ಕರ್ನಾಟಕದಲ್ಲಿ ಕೊರೊನಾ ಕಟ್ಟೆಚ್ಚರ! – 60 ವರ್ಷ ಮೇಲ್ಪಟ್ಟವರಿಗೆ ಇನ್ಮುಂದೆ ಮಾಸ್ಕ್ ಕಡ್ಡಾಯ

ಕರ್ನಾಟಕದಲ್ಲಿ ಕೊರೊನಾ ಕಟ್ಟೆಚ್ಚರ! – 60 ವರ್ಷ ಮೇಲ್ಪಟ್ಟವರಿಗೆ ಇನ್ಮುಂದೆ ಮಾಸ್ಕ್ ಕಡ್ಡಾಯ

ಕಳೆದ ಎರಡು ವರ್ಷಗಳಿಂದ ಕೊರೊನಾ ಪರಿಸ್ಥಿತಿಯಿಂದ ಹೊರಬಂದಿರುವ ಜನರಿಗೆ ಮತ್ತೆ ಕೋವಿಡ್‌ 19 ಆತಂಕ ಎದುರಾಗಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಸಂಪೂರ್ಣ ಕಡಿಮೆಯಾಗಿ ಜನ ಕೊರೊನಾ ಸಾಂಕ್ರಾಮಿಕ ರೋಗವನ್ನು ಮರೆತ್ತಿದ್ದರು. ಆದರೆ ಇದೀಗ ಹೊಸ ವರ್ಷದ ಆಚರಣೆ ಹೊಸ್ತಿಲಲ್ಲೇ ಕೋವಿಡ್ ಆತಂಕ ಹೆಚ್ಚಾಗಿದೆ.

ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದು ರಾಜ್ಯದ ಗಡಿಭಾಗದಲ್ಲೂ ಆತಂಕ ಹೆಚ್ಚಾಗಿದೆ. ಕೇರಳದಲ್ಲಿ ಕಳೆದ ನವೆಂಬರ್ ಇಡೀ ತಿಂಗಳಲ್ಲಿ ಒಟ್ಟು 479 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಓರ್ವ ಸೋಂಕಿತ ಮೃತಪಟ್ಟಿದ್ದಾರೆ. ಆದರೆ ಡಿಸೆಂಬರ್ ತಿಂಗಳ ಮೊದಲ ಎರಡು ವಾರಗಳಲ್ಲಿ ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಕೊರೊನಾ ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲೂ ಕೊರೊನಾ ಪಾಸಿಟಿವ್‌ ಕೇಸ್‌ ಪತ್ತೆಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ  ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಕೋವಿಡ್‌ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಸೋಮವಾರದಿಂದ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಮೈಕೈ ನೋವು ಜಾಸ್ತಿಯಾಗುತ್ತಾ? – ಕೀಲುಗಳ‌ ನೋವಿಗೆ ಈ ದ್ರವ ಕಾರಣ!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕೊರೊನಾ  ರೂಪಾಂತರಿ ಬಗ್ಗೆ ಯಾರೂ ಕೂಡ ಆತಂಕಪಡಬೇಕಿಲ್ಲ. ಆದರೆ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಸೋಮವಾರದಿಂದಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ ಎಂದು ತಿಳಿಸಿದ್ದಾರೆ.

ಮೊನ್ನೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ್ದೇವೆ. ರವಿ ಅವರ ನೇತೃತ್ವದಲ್ಲಿ ನಿನ್ನೆಯೂ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಯಾವ ಕ್ರಮ ತೆಗೆದುಕೊಳ್ಳಬೇಕು ಚರ್ಚೆ ನಡೆಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ಜೊತೆಗೂ ಚರ್ಚೆ ಮಾಡಿದ್ದಾರೆ. ಕೆಲವು ಸಲಹೆ, ಮಾರ್ಗಸೂಚಿ ಪಡೆದಿದ್ದೇವೆ. 60 ವರ್ಷ ಮೇಲ್ಪಟ್ಟವರು ಮತ್ತು ಹೃದಯ, ಕಿಡ್ನಿ ಸಂಬಂಧಿತ ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಜ್ವರ, ಕಫ, ಶೀತ ಇರುವಂತಹವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಎಂದರು.

ಈಗಾಗಲೇ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸಜ್ಜು ಆಗುವಂತೆಯೂ ಸೂಚನೆ ನೀಡಲಾಗಿದೆ. ಹಾಗೆಯೇ ಗಡಿ ಜಿಲ್ಲೆಗಳಾದ ಕೊಡಗು, ಮಂಗಳೂರು, ಚಾಮರಾಜನಗರದ ಭಾಗದಲ್ಲಿ ಹೆಚ್ಚಿನ ನಿಗಾ ಇಡುವಂತೆ ಸೂಚನೆ ಕೊಡಲಾಗಿದೆ. ಕೇರಳದಿಂದ ಬರುವವರ ಮೇಲೆ ಹೆಚ್ಚು ಟೆಸ್ಟ್ ಮಾಡುವಂತೆ ಆದೇಶ ಮಾಡಿದ್ದೇವೆ ಎಂದು ಹೇಳಿದರು.

ಉಸಿರಾಟದ ತೊಂದರೆ, ಇತರ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಕಡ್ಡಾಯವಾಗಿ ಟೆಸ್ಟಿಂಗ್ ಮಾಡಲಾಗುತ್ತದೆ. ಆಗ ತಿಳಿಯುತ್ತದೆ ಕೋವಿಡ್ ದಿನಕ್ಕೆ ಹೆಚ್ಚು ಇದೆಯೇ ಅಥವಾ ಕಡಿಮೆ ಇದೆಯೇ ಎಂದು. ಆಗ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಈಗ ಆ ಹಂತದಲ್ಲಿ ಇದೆ. ಗಡಿ ಭಾಗದಲ್ಲಿ ಟೆಸ್ಟಿಂಗ್ ಹೆಚ್ಚು ಮಾಡುತ್ತೇವೆ. ಯಾರ ಯಾರ ಮೇಲೆ ಸಂಶಯ ಇದೆ ಅವರೆಲ್ಲರಿಗೂ ಟೆಸ್ಟ್ ಮಾಡಿಸುತ್ತೇವೆ ಎಂದು ತಿಳಿಸಿದರು.

ಇನ್ನೂ 2-3 ದಿನಗಳಲ್ಲಿ ಅದರ ತೀವ್ರತೆ ಗೊತ್ತಾಗಲಿದೆ. ಈಗ ಪ್ರಸ್ತುತ ಜನ ಸೇರುವ ಹಾಗೆ ಇಲ್ಲ. ಓಡಾಟ ಮಾಡುವ ಹಾಗೆ ಇಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಸಹಜ ಸ್ಥಿತಿಯಲ್ಲಿ ಇದೆ. ಹೆಚ್ಚು ಪಾಸಿಟಿವ್ ಬಂದರೆ ಮಾತ್ರ ನಿಷೇಧ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Shwetha M