ದೇಶದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಆರ್ಭಟ – 9 ದಿನಗಳಲ್ಲಿ ಕೋವಿಡ್ ಪ್ರಕರಣ ದ್ವಿಗುಣ

ದೇಶದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಆರ್ಭಟ – 9 ದಿನಗಳಲ್ಲಿ ಕೋವಿಡ್ ಪ್ರಕರಣ ದ್ವಿಗುಣ

ಕೊಂಚಕಾಲ ಸೈಲೆಂಟ್ ಆಗಿದ್ದ ಕೊರೊನಾ ಮಹಾಮಾರಿ ಮತ್ತೆ ವಕ್ಕರಿಸಿದೆ. ಕೊರೊನಾ ಹೊಸ ಉಪತಳಿ ‘ಜೆನ್‌.1’ ಶರವೇಗವಾಗಿ ಹಬ್ಬುತ್ತಿದೆ. ದೇಶದಾದ್ಯಂತ ಕೋವಿಡ್ ಪಾಸಿಟಿವ್ ಕೇಸ್ ದಿನೇ ದಿನೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ರಾಜ್ಯಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಹಿಂದಿನ 24 ಗಂಟೆಗಳ ಅವಧಿಯಲ್ಲಿ ಕೇರಳದಲ್ಲಿ 115 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ನಂತರ ರಾಜ್ಯದಲ್ಲಿ ರೋಗಿಗಳ ಸಂಖ್ಯೆ 1,749 ಕ್ಕೆ ಏರಿದೆ. ಮಹಾರಾಷ್ಟ್ರ, ಗೋವಾ, ಉತ್ತರ ಪ್ರದೇಶದಲ್ಲೂ ಕೋವಿಡ್ ಪ್ರಕರಣಗಳು ವರದಿಯಾಗಿವೆ, ಮಹಾರಾಷ್ಟ್ರದಲ್ಲಿ ಜೆಎನ್.1 ರ 18 ಮತ್ತು ಗೋವಾದಲ್ಲಿ 18 ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1970ಕ್ಕೆ ತಲುಪಿದೆ. ಕಳೆದ 9 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ಎಲ್ಲಾ ರಾಜ್ಯಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: ತಮಿಳುನಾಡಲ್ಲಿ ಮಳೆಯ ಆರ್ಭಟಕ್ಕೆ 10 ಮಂದಿ ಸಾವು – 17 ಸಾವಿರಕ್ಕೂ ಅಧಿಕ ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ಈ ಸಭೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ. ಇದರಲ್ಲಿ ಆರೋಗ್ಯ ಸಚಿವರು ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಸೇರಿದಂತೆ ಅನೇಕ ಜನರು ಭಾಗವಹಿಸಲಿದ್ದಾರೆ. ಆರೋಗ್ಯ ಸೌಲಭ್ಯಗಳು ಮತ್ತು ಸನ್ನದ್ಧತೆ ಹಾಗೂ ಸೋಂಕು ತಡೆಗಟ್ಟುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಇನ್ನು ಕೇರಳ ರಾಜ್ಯ ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಕೇರಳದ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಜನರು ಆತಂಕ ಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ. ಸೋಂಕು ತಡೆಗೆ ಆರೋಗ್ಯ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ. ಸೋಂಕಿನ ಲಕ್ಷಣಗಳನ್ನು ತೋರಿಸುವ ಜನರನ್ನು ಪರೀಕ್ಷಿಸಲು ಮತ್ತು ಅವರ ಮಾದರಿಗಳನ್ನು ಜೀನೋಮಿಕ್ ಪರೀಕ್ಷೆಗೆ ಕಳುಹಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ದೆಹಲಿಯಲ್ಲಿ ಮಾಸ್ಕ್ ಧರಿಸಲು, ಜನಸಂದಣಿಯನ್ನು ತಪ್ಪಿಸಲು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಲು ಜನರಿಗೆ ವೈದ್ಯರು ಸಲಹೆ ನೀಡಿದ್ದಾರೆ.

ಕೊರೊನಾ ಜೆಎನ್​1 ರೂಪಾಂತರದ ಮೊದಲ ಪ್ರಕರಣವು ಡಿಸೆಂಬರ್ 8 ರಂದು ಕೇರಳದಲ್ಲಿ ಕಂಡುಬಂದಿತ್ತು. 79 ವರ್ಷದ ಮಹಿಳೆಯಲ್ಲಿ ಈ ಸೋಂಕು ಪತ್ತೆಯಾಗಿತ್ತು. ಮತ್ತೊಂದೆಡೆ, ವಿದೇಶದಲ್ಲಿಯೂ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವರದಿಯಾಗಿದೆ. ಸಿಂಗಾಪುರದಲ್ಲಿ ಒಂದು ವಾರದಲ್ಲಿ 56 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.

 

Shwetha M