ನಾಳೆ ಏರ್ ಶೋಗೆ ಪ್ರಧಾನಿ ಮೋದಿ ಚಾಲನೆ – ಯುದ್ಧವಿಮಾನಗಳ ಶಕ್ತಿಪ್ರದರ್ಶನಕ್ಕೆ ಹೇಗಿದೆ ಸಿದ್ಧತೆ..!?
ಬಾನಂಗಳದಲ್ಲಿ ಲೋಹದ ಹಕ್ಕಿಗಳ ಸಾಹಸ ಪ್ರದರ್ಶನಕ್ಕೆ ಕೌಂಟ್ಡೌನ್ ಶುರುವಾಗಿದೆ. ಬೆಂಗಳೂರಿನಲ್ಲಿ 14ನೇ ಆವೃತ್ತಿಯ ಏರ್ಶೋ-2023ಕ್ಕಾಗಿ ಜನ ಕಾತರದಿಂದ ಕಾಯ್ತಿದ್ದಾರೆ. ಫೆ.13ರಿಂದ ಫೆ.17ರ ವರೆಗೆ ಏರ್ ಶೋ ನಡೆಯಲಿದೆ. ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ ಉದ್ಘಾಟನೆ ಮಾಡಲು ನಾಳೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಇದನ್ನೂ ಓದಿ : ಅಯ್ಯಯ್ಯೋ ಹೊರಗೆ ಬರೋಕೆ ಆಗ್ತಿಲ್ಲ – ಬಾಗಿಲಲ್ಲಿ ಸಿಲುಕಿ ಗಜರಾಜನ ಒದ್ದಾಟ
ದೇಶದಲ್ಲಿ ಈವರೆಗೆ ನಡೆದ ವೈಮಾನಿಕ ಪ್ರದರ್ಶನಗಳಲ್ಲೇ ಈ ಬಾರಿಯ ಏರ್ ಶೋ ಅತ್ಯಂತ ದೊಡ್ಡ ಪ್ರದರ್ಶನ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಕೋವಿಡ್ ತೀವ್ರವಾಗಿದ್ದ ಕಾಲದಲ್ಲಿ 2021ರಲ್ಲಿ ನಡೆದಿದ್ದ ಪ್ರದರ್ಶನಕ್ಕೆ ವಿದೇಶಿ ಕಂಪನಿಗಳ ಪ್ರತಿಕ್ರಿಯೆ ನೀರಸವಾಗಿತ್ತು. ಆದರೆ, ಈ ಬಾರಿ ದೇಶೀಯ ಸಂಸ್ಥೆಗಳು, ವಿದೇಶಿ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಪ್ರದರ್ಶನದಲ್ಲಿ ಭಾಗಿಯಾಗುತ್ತಿವೆ.
ಭಾರತದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ದ್ವಿಪಕ್ಷೀಯ ಬೆಂಬಲ ನೀಡುವ ದಿಸೆಯಲ್ಲಿ ಅಮೆರಿಕದ ವಾಯುಪಡೆಯ ಏಳು ಸದಸ್ಯರ ಬ್ಯಾಂಡ್ ‘ಫೈನಲ್ ಅಪ್ರೋಚ್’ ಫೆಬ್ರವರಿ 16ರಂದು ಏರೋ ಇಂಡಿಯಾದಲ್ಲಿ ಸಾರ್ವಜನಿಕರಿಗಾಗಿ ಹಾಗೂ ಇಡೀ ವಾರ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದೆ.
ಏರೋ ಇಂಡಿಯಾದಲ್ಲಿ ಹಲವು ದೇಶಗಳು ಅಲ್ಲಿನ ವೈಮಾನಿಕ ಉತ್ಪಾದಕ ಸಂಸ್ಥೆಗಳು ಭಾಗಿಯಾಗುತ್ತವೆ. ಈ ಬಾರಿ ವಿಶೇಷವಾಗಿ ಅಮೆರಿಕದ ಅತಿ ದೊಡ್ಡ ನಿಯೋಗ ಆಗಮಿಸುತ್ತಿದೆ. ಇದರಿಂದ ಅಮೆರಿಕ-ಭಾರತ ಸೇನಾ ಪಾಲುದಾರಿಕೆಯನ್ನು ಬಲಪಡಿಸುತ್ತದೆ. ಮಾತ್ರವಲ್ಲದೇ ಇಂಡೋ ಪೆಸಿಫಿಕ್ ಭಾಗದ ಸುರಕ್ಷತೆಗಾಗಿ ಆದ್ಯತೆ ಸಿಗಲಿದೆ. ಅಮೆರಿಕಾ ಸೇನೆಯು ಕೂಡಾ ಪ್ರದರ್ಶನ ನೀಡುತ್ತಿದ್ದು, ಈ ಪ್ರದರ್ಶನ ಅಮೆರಿಕ ಸೇನೆಯ ಯುದ್ಧ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಲಿದೆ.
ಭಾರತದಲ್ಲಿನ ಯು.ಎಸ್. ಮಿಷನ್‌ನ ಚಾರ್ಜೆ ಡಿ ಅಫೇರ್ಸ್ ಅಂಬಾಸೆಡರ್ ಎಲಿಜಬೆತ್ ಜೋನ್ಸ್ ಅವರು ಸ್ವತಃ ಭಾಗವಹಿಸುತ್ತಿದ್ದಾರೆ. ಮಾತ್ರವಲ್ಲದೇ, ನಿಯೋಗವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಬಲಿಷ್ಠ ಅಮೆರಿಕದ ಸೇನಾ ಪಡೆಯ ಅತ್ಯಾಧುನಿಕ ವಿಮಾನಗಳು ಪ್ರದರ್ಶನದಲ್ಲಿ ಹಾರಾಟ ನಡೆಸಲಿವೆ. ಸೇನಾ ಉತ್ಪನ್ನಗಳು ಪ್ರದರ್ಶನವಾಗಲಿವೆ. ಜತೆಗೆ ಸೇನೆಯ ವಿವಿಧ ವಿಭಾಗಗಳ ಸಿಬ್ಬಂದಿ ಸಂಗೀತ ಕಾರ್ಯಕ್ರಮಗಳ ಮೂಲಕ ರಂಜಿಸಲಿದ್ದಾರೆ.
ಯಲಹಂಕ ವಾಯುನೆಲೆಯಲ್ಲಿ ಫೆ.13ರಿಂದ 17ರವರೆಗೆ ಏರ್ ಶೋ ನಡೆಯಲಿದ್ದು, ಟಿಕೆಟ್ ದರಗಳು 2021ರ ಆವೃತ್ತಿಯನ್ನು ಹೋಲುತ್ತವೆ. ಏರ್ ಶೋನ ಮೊದಲ 3 ದಿನಗಳ ವಾಣಿಜ್ಯ ಪಾಸ್‌ಗಳಿಗೆ ಭಾರತೀಯ ಪ್ರಜೆಗಳಿಗೆ 5 ಸಾವಿರ ರೂ. ಮತ್ತು ವಿದೇಶಿ ಪ್ರಜೆಗಳಿಗೆ 150 ಡಾಲರ್ ದರ ನಿಗದಿಪಡಿಸಲಾಗಿದೆ. ಫೆ. 16 ಮತ್ತು 17ರಂದು ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪಾಸ್‌ಗಳಿಗೆ ಭಾರತೀಯರಿಗೆ 2,500 ರೂ. ಮತ್ತು ವಿದೇಶಿ ಪ್ರಜೆಗಳಿಗೆ 50 ಡಾಲರ್ ದರ ನಿಗದಿ ಮಾಡಲಾಗಿದೆ.
ಫೆ.14ರಿಂದ 17ರವರೆಗೆ ಸಾಮಾನ್ಯ ಪಾಸ್‌ಗಳು ಏರ್ ಶೋ ಮತ್ತು ಪ್ರದರ್ಶನದ ಪ್ರದೇಶಕ್ಕೆ (ಎಡಿವಿಎ-ಅಡ್ವಾ) ತೆರಳಲು ಅವಕಾಶ ಒದಗಿಸುತ್ತವೆ. ಕೇವಲ ಏರ್ ಡಿಸ್‌ಪ್ಲೇ ವೀಕ್ಷಣಾ ಪ್ರದೇಶದ ಪಾಸ್‌ಗೆ ಭಾರತೀಯರಿಗೆ 1 ಸಾವಿರ ರೂ. ಮತ್ತು ವಿದೇಶಿ ಪ್ರಜೆಗಳಿಗೆ 50 ಡಾಲರ್ ನಿಗದಿ ಮಾಡಲಾಗಿದೆ. 2022ರ ಡಿ.31ಕ್ಕೂ ಮುನ್ನ ಟಿಕೆಟ್ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ರಿಯಾಯಿತಿ ನೀಡಲಾಗಿದೆ. ಹಿಂದಿನ ಆವೃತ್ತಿಯಲ್ಲಿಈ ಟಿಕೆಟ್‌ಗಳ ದರ ಭಾರತೀಯರಿಗೆ 1 ಸಾವಿರ ರೂ. ಮತ್ತು ವಿದೇಶಿಯರಿಗೆ 40 ಡಾಲರ್ ಇತ್ತು.
ಆಸಕ್ತರು https://www.aeroindia.gov.in/ ವೆಬ್‌ಸೈಟ್ ವಿಳಾಸದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬಹುದು. ಹಣ ಪಾವತಿಸಿದ ನಂತರ ಟಿಕೆಟ್ ಅವರ ಇ-ಮೇಲ್ ವಿಳಾಸಕ್ಕೆ ರವಾನೆಯಾಗುತ್ತದೆ. ಬಳಿಕ ಇ-ಮೇಲ್‌ನಲ್ಲಿ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಬಾರಿ 12 ವರ್ಷ ವಯೋಮಾನಕ್ಕಿಂತ ಕೆಳಗಿನವರಿಗೆ ಏರ್ ಶೋಗೆ ಪ್ರವೇಶ ನಿರ್ಬಂಧಿಸಲಾಗಿದೆ. ಏರ್ ಶೋ ಸ್ಥಳದಲ್ಲಿ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಗಿದೆ.