ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್‌ ಶುರು – ಸಾಫ್ಟ್‌ ಲ್ಯಾಂಡಿಗ್‌ ಇಸ್ರೋ ಗುರಿ

ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್‌ ಶುರು – ಸಾಫ್ಟ್‌ ಲ್ಯಾಂಡಿಗ್‌ ಇಸ್ರೋ ಗುರಿ

ಶ್ರೀಹರಿಕೋಟಾ: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮಧ್ಯಾಹ್ನ 2:35 ಕ್ಕೆ ಲಾಂಚ್ ವೆಹಿಕಲ್ ಮಾರ್ಕ್-III  ಉಡಾವಣಾ ವಾಹನ ಮೂಲಕ ಚಂದ್ರಯಾನ ಉಡಾವಣೆ ಆಗಲಿದೆ.

ಚಂದ್ರನ ಮೇಲ್ಮೈ ಮೇಲೆ ಗಗನನೌಕೆ ಇಳಿಸಿ, ಅಧ್ಯಯನ ಕೈಗೊಳ್ಳುವ ಉದ್ದೇಶದ ಚಂದ್ರಯಾನ – 3 ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲ್ಯಾಂಡರ್‌ ( ವಿಕ್ರಮ್)‌ ಹಾಗೂ ರೋವರ್‌ (ಪ್ರಜ್ಞಾನ) ಹೊತ್ತ ರಾಕೆಟ್‌ ಶುಕ್ರವಾರ ಮಧ್ಯಾಹ್ನ ನಭಕ್ಕೆ ಚಿಮ್ಮಲಿದೆ. ಈಗಾಗಲೇ ಇಸ್ರೋ ವಿಜ್ಞಾನಿಗಳ ಸಿದ್ದತೆ ಪೂರ್ಣಗೊಳಿಸಿದೆ. ಚಂದ್ರಯಾನ-3 ಯೋಜನೆ ಚಂದ್ರಯಾನ-2ರ ಮುಂದುವರಿದ ಭಾಗವಾಗಿದೆ.  ಚಂದ್ರಯಾನ-2 ವೈಫಲ್ಯವನ್ನು ಗಮನದಲ್ಲಿಟ್ಟುಕೊಂಡು ಚಂದ್ರಯಾನ-3 ಯಶಸ್ಸಿಗೆ ಇಸ್ರೋ ಅಡಿಯಿಟ್ಟಿದೆ. ಈ ಬಾರಿ ವಿಜ್ಞಾನಿಗಳು ಸಾಫ್ಟ್ ಲ್ಯಾಂಡಿಗ್‌ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ. ಜು.14 ರ ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3 ಅನ್ನು ಎಲ್‌ವಿಎಂ3 ಮೂಲಕ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ.

ಇದನ್ನೂ ಓದಿ:‌ ಚಂದ್ರಯಾನ-3ಗೆ ಕ್ಷಣಗಣನೆ ಆರಂಭ – ನೌಕೆಯ ಮಾಡೆಲ್ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ವಿಜ್ಞಾನಿಗಳು!

ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ಗಗನನೌಕೆ ಇಳಿಸಲಾಗುವುದು. ಪ್ರೊಪಲ್ಷನ್‌ ಮಾಡ್ಯೂಲ್‌, ಲ್ಯಾಂಡರ್‌ ಮತ್ತು ರೋವರ್‌ ಕಾನ್ಫಿಗರೇಶನ್‌ ಅನ್ನು ಚಂದ್ರನ ಕಕ್ಷೆಯಲ್ಲಿ 100 ಕಿಮೀವರೆಗೆ ಸಾಗಿಸುತ್ತದೆ. ಚಂದ್ರಯಾನ-3 ಗಗನನೌಕೆಯನ್ನು ಇಳಿಸಲು ಚಂದ್ರನ ಮೇಲ್ಮೈನಲ್ಲಿ ಜಾಗವನ್ನು ಗುರುತಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಬಳಿಯ 4 ಕಿಮೀ ಉದ್ದ ಹಾಗೂ 2 ಕಿಮೀ ಅಗಲದ ಪ್ರದೇಶದಲ್ಲಿ ಗಗನನೌಕೆಯನ್ನು ಇಳಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ತಿಳಿಸಿದ್ದಾರೆ.

ಇನ್ನು ಚಂದ್ರಯಾನ-1 ಮತ್ತು 2ರಲ್ಲಿ ಇದ್ದಂತೆ ಚಂದ್ರಯಾನ-3ರಲ್ಲಿ ಆರ್ಬಿಟರ್‌ ಇರುವುದಿಲ್ಲ. ಲ್ಯಾಂಡರ್‌ ಮತ್ತು ರೋವರ್‌ ಹೊತ್ತ ಗಗನನೌಕೆಯು ಆಗಸ್ಟ್‌ 23 ರ ಸುಮಾರಿಗೆ ಚಂದ್ರನ ಕಕ್ಷೆಗೆ ತಲುಪಲಿದೆ. ನಂತರ 15 ದಿನಗಳಲ್ಲಿ ನೌಕೆ ಚಂದ್ರನಲ್ಲಿ ಇಳಿಯಲಿದೆ. ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈಯಲ್ಲಿ ಕಾರ್ಯನಿರ್ವಹಿಸಲು ಮತ್ತು ಡೇಟಾವನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ. ನೌಕೆ ಚಂದ್ರನಲ್ಲಿ ಇಳಿದಾಗ ಲ್ಯಾಂಡರ್‌ನಿಂದ ರೋವರ್ ಬೇರ್ಪಟ್ಟು ಪ್ರಯೋಗ ನಡೆಸಿ, ಡೇಟಾವನ್ನು ಸಂಗ್ರಹಿಸಲು ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತದೆ. ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್‌ ರಿಗೊಲಿತ್‌, ಅಲ್ಲಿ ಭೂಕಂಪನ ಅಧ್ಯಯನ ಮಾಡುವ ಲೂನಾರ್‌ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನ ನಡೆಸಲಾಗುವುದು ಎಂದು ವಿಜ್ಞಾನಿಗಳ ತಂಡ ತಿಳಿಸಿದೆ.

suddiyaana