ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ – ಆಧಾರ್ ಕಡ್ಡಾಯ, ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ!
ಎಲ್ಲೆಲ್ಲೂ ರಾಮನ ಜಪ ಶುರುವಾಗಿದೆ. ಕೋಟ್ಯಂತರ ಹಿಂದೂಗಳ ಆಶಯದಂತೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮನ ಜನ್ಮ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣವಾಗಿದೆ. ಜನವರಿ 22 ರಂದು ಅಯೋಧ್ಯಾ ರಾಮಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ (ಬಾಲ ರಾಮ) ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗಲಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜ. 22 ರಂದು ರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿದೆ. ಇದೀಗ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವಿಶೇಷ ಸೂಚನೆಗಳನ್ನು ಮಾಡಿದೆ.
ಇದನ್ನೂ ಓದಿ: ಶ್ರೀರಾಮನಿಗಾಗಿ ಸಿದ್ಧವಾಯ್ತು 108 ಅಡಿ ಉದ್ದದ ಊದುಬತ್ತಿ! – ಅಯೋಧ್ಯೆಯಲ್ಲಿ 48 ದಿನ ಪರಿಮಳ ಬೀರಲಿದೆ ವಿಶೇಷ ಅಗರಬತ್ತಿ!
ಹೌದು, ಜನವರಿ 22ರಂದು ನಡೆಯುವ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ಹಂಚಿಕೆ ಕಾರ್ಯ ಮುಂದುವರಿದಿದೆ. ಬಿಗಿ ಬಂದೋಬಸ್ತ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬರಬೇಕೆಂದು ಸಾಕಷ್ಟು ಮುಂಜಾಗ್ರತವಹಿಸಲಾಗುತ್ತಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಕಾರ್ಯಕ್ರಮಕ್ಕೆ ಆಗಮಿಸುವ ಸಾಧು ಸಂತರಿಗೆ, ಗಣ್ಯರಿಗೆ ವಿಶೇಷ ಮನವಿ ಮಾಡಿದ್ದಾರೆ. ಇದರಲ್ಲಿ ಅಯೋಧ್ಯೆಯಲ್ಲಿ ಕಾರ್ಯಕ್ರಮಕ್ಕೆ ಬರುವುದಾದರೆ, ಸೂಚನೆಗಳನ್ನು ಪಾಲಿಸುವಂತೆ ಟ್ರಸ್ಟ್ ಕೋರಿಕೊಂಡಿದೆ.
ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಸಾಧು ಸಂತರಿಗೆ, ಗಣ್ಯರಿಗೆ ನೀಡಿರುವ ಸೂಚನೆ ಹೀಗಿದೆ..
- ಸಾಧು ಸಂತರ ಬಳಿ ವಿನಮ್ರ ನಿವೇದನೆ
- ನಿಮ್ಮ ಆಧಾರ್ ಕಾರ್ಡ್ ನಿಮ್ಮ ಜೊತೆ ಇರಲಿ.
- ಭದ್ರತಾ ಕಾರಣಗಳಿಗಾಗಿ ಮೊಬೈಲ್, ಪರ್ಸ್, ಬ್ಯಾಗ್, ಛತ್ರಿ, ಸಿಂಹಾಸನ, ವೈಯಕ್ತಿಕ ಪೂಜೆ ಸಾಮಗ್ರಿ ಅಥವಾ ಗುರಪಾದುಕೆಯನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕೊಂಡೊಯ್ಯುವಂತಿಲ್ಲ.
- ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬೆಳಗ್ಗೆ 11.00 ಗಂಟೆ ಮೊದಲು ಪ್ರವೇಶಿಸಿ.
- ಕಾರ್ಯಕ್ರಮ 3 ಗಂಟೆಗೂ ಅಧಿಕ ಕಾಲ ನಡೆಯಬಹುದು. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಲು ಮತ್ತು ವಾಪಸ್ ಬರಲು ಸುಮಾರು 1 ಕಿಲೋಮೀಟರ್ ನಡೆಯಬೇಕು.
- ಇದು ವೈಯಕ್ತಿಕ ಆಮಂತ್ರಣ. ಒಂದು ಆಮಂತ್ರಣ ಪತ್ರಿಕೆ ಮೂಲಕ ಒಬ್ಬರಿಗೆ ಮಾತ್ರ ಪ್ರವೇಶ.
- ನಿಮ್ಮ ಸಹಾಯಿಗಳು, ಶಿಷ್ಯಂದಿರು ನಿಮ್ಮ ಜೊತೆ ಬಂದರೂ ಅವರು ಕಾರ್ಯಕ್ರಮ ನಡೆಯುವ ಸ್ಥಳದಿಂದ ಹೊರಗೆ ಉಳಿಯಬೇಕು. ಶಿಷ್ಯಂದಿರು ಅಥವಾ ಸೇವಕರಿಗೆ ಪ್ರತ್ಯೇಕ ಆಮಂತ್ರಣ ಪತ್ರ ನೀಡುವುದಿಲ್ಲ.
- ಯಾವುದೇ ಸಂತರು, ಸ್ವಾಮಿಗಳ ಜೊತೆ ಭದ್ರತಾ ಸಿಬ್ಬಂದಿ ಇದ್ದರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಅವರಿಗೆ ಪ್ರವೇಶವಿಲ್ಲ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಪಾಲ್ಗೊಳ್ಳುವುದರಿಂದ ಈ ಸ್ಥಳ ಮೊದಲೇ ಸುರಕ್ಷಿತವಾಗಿರುತ್ತದೆ.
- ಪ್ರಧಾನ ಮಂತ್ರಿ ಮಂದಿರದಿಂದ ವಾಪಸ್ ಹೋದ ಬಳಿಕವಷ್ಟೇ, ಮಂದಿರದಲ್ಲಿ ವಿರಾಜಮಾನವಾಗಿರುವ ಸಂತ ಮಹಾಪುರುಷ ರಾಮಲಲ್ಲಾನ ದರ್ಶನ ಪಡೆಯಬಹುದು.