ಬಂಧನದಿಂದ ಪಾರಾಗಲು ಪ್ರಜ್ವಲ್ ರೇವಣ್ಣ ಮಾಡಿದ ಪ್ಲಾನ್ ಫೇಲ್! – ಅಮ್ಮ ಮಗನಿಗೆ ಮೇ.31 ಮಹತ್ವದ ದಿನ!

ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ಶುಕ್ರವಾರ ಬರುತ್ತೇನೆ ಅಂತಾ ಹೇಳಿದ್ದಾರೆ. ಈಗಾಗಲೇ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ವಿದೇಶದಿಂದ ಬೆಂಗಳೂರಿಗೆ ವಾಪಸ್ ಆಗುವ ಮೊದಲೇ ಇತ್ತ ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಆದ್ರೆ ಇದೀಗ ಪ್ರಜ್ವಲ್ ರೇವಣ್ಣಗೆ ಹಿನ್ನೆಡೆಯಾಗಿದೆ.
ಇದನ್ನೂ ಓದಿ: ಜೂನ್ 4ಕ್ಕೆ ಚುನಾವಣಾ ಫಲಿತಾಂಶ – ಮತ ಎಣಿಕೆ ದಿನದಂದು ರಜೆ ಇರುತ್ತಾ?
ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಅವರು ಮೇ 29 ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಕರಣದ ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ. ಆದ್ರೆ, ಇದಕ್ಕೆ ಎಸ್‌ಐಟಿ ಪರ ವಕೀಲರು ನಿರಾಕರಿಸಿದ್ದು, ಮೂರು ಪ್ರಕರಣಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಎಸ್ಐಟಿಗೆ ಸಮಯ ಬೇಕು ಎಂದಿದೆ. ಆದ್ರೆ, ಇತ್ತ ಕೋರ್ಟ್ ಶುಕ್ರವಾರವೇ (ಮೇ 30) ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ಮೇ.31 ಕ್ಕೆ ಮುಂದೂಡಿದೆ. ಇದರೊಂದಿಗೆ ಬಂಧನದಿಂದ ಪಾರಾಗಲು ಪ್ರಜ್ವಲ್ ರೇವಣ್ಣ ಮಾಡಿದ್ದ ಪ್ಲಾನ್ ಯಶಸ್ವಿಯಾಗಲಿಲ್ಲ. ಮತ್ತೊಂದೆಡೆ ಕಿಡ್ನ್ಯಾಪ್ ಪ್ರಕರಣದಲ್ಲಿ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಆದೇಶವನ್ನು ಕೋರ್ಟ್ ಮೇ 31ಕ್ಕೆ ಕಾಯ್ದಿರಿಸಿದೆ. ಹೀಗಾಗಿ ಮೇ 31 ತಾಯಿ ಮಗನಿಗೆ ಬಿಗ್ ಡೇ ಆಗಿದೆ.
ಸಿಐಡಿ ಠಾಣೆ ಕ್ರೈಮ್ ನಂ 20/2024, ಸೈಬರ್ ಕ್ರೈಮ್ ಠಾಣೆ ಕ್ರೈಮ್ ನಂ 2/2024, ಹೊಳೆನರಸೀಪುರ ಠಾಣೆ ಕ್ರೈಮ್ ನಂ.107/2024 ಈ ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ತಮ್ಮ ವಕೀಲರ ಮೂಲಕ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇನ್ನು ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆಯೇ ಎಸ್‌ಐಟಿ ಅಧಿಕಾರಿಗಳು ತಮ್ಮನ್ನು ಬಂಧಿಸುವುದು ಖಚಿತ ಎನ್ನುವುದು ತಿಳಿದ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರುತ್ತಲೇ ಬಂಧಿಸಬಾರದು ಎಂಬ ದೃಷ್ಟಿಯಿಂದ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ, ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿದೆ.
ಜರ್ಮನಿಯ ಲುಫ್ತಾನ್ಸಾ ಏರ್‌ಲೈನ್ಸ್ ಮೂಲಕ ಫ್ಲೈಟ್ ಟಿಕೆಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ, ಗುರುವಾರ ಮಧ್ಯಾಹ್ನ 12.05ಕ್ಕೆ ಮ್ಯೂನಿಚ್‌ನಲ್ಲಿ ಫ್ಲೈಟ್ ಹತ್ತಲಿದ್ದು, ಮಧ್ಯರಾತ್ರಿ 12.30ಕ್ಕೆ ಬೆಂಗಳೂರು ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ಆಗಮಿಸುತ್ತಲೇ ವಶಕ್ಕೆ ಪಡೆಯಲು ಎಸ್‌ಐಟಿ ಸಜ್ಜಾಗಿದ ಎಂದು ಈಗಾಗಲೇ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಹೀಗಾಗಿ ಬಂಧನದಿಂದ ಪಾರಾಗಲು ಪ್ರಜ್ವಲ್ ರೇವಣ್ಣ ಜಾಮೀನು ಪಡೆದುಕೊಳ್ಳಲು ಕೋರ್ಟ್ಗೆ ಮೊರೆ ಹೋಗಿದ್ದರು. ಆದ್ರೆ, ಕೋರ್ಟ್ ಜಾಮೀನು ಅರ್ಜಿಯನ್ನು ಮೇ 31ಕ್ಕೆ ಮುಂದೂಡಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆಯೇ ಬಂಧನ ಮಾಡುವುದು ಖಚಿತವಾಗಿದೆ.