ರಾಮ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ – ಉದ್ಘಾಟನೆ ದಿನ ಮೋದಿ ಸೇರಿ ಐವರಿಗೆ ಮಾತ್ರ ಗರ್ಭಗುಡಿ ಪ್ರವೇಶಕ್ಕೆ ಅವಕಾಶ!
ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಎಲ್ಲೆಲ್ಲೂ ಶ್ರೀರಾಮ ಜಪ ಆರಂಭವಾಗಿದೆ. ಜನವರಿ 22 ರಂದು ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದ್ದು, ಭರದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇಡೀ ಅಯೋಧ್ಯೆ ನಗರ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ದೇಶ, ವಿದೇಶಗಳಿಂದ ರಾಮಲಲ್ಲಾಗೆ ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸಲು ರಾಮ ಮಂದಿರ ಆಡಳಿತ ಮಂಡಳಿ ನಾನಾ ತಯಾರಿ ಮಾಡಿಕೊಳ್ಳುತ್ತಿದೆ. ರಾಮ ಮಂದಿರ ಪ್ರಾಣ ಪ್ರತಿಷ್ಠೆ ನಡೆಯುವ ದಿನ ಗರ್ಭಗುಡಿಗೆ ಐವರಿಗೆ ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅಯೋಧ್ಯೆಯ 84 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಬ್ಯಾನ್ ಮಾಡಿದ ಯೋಗಿ ಸರ್ಕಾರ!
ಹೌದು, ಜನವರಿ 22 ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ದಿನ ಜ.22ರಂದು ಗರ್ಭಗುಡಿಗೆ ಐವರಿಗೆ ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ರಾಜ್ಯ ಪಾಲೆ ಆನಂದಿ ಬೆನ್ ಪಟೇಲ್, ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ ವತ್, ಮಂದಿರದ ಮುಖ್ಯ ಅರ್ಚಕ ಈ ಸಂದರ್ಭದಲ್ಲಿ ಇರಲಿದ್ದಾರೆ. ಪ್ರಾಣ ಪ್ರತಿಷ್ಠೆ ನಡೆಯುವ ಸಂದರ್ಭದಲ್ಲಿ ಪರದೆಯನ್ನು ಹಾಕಲು ತೀರ್ಮಾನಿಸಲಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಈ ಐವರ ಸಮ್ಮುಖದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಗುವ ರಾಮ ಲಲ್ಲಾನ ವಿಗ್ರಹವನ್ನು ತೆರೆಯಲಾಗುತ್ತದೆ. ಧಾರ್ಮಿಕ ವಿಧಿ ವಿಧಾನಗಳ ಅನ್ವಯ ವಿಗ್ರಹಕ್ಕೆ ಮೊದಲು ಕನ್ನಡಿ ತೋರಿಸಲಾಗುತ್ತದೆ. ನಂತರ ಮೂವರು ಆಚಾರ್ಯರ ನೇತೃತ್ವದ ತಂಡ ದಾಲ್‌ಪೂಜೆಯನ್ನು ನಡೆಸಿಕೊಡಲಿದೆ. ಮೊದಲ ತಂಡದ ನೇತೃತ್ವವನ್ನು ಸ್ವಾಮಿ ಗೋವಿಂದ ದೇವ್ ಗಿರಿ, ಕಾಂಚಿ ಕಾಮಕೋಟಿ ಪೀಠದ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗಳು 2ನೇ ತಂಡವನ್ನು , ಕಾಶಿಯಲ್ಲಿರುವ 21 ಮಂದಿ ಧಾರ್ಮಿಕ ವಿದ್ವಾಂಸರ ತಂಡ ಮೂರನೇ ತಂಡ ನಡೆಸಿಕೊಡಲಿದೆ ಎಂದು ವರದಿಯಾಗಿದೆ.