್ತು ಆರೋಗ್ಯ ಪ್ರಯೋಜನಗಳನ್ನು ಪರಿಗಣಿಸುವ ಅಗತ್ಯವನ್ನು ಸೂಚಿಸಿದ್ದಾರೆ. ಯಾಂತ್ರೀಕೃತ ಕಸಾಯಿಖಾನೆಗಳು ಗೋವುಗಳನ್ನು ಕೊಲ್ಲಲು ಬಂದಿವೆ. ಗೋವುಗಳನ್ನು ಹತ್ಯೆ ಮಾಡಲಾಗುತ್ತಿದೆ. ಅವುಗಳ ಜೀವಕ್ಕೆ ದೊಡ್ಡ ಅಪಾಯವಿದೆ. ಮಾಂಸಾಹಾರಿಗಳು ಮಾಂಸವನ್ನು ಸೇವಿಸುತ್ತಾರೆ ಮತ್ತು ಇದಕ್ಕಾಗಿ ಹಸುವಿನ ಮಾಂಸವನ್ನು ಸಹ ಬಳಸಲಾಗುತ್ತಿದೆ ಎಂದು ಹೇಳಿದರು.

“ಧರ್ಮವು ಗೋವಿನಿಂದ ಹುಟ್ಟಿದೆ. ಏಕೆಂದರೆ ಧರ್ಮವು ಗೋವಿನ ಮಗನಾದ ‘ವೃಷಭ’ (ಗೂಳಿ) ರೂಪದಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದು, ಗೋ ಹತ್ಯೆಗಳು ಕಡಿಮೆಯಾಗುವುದರ ಬದಲಿಗೆ ಇನ್ನೂ ಹೆಚ್ಚಳವಾಗುತ್ತಿದೆ. ಇಂದು ದೇಶದಲ್ಲಿ ಗೋವುಗಳು ಅಪಾಯದಲ್ಲಿವೆ. ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಅವುಗಳ ಹತ್ಯೆ ಮಾಡುತ್ತಿರೋದು ನೋವಿನ ಸಂಗತಿ.  ಭಾರತದಲ್ಲಿ ಈಗಾಗಲೇ ಶೇ 75 ರಷ್ಟು ಗೋವುಗಳು ಕಣ್ಮರೆಯಾಗಿವೆ ಎಂದು ಅಭಿಫ್ರಾಯಪಟ್ಟಿದ್ದಾರೆ.

suddiyaana