ಕಿಲ್ಲರ್‌ ಕಾಫ್‌ ಸಿರಪ್‌ಗೆ ಒಟ್ಟು 20 ಬಲಿ – ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಗೈಡ್‌ಲೈನ್ಸ್

ಕಿಲ್ಲರ್‌ ಕಾಫ್‌ ಸಿರಪ್‌ಗೆ ಒಟ್ಟು 20 ಬಲಿ –  ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಗೈಡ್‌ಲೈನ್ಸ್

ಮಧ್ಯ ಪ್ರದೇಶದಲ್ಲಿ   ಮಾರಕ ಕೆಮ್ಮಿನ ಸಿರಪ್ಸೇ ವಿಸಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮತ್ತೆ 6 ಮಕ್ಕಳು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 20ಕ್ಕೇರಿದೆ. ಇದರ ಹಿನ್ನೆಲೆಯಲ್ಲಿ, ಕರ್ನಾಟಕ  ರಾಜ್ಯದಲ್ಲಿ ಕಾಫ್ ಸಿರಪ್‌ ಬಳಕೆ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ. ಮಕ್ಕಳ ಸುರಕ್ಷತೆಯನ್ನು ಕಾಪಾಡಲು ಪೋಷಕರು ಹಾಗೂ ಆರೈಕೆದಾರರು, ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕು.

ಈ ನಿಯಮಗಳ ಪಾಲನೆ ಕಡ್ಡಾಯ

1) 02 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮಿನ ಅಥವಾ ಶೀತದ ಸಿರಪ್ ನೀಡಬಾರದು.

2) 2 ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆಯ ನಂತರ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಈ ಔಷಧಗಳನ್ನು ನೀಡಬೇಕು.

3) 5 ವರ್ಷ ದಾಟಿದ ಮಕ್ಕಳಿಗೆ ವೈದ್ಯರ ಸಲಹೆಯಂತೆ ಸಿರಪ್ ಬಳಸಬೇಕು.

4) ಸಾಧ್ಯವಾದಷ್ಟೂ ಕಡಿಮೆ ಅವಧಿಗೆ ಕನಿಷ್ಠ ಡೋಸ್ಗಳನ್ನು ಬಳಸಬೇಕು.

5) ಬಹು ಔಷಧಗಳ ಸಂಯೋಜನೆ ಇರುವ ಸಿರಪ್ಗಳನ್ನು ಬಳಸಬಾರದು.

6) ಮಕ್ಕಳಿಗೆ ಸ್ವಯಂ ಔಷಧೋಪಚಾರ ಮಾಡಬಾರದು.

7) ವೈದ್ಯರ ಸೂಚನೆ ಇಲ್ಲದೇ ಕೆಮ್ಮಿನ ಔಷಧಿ ಖರೀದಿಸಬಾರದು, ಬಳಸಬಾರದು.

8) ಈ ಹಿಂದೆ ಬಳಸಿ ಉಳಿದ ಔಷಧಿಯನ್ನು ಮತ್ತೆ ಬಳಸಬಾರದು.

9) ವೈದ್ಯರಲ್ಲದವರು ಶಿಫಾರಸ್ಸು ಮಾಡಿದ ಔಷಧವನ್ನು ಬಳಸಬಾರದು.

10) ಅವಧಿ ಮುಗಿದ ಔಷಧವನ್ನು ತೆಗೆದುಕೊಳ್ಳಬಾರದು.

ಮಧ್ಯಪ್ರದೇಶ ಪೊಲೀಸರು ಚಿಂದ್ವಾರಾದ ಪರಾಸಿಯಾದಲ್ಲಿ ಅನೇಕ ಮಕ್ಕಳಿಗೆ ಔಷಧಿಯನ್ನು ಶಿಫಾರಸು ಮಾಡಿದ್ದಕ್ಕಾಗಿ ಸರ್ಕಾರಿ ಮಕ್ಕಳ ತಜ್ಞ ಪ್ರವೀಣ್ ಸೋನಿ ಅವರನ್ನು ಸಹ ಬಂಧಿಸಿದ್ದಾರೆ. ತಯಾರಕರ ವಿರುದ್ಧ ಪ್ರಕರಣ ದಾಖಲಿಸಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಶೋ ಎಪಿಸೋಡ್ ಎಷ್ಟು ರೆಡಿ ಇದೆ ಗೊತ್ತಾ? – ಆಮೇಲೆ ಬಿಗ್‌ಬಾಸ್ ಶೋ ಕಥೆಯೇನು?

ಸರೆಸನ್ ಫಾರ್ಮಾಸ್ಯುಟಿಕಲ್ ಮ್ಯಾನುಫ್ಯಾಕ್ಚರರ್ ಎಂಬ ಔಷಧ ತಯಾರಿಕಾ ಕಂಪನಿಯು ತಯಾರಿಸುತ್ತಿದ್ದ ಕೋಲ್ಡ್ರೀಫ್ ಕಾಫ್ ಸಿರಪ್ ಎನ್ನುವ ಔಷಧ ದುರಂತಕ್ಕೆ ಕಾರಣವಾಗಿದೆ.  ಈ ಕಂಪನಿಯು ತಯಾರಿಸಿದ ಕೋಲ್ಡ್ರಿಫ್ ಸಿರಪ್ ಎಂಬ ಮಕ್ಕಳ ಕೆಮ್ಮಿನ ಔಷಧವು ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ 14 ಮಕ್ಕಳ ಸಾವಿಗೆ ಕಾರಣವಾಗಿದೆ. ಈ ಘಟನೆ ಬೆಂಗಳೂರು-ಚೆನ್ನೈ ಹೆದ್ದಾರಿಯ ಹೊರವಲಯದಲ್ಲಿರುವ ಚೆನ್ನೈನ ಸರೆಸನ್ ಫಾರ್ಮಾಸ್ಯುಟಿಕಲ್ ಮ್ಯಾನುಫ್ಯಾಕ್ಚರರ್ ಘಟಕದಲ್ಲಿ ನಡೆದಿದೆ. ಇಲ್ಲಿನ ಅವ್ಯವಸ್ಥೆ, ಅಶುಚಿತ್ವ ಮತ್ತು ನಿಯಮಗಳ ಉಲ್ಲಂಘನೆಗಳು ಈ ದುರಂತಕ್ಕೆ ಕಾರಣವಾಗಿವೆ.

ತಮಿಳುನಾಡು ಡ್ರಗ್ಸ್ ಕಂಟ್ರೋಲ್ ಡಿಪಾರ್ಟ್ಮೆಂಟ್ ಕಂಪನಿಯ ಮಾಲೀಕ ಡಾ. ಜಿ. ರಂಗನಾಥನ್ ಮತ್ತು ಕಂಪನಿಯ ವಿಶ್ಲೇಷಣಾತ್ಮಕ ರಸಾಯನಶಾಸ್ತ್ರಜ್ಞ ಕೆ. ಮಹೇಶ್ವರಿ ಅವರಿಗೆ ಎರಡು ಪ್ರತ್ಯೇಕ ಶೋ-ಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ. ಕಂಪನಿಯು ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್, 1940 ರ ಅಡಿಯಲ್ಲಿ ಗಂಭೀರ ಉಲ್ಲಂಘನೆಗಳನ್ನು ಮಾಡಿದೆ ಎಂದು ಆರೋಪಿಸಲಾಗಿದೆ. ಕಂಪನಿಯು ಏಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಕಾರಣ ನೀಡಬೇಕೆಂದು ನೋಟಿಸ್ ಆದೇಶಿಸಿತು. ಕಂಪನಿಯು ತನ್ನ ಎಲ್ಲಾ ದಾಸ್ತಾನನ್ನು ಹಿಂಪಡೆಯಬೇಕು, ಸಂಪೂರ್ಣ ವಿತರಣಾ ದಾಖಲೆಗಳನ್ನು ಸಲ್ಲಿಸಬೇಕು, ಮತ್ತು ಪ್ರೊಪಿಲೀನ್ ಗ್ಲೈಕೋಲ್‌ನಂತಹ ಕಚ್ಚಾ ವಸ್ತುಗಳ ಖರೀದಿ ಇನ್‌ವಾಯ್ಸ್‌ಗಳಿಂದ ಮಾಸ್ಟರ್ ಫಾರ್ಮುಲಾ ರೆಕಾರ್ಡ್‌ಗಳವರೆಗೆ ಎಲ್ಲಾ ದಾಖಲೆಗಳನ್ನು ಒದಗಿಸಬೇಕು ಎಂದೂ ತಿಳಿಸಲಾಗಿದೆ.

Kishor KV