ಅಗ್ನಿಸಾಕ್ಷಿ ಆರಂಭಕ್ಕೆ ಕೌಂಟ್‌ಡೌನ್ ಶುರು – ಶಮಂತ್ ಬ್ರೋ ಗೌಡಗೆ ವರ್ಷಿಣಿ ಗೌಡ ನಾಯಕಿ

ಕನ್ನಡ ಕಿರುತೆರೆಯಲ್ಲಿತುಂಬಾ ಜನಪ್ರಿಯವಾಗಿದ್ದ ಧಾರಾವಾಹಿ ಅಂದರೆ ಅದು ಅಗ್ನಿಸಾಕ್ಷಿ. ಈ ಧಾರಾವಾಹಿ ಬರೋಬ್ಬರಿ 7 ವರ್ಷಗಳ ಕಾಲ ಪ್ರಸಾರವಾಗಿತ್ತು. ವಿಜಯ್ ಸೂರ್ಯ, ವೈಷ್ಣವಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅಗ್ನಿಸಾಕ್ಷಿ ಧಾರಾವಾಹಿ ಮತ್ತೆ ಪ್ರಸಾರವಾಗಲಿದೆ. ಆದರೆ, ಅದೇ ಧಾರಾವಾಹಿಯಲ್ಲ. ಬೇರೆ ಕಥೆ. ಬೇರೆ ಪಾತ್ರಧಾರಿಗಳು.
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಹೆಸರಿನಲ್ಲಿ ಧಾರಾವಾಹಿಯೊಂದು ಆರಂಭವಾಗಲಿದೆ. ಧಾರಾವಾಹಿಯ ಪ್ರೊಮೋ ರಿಲೀಸ್ ಆಗಿದೆ. ಅವನು ಅಹಂಕಾರದ ಅಗ್ನಿಪರ್ವತ.. ಅವಳು ಸ್ವಾಭಿಮಾನದ ಚಂಡಮಾರುತ.. ಇವರಿಬ್ಬರ ಮುಖಾಮುಖಿಯೇ ಒಂದು ‘ಸಮರ’ ಪ್ರೇಮಕತೆ ಎನ್ನುವ ಟ್ಯಾಗ್ ಲೈನ್ ಜೊತೆಗೆ ಇದೀಗ ಕಲರ್ಸ್ ಕನ್ನಡ ವಾಹಿನಿಯು ಪ್ರೊಮೋ ರಿಲೀಸ್ ಮಾಡಿದೆ. ಕಥೆಯಲ್ಲಿ ನಾಯಕನು ಅಹಂಕಾರಿಯಾಗಿರುವ ಶ್ರೀಮಂತ ಉದ್ಯಮಿಯಾಗಿದ್ದು, ನಾಯಕಿ ಸಿಂಪಲ್ ಆಗಿರುವ ಆದರೆ ಸ್ವಾಭಿಮಾನಿಯಾಗಿರುವ ಹುಡುಗಿಯಾಗಿರುತ್ತಾಳೆ. ಇವರಿಬ್ಬರು ಜೊತೆಯಾದರೆ ಹೇಗಿರಲಿದೆ ಜರ್ನಿ ಅನ್ನೋದು ಸೀರಿಯಲ್ ಕಥೆ.
ನಾಯಕ ಡಿಫೆಂಡರ್ ಕಾರಲ್ಲಿ ಬರುತ್ತಿರುತ್ತಾರೆ. ಹೊರಗಡೆ ಜೋರಾಗಿ ಮಳೆ ಬರುತ್ತಿರುತ್ತದೆ. ಕಾರಿಂದ ಹೊರಗಿಳಿಯುವ ನಾಯಕ, ಅಲ್ಲೇ ಪಕ್ಕದಲ್ಲಿ ಹೋಗುತ್ತಿದ್ದ ನಾಯಕಿಯ ಛತ್ರಿ ಕಿತ್ತುಕೊಂಡು ಆಫೀಸ್ ಒಳಗೆ ಕಾಲಿಡುತ್ತಾನೆ. ಇದರಿಂದ ಸಿಟ್ಟಿಗೇಳುವ ಸ್ವಾಭಿಮಾನಿ ನಾಯಕಿ, ಆಫೀಸ್ ಒಳಗೆ ಬಂದು ಧಿಮಾಕಿನ ಮನುಷ್ಯನಿಗೆ ಚೆನ್ನಾಗಿ ಬೈಗುಳಗಳ ಸುರಿಮಳೆ ಸುರಿಸುತ್ತಾಳೆ. ಇದರಿಂದ ಕೋಪಗೊಳ್ಳುವ ನಾಯಕ ಆಕೆಯ ಕೈಗೆ ಎರಡು ನೋಟುಗಳ ಕಂತನ್ನು ಕೊಟ್ಟು, ನಿನ್ನ ಛತ್ರಿ ತೆಗೆದುಕೊಂಡಿದ್ದಕ್ಕೆ, ಬಟ್ಟೆ ಒದ್ದೆ ಮಾಡಿಕೊಂಡಿದ್ದಕ್ಕೆ ಸರಿಯಾಯ್ತು. ಇನ್ನು ಮುಂದೆ ನನ್ನ ಕಣ್ಣ ಮುಂದೆ ಕಾಣಿಸಿಕೊಳ್ಳಬೇಡ, ಹೊರಟು ಹೋಗು ಎನ್ನುತ್ತಾನೆ. ನಾಯಕಿ ಹಣವನ್ನು ವಾಪಾಸ್ ಅವನ ಕೈಗೆ ಕೊಡುತ್ತಾ, ಮತ್ತೆ 100 ರೂಪಾಯಿ ಎಕ್ಸ್ಟ್ರಾ ಕೊಟ್ಟು ಛತ್ರಿ ತೆಗೆದುಕೊಳ್ಳುವಂತೆ ಹೇಳುತ್ತಾಳೆ. ಕೊನೆಗೆ ಆತನ ಮುಖಕ್ಕೆ ನೀರು ಹಾಕಿ, ನೀರು ಅಗ್ನಿಪರ್ವತ ಆದರೆ, ನಿನ್ನನ್ನು ತಣಿಸೋ ಪ್ರವಾಹ ನಾನು ಎನ್ನುತ್ತಾಳೆ. ಮುಂದೆ ಇವರಿಬ್ಬರ ನಡುವೆ ಹೇಗೆ ಪ್ರೀತಿ ಶುರುವಾಗಲಿದೆ ಎನ್ನುವುದು ಕಥೆ.
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಶಮಂತ್ ಬ್ರೋ ಗೌಡ ಮತ್ತು ವರ್ಷಿಣಿ ಗೌಡ ಅಭಿನಯಿಸುತ್ತಿದ್ದಾರೆ. ಶಮಂತ್ ಬ್ರೋ ಗೌಡ, ‘ಬಿಗ್ ಬಾಸ್’ ಸೀಸನ್ 8ರಲ್ಲಿ ಸ್ಪರ್ಧಿಸಿದ್ದರು. ಆ ಬಳಿಕ ‘ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದರು. ಮದುವೆ ನಂತರ ಸಣ್ಣ ಬ್ರೇಕ್ ತೆಗೆದುಕೊಂಡಿದ್ದ ಶಮಂತ್, ಈಗ ಅಗ್ನಿಸಾಕ್ಷಿ ಮೂಲಕ ಮತ್ತೆ ಮರಳಿದ್ದಾರೆ. ಇನ್ನು, ವರ್ಷಿಣಿ ಗೌಡ ‘ಜಯಂ’ ಎನ್ನುವ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು.

ನೋಡಿರಿ

