ಸಿದ್ದು, ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ – ಪ್ರಮಾಣವಚನ ಬೋಧನೆಗೆ ಸಕಲ ಸಿದ್ಧತೆ

ಸಿದ್ದು, ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ – ಪ್ರಮಾಣವಚನ ಬೋಧನೆಗೆ ಸಕಲ ಸಿದ್ಧತೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ 12.30ಕ್ಕೆ ರಾಜ್ಯದ 31 ನೇ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆಗೆ 8 ಮಂದಿ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೊಟ್ ಇಬ್ಬರೂ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಸಮಾರಂಭದಲ್ಲಿ ಗಣ್ಯಾತಿಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸಿದ್ದು ಸಂಪುಟಕ್ಕೆ 8 ಮಂದಿ ಸಚಿವರ ಆಯ್ಕೆ – ಇಂದೇ ಪ್ರಮಾಣ ವಚನ

ಪ್ರಮಾಣವಚನ ಸಮಾರಂಭ ವೇಳೆ ವೇದಿಕೆ ಮೇಲೆ 30 ಗಣ್ಯರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮುಂಭಾಗ ಶಾಸಕರು, ಶಾಸಕರ ಕುಟುಂಬಸ್ಥರಿಗೆ ಅವಕಾಶ ನೀಡಲಾಗಿದೆ. ವಿವಿಐಪಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸ್ಟೇಡಿಯಂ ಮಧ್ಯಭಾಗದಲ್ಲಿ ಸುಮಾರು 40 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದ್ದು, ಸ್ಟೇಡಿಯಂ ಗ್ಯಾಲರಿಯಲ್ಲಿ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸ್ಟೇಡಿಯಂ ಒಳಭಾಗದಲ್ಲಿ ಹತ್ತು ಬೃಹತ್ ಎಲ್ಇಡಿ ಅಳವಡಿಸಲಾಗಿದ್ದು, ಸ್ಟೇಡಿಯಂ ಹೊರಗಡೆಯೂ ಎಲ್ಇಡಿ ಪರದೆ ಅಳವಡಿಕೆ ಮಾಡಲಾಗಿದೆ.

ಪ್ರಮಾಣವಚನ ಸಮಾರಂಭಕ್ಕೆ ಆಗಮಿಸುವವರ ವಾಹನ ನಿಲುಗಡೆಗೂ ವ್ಯವಸ್ಥೆ ಮಾಡಲಾಗಿದೆ. ಸೇಂಟ್ ಜೋಸೆಫ್ ಕಾಲೇಜು ಮೈದಾನದಲ್ಲಿ ಗಣ್ಯರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇತರೆ ವಾಹನ ಬಿಬಿಎಂಪಿ ಮುಖ್ಯ ಕಚೇರಿ ಆವರಣ, ಬಾದಾಮಿ ಹೌಸ್, ಯುನೈಟೆಡ್ ಮಿಷನ್ ಕಾಲೇಜು ಮೈದಾನದಲ್ಲಿ ನಿಲ್ಲಿಸಲು ಅವಕಾಶ ನೀಡಲಾಗಿದೆ. ಕಸ್ತೂರಬಾ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ ಹೇರಲಾಗಿದ್ದು, ಅರಮನೆ ಮೈದಾನದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸೂಚನೆ ನೀಡಲಾಗಿದೆ.

ಇನ್ನು ಮಧ್ಯಾಹ್ನ ವೇಳೆಗೆ ಕಂಠೀರವ ಕ್ರೀಡಾಂಗಣ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 2.30ರವರೆಗೆ ಕೆಲವು ರಸ್ತೆಗಳು ಬಂದ್ ಆಗಿರಲಿವೆ. ಕ್ವೀನ್ಸ್​ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

suddiyaana