ಮುಂದುವರಿದ ಟ್ವೀಟ್ ವಾರ್ – ಕಾಂಗ್ರೆಸ್-ಜೆಡಿಎಸ್ ಗೆ ಟೂಲ್ ಕಿಟ್ ರೆಡಿ ಮಾಡಿ ಎಂದ ಬಿಜೆಪಿ

ಮುಂದುವರಿದ ಟ್ವೀಟ್ ವಾರ್ – ಕಾಂಗ್ರೆಸ್-ಜೆಡಿಎಸ್ ಗೆ ಟೂಲ್ ಕಿಟ್ ರೆಡಿ ಮಾಡಿ ಎಂದ ಬಿಜೆಪಿ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಕೇವಲ ಮೂರು ತಿಂಗಳು ಬಾಕಿ ಉಳಿದಿದೆ . ಈ ಹೊತ್ತಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸಿನಿಂದ ಆರಂಭಗೊಂಡಿವೆ. ನಾಯಕರ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಕಳೆದ ವಾರ ಅಮಿತ್ ಶಾ ಮಂಡ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ವಿರೋಧ ಪಕ್ಷ ನಾಯಕರು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಗುರುವಾರ ರಾಜ್ಯಕ್ಕೆ ಬಂದಿಳಿದಿದ್ದಾರೆ. ಈ ಹಿನ್ನೆಲೆ ವಿರೋಧ ಪಕ್ಷದ ನಾಯಕರು, ತಮ್ಮ ಪಕ್ಷ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲು ಧಾರಾಳವಾಗಿ ಪ್ರಯತ್ನಿಸಬಹುದು ಎಂದು ರಾಜ್ಯ ಬಿಜೆಪಿ ಹೇಳಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಬಂದಿಳಿದಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಗೆ ಇದು ಸಹಜವಾಗಿಯೇ ಕಳವಳವಾಗಿರುವುದರಿಂದ, ತಮ್ಮ ಟೂಲ್‌ ಕಿಟ್‌ಗಳನ್ನು ಹೊರ ತೆಗೆದು ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲು ಧಾರಾಳವಾಗಿ ಪ್ರಯತ್ನಿಸಬಹುದು ಎಂದು ಹೇಳಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾಯ್ತು ಬಾಲ್ಯವಿವಾಹ ಪ್ರಕರಣ – ಜನ ಎಚ್ಚೆತ್ತುಕೊಳ್ಳುವುದು ಯಾವಾಗ?

ಈಗಾಗಲೇ ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆಯ 24ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವನ್ನು ಭದ್ರಪಡಿಸಿಕೊಳ್ಳುತ್ತಿರುವ ಬಿಜೆಪಿಯನ್ನು ತಡೆಯಬೇಕಾದ್ದು, ವಿರೋಧ ಪಕ್ಷಗಳು ಅಗತ್ಯವಾಗಿ ಮಾಡಲೇ ಬೇಕಾದ ಕರ್ಮ. ಆದರೆ ಇದು ಅವರ ವಿಫಲಯತ್ನವಾಗುವುದಂತೂ ಕಟ್ಟಿಟ್ಟ ಬುತ್ತಿ ಎಂದು ವ್ಯಂಗ್ಯವಾಡಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರ ಟೂಲ್‌ಕಿಟ್‌ಗಳು ಸಹಜವಾಗಿ ಪ್ರಾದೇಶಿಕತೆ, ಭಾಷೆ, ಜಾತಿ, ಧರ್ಮಗಳನ್ನು ಅವಲಂಬಿಸಿದ್ದು, ಇಂಥದ್ದೇ ಯಾವುದಾದರೂ ಸುಳ್ಳು ಸುದ್ದಿಗಳನ್ನು ಹರಿಬಿಡುವುದನ್ನು ನಾವು ಎದುರು ನೋಡುತ್ತಿದ್ದೇವೆ. ಆದರೆ ಅವೆಲ್ಲದಕ್ಕೂ, ನಮ್ಮ ಒಂದೇ ಉತ್ತರವಾಗಿ ನಾವು ಮಾತಾಡಲ್ಲ, ರಾಜ್ಯದ ಅಭಿವೃದ್ಧಿ ಮಾತಾಡುತ್ತದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ದಾವಣಗೆರೆ, ತುಮಕೂರಿನಲ್ಲಿ ಆಗಿರುವ ಅಭಿವೃದ್ಧಿಯನ್ನು ಕಾಂಗ್ರೆಸ್ ಕನಸ್ಸಲ್ಲೂ ಕಾಣುವುದಕ್ಕಾಗುವುದಿಲ್ಲ. ಹಾಗೇ ಚಿತ್ರದುರ್ಗದಲ್ಲಿ 1,96,093 ಮನೆಗಳಿಗೆ ಕುಡಿಯುವ ನೀರು ಪೂರೈಕೆ ಎಂಬುದೆಲ್ಲ ಏನೆಂದೂ ಜಾತಿಹುಳು ಜೆಡಿಎಸ್‌ನ ಜಡಮಂಡೆಗೆ ಅರ್ಥವೂ ಆಗುವುದಿಲ್ಲ ಎಂದು ಬಿಜೆಪಿ ಕುಹಕವಾಡಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ನಮ್ಮ ಒಂದೇ ಒಂದು ಕೋರಿಕೆಯೇನೆಂದರೆ, ಧಾವಂತದಲ್ಲಿ ನಂದಿನಿ-ಅಮುಲ್‌ ಬಗ್ಗೆ ಸುಳ್ಳಾಡಿದಂತೆ ಮತ್ತೊಮ್ಮೆ ಸುಳ್ಳಾಡಿ, ಉಳಿದಿರುವ ನಿಮ್ಮ ಅಲ್ಪ ಸ್ವಲ್ಪ ಮರ್ಯಾದೆಯನ್ನೂ ತೆಗೆದುಕೊಳ್ಳಬೇಡಿ. ಸುಳ್ಳು ನಾಳೆಯೂ ಆಡಬಹುದು, ಮರ್ಯಾದೆ ಮತ್ತೆ ಬರುವುದಿಲ್ಲ ಎಂದು ಬಿಜೆಪಿ ಹೇಳಿದೆ

suddiyaana