‘ಕೋವಿಡ್ ಮಾನವ ನಿರ್ಮಿತ’? – ಅಮೆರಿಕ ವಿಜ್ಞಾನಿಯಿಂದ ಸ್ಪೋಟಕ ಮಾಹಿತಿ

‘ಕೋವಿಡ್ ಮಾನವ ನಿರ್ಮಿತ’? – ಅಮೆರಿಕ ವಿಜ್ಞಾನಿಯಿಂದ ಸ್ಪೋಟಕ ಮಾಹಿತಿ

ಕೊರೊನಾ ಮಹಾಮಾರಿ ಜಗತ್ತಿಗೆ ಅಪ್ಪಳಿಸಿ ಈಗಾಗಲೇ 3 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಈ ಜಗತ್ತನ್ನೇ ನಲುಗಿಸಿದ್ದ ಕೊರೊನಾ ವೈರಸ್ ಸೋರಿಕೆಯಾಗಿದ್ದು ಎಲ್ಲಿಂದ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಇದೀಗ ಅಮೆರಿಕದ ಮೂಲದ ವಿಜ್ಞಾನಿಯೊಬ್ಬರು  ಕೋವಿಡ್ -19 ವೈರಸ್ ಬಗ್ಗೆ ಸ್ಪೋಟಕ ವಿಚಾರ ಬಹಿರಂಗ ಪಡಿಸಿದ್ದಾರೆ.

ಕೊರೊನಾ ವೈರಸ್ ಯಾವುದೇ ಕಾರಣಕ್ಕೂ ನೈಸರ್ಗಿಕವಾಗಿ ತಾನಾಗಿ ಸೃಷ್ಟಿಯಾದ ವೈರಸ್ ಅಲ್ಲ. ಅದು ‘ಮಾನವ ನಿರ್ಮಿತ ವೈರಸ್’ ಎಂದು ಚೀನಾದ ವುಹಾನ್ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ದೃಢಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಬಳಿಕ ಕೆನಡಾದಲ್ಲಿ ಮತ್ತೊಂದು ವೈರಸ್ ಭೀತಿ?

ವುಹಾನ್‌ನಲ್ಲಿ ಇರುವ ವೈರಾಣು ಶಾಸ್ತ್ರದ ಸಂಶೋಧನಾ ಕೇಂದ್ರದ ಪ್ರಯೋಗಾಲಯದಿಂದ ಕೋವಿಡ್ ವೈರಾಣು ಸೋರಿಕೆಯಾಗಿದೆ. ಈ ಪ್ರಯೋಗಾಲಯವು ಚೀನಾದ ಸರ್ಕಾರಿ ಪ್ರಾಯೋಜಕತ್ವದ ಪ್ರಯೋಗಾಲಯವಾಗಿದೆ. 2 ವರ್ಷಗಳ ಹಿಂದೆಯೇ ಅಮೆರಿಕದ ನ್ಯೂಯಾರ್ಕ್‌ ಪೋಸ್ಟ್‌ನಲ್ಲಿ ಈ ಸಂಬಂಧ ವರದಿ ಬಂದಿತ್ತು. ಬ್ರಿಟನ್‌ನ ಪತ್ರಿಕೆ ದಿ ಸನ್‌ನ ವರದಿಯನ್ನು ಆಧರಿಸಿ ನ್ಯೂಯಾರ್ಕ್ ಪೋಸ್ಟ್‌ ಕೂಡಾ ವರದಿ ಮಾಡಿತ್ತು. ತನ್ನ ವರದಿಯಲ್ಲಿ ಅಮೆರಿಕ ಮೂಲದ ವಿಜ್ಞಾನಿ ಅಂಡ್ರ್ಯೂ ಹುಫ್ ಅವರ ಹೇಳಿಕೆಯನ್ನು ದಾಖಲಿಸಿತ್ತು ಎನ್ನಲಾಗಿದೆ.

ಇದೀಗ ಹುಫ್ ಅವರು ಈ ಕುರಿತಾಗಿ ಪುಸ್ತಕವೊಂದನ್ನು ಬರೆದಿದ್ದು, ಈ ಪುಸ್ತಕಕ್ಕೆ ‘ದಿ ಟ್ರೂತ್ ಅಬೌಟ್ ವುಹಾನ್’ (ವುಹಾನ್ ಕುರಿತ ಸತ್ಯ) ಎಂದು ಹೆಸರಿಡಲಾಗಿದೆ. ಸಾಂಕ್ರಾಮಿಕ ರೋಗ ತಜ್ಞರೂ ಆಗಿರುವ ಹುಫ್ ಅವರು ಕೋವಿಡ್ ಕುರಿತಾಗಿ ಸಮಗ್ರ ವಿವರಣೆ ನೀಡಿದ್ದಾರೆ. ಚೀನಾದಲ್ಲಿ ಅಮೆರಿಕ ಸರ್ಕಾರದ ಅನುದಾನದ ನೆರವಿನಿಂದ ಕೊರೊನಾ ವೈರಾಣುಗಳ ಬಗ್ಗೆ ಸಂಶೋಧನೆ ನಡೆಯುತ್ತಿತ್ತು. ಈ ಸಂಶೋಧನೆ ವೇಳೆ ವೈರಾಣು ಸೋರಿಕೆಯಾಗಿದೆ ಎಂದು ಅವರು ವಿವರಿಸಿದ್ದಾರೆ. ಹುಫ್ ಅವರ ಪುಸ್ತಕದ ಕೆಲವು ಪುಟಗಳನ್ನು ಬ್ರಿಟನ್‌ನ ಪ್ರಖ್ಯಾತ ಟ್ಯಾಬ್ಲಾಯ್ಡ್ ಪತ್ರಿಕೆ, ದಿ ಸನ್ ನಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ.

ತಮ್ಮ ಪುಸ್ತಕದಲ್ಲಿ ಹುಫ್ ಅವರು ಚೀನಾ ಸರ್ಕಾರದ ವಿರುದ್ಧ ಹಾಗೂ ವೈರಾಣು ತಜ್ಞರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವುಹಾನ್‌ನ ಪ್ರಯೋಗಾಲಯದಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳದೆ ಪರೀಕ್ಷೆಗಳನ್ನು ನಡೆಸುತ್ತಿದ್ದರು. ಈ ವೇಳೆ ವೈರಾಣು ಸೋರಿಕೆಯಾಗಿದೆ ಎಂದು ಹುಫ್‌ ಹೇಳಿದ್ದಾರೆ ಎಂಬ ವಿಚಾರ ನ್ಯೂಯಾರ್ಕ್ ಪೋಸ್ಟ್‌ನಲ್ಲಿ ವರದಿಯಾಗಿದೆ.

ವಿಶ್ವಾದ್ಯಂತ ಕೋವಿಡ್ ಹರಡಲು ಆರಂಭವಾದ ಬೆನ್ನಲ್ಲೇ ವುಹಾನ್‌ನತ್ತ ಎಲ್ಲರ ದೃಷ್ಟಿ ನೆಟ್ಟಿತ್ತು. ಎಲ್ಲರೂ ಚೀನಾ ಸರ್ಕಾರ ಹಾಗೂ ವುಹಾನ್ ಲ್ಯಾಬ್‌ ಅನ್ನು ದೋಷಿ ಎಂದು ಬೊಟ್ಟು ಮಾಡಿದ್ದರು. ಆದರೆ, ಚೀನಾ ದೇಶ ಹಾಗೂ ಅಲ್ಲಿನ ಕಮ್ಯುನಿಸ್ಟ್ ಸರ್ಕಾರವು ಇಂದಿಗೂ ಕೂಡಾ ವುಹಾನ್ ಲ್ಯಾಬ್‌ನಿಂದ ಕೊರೊನಾ ವೈರಾಣು ಸೋರಿಕೆಯಾಗಿಲ್ಲ ಎಂದೇ ವಿಶ್ವ ವೇದಿಕೆಯಲ್ಲಿ ವಾದಿಸುತ್ತಿದೆ.

suddiyaana