ಕರಾವಳಿಯಲ್ಲಿ ಮುಂದುವರಿದ ಮಳೆಯ ಅಬ್ಬರ – 4 ಮಂದಿ ಸಾವು

ಕರಾವಳಿಯಲ್ಲಿ ಮುಂದುವರಿದ ಮಳೆಯ ಅಬ್ಬರ – 4 ಮಂದಿ ಸಾವು

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆ ಶುಕ್ರವಾರ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲೂ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಭಾರಿ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಟ್ಕುಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸತೀಶ ಪಾಂಡುರಂಗ ನಾಯ್ಕ (40), ಉಲ್ಲಾಸ ಗಾವಡಿ (50) ನೀರುಪಾಲಾದ ದುರ್ದೈವಿಗಳಾಗಿದ್ದಾರೆ. ಜಲಾವೃತವಾಗಿದ್ದ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಲು ಜಾರಿ ನೀರಿನಲ್ಲಿ ಬಿದ್ದು ಅನಾಹುತ ಸಂಭವಿಸಿದೆ.

ಇದನ್ನೂ ಓದಿ: ಕಂಡ ಕಂಡಲ್ಲಿ ಸೆಲ್ಫಿ ತೆಗೆದುಕೊಂಡರೆ ಹೀಗೇ ಆಗುವುದು – ಆನೆಗಳ ಜೊತೆ ಇದೆಲ್ಲಾ ಬೇಕಿತ್ತಾ?

ಉಡುಪಿಯಲ್ಲೂ ಕೂಡ ಭಾರಿ ಮಳೆಯಾಗುತ್ತಿದ್ದು, ಧಾರಾಕಾರ ಮಳೆಗೆ ಮತ್ತೊಂದು ಬಲಿಯಾಗಿದೆ. ಭಾರಿ ಗಾಳಿ ಮಳೆಗೆ ಬೃಹತ್ ಆಲದ ಮರ ಬಿದ್ದು ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಬೆಳ್ಮಣ್ ನಿವಾಸಿ ಪ್ರವೀಣ್ ಆಚಾರ್ಯ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಪ್ರವೀಣ್ ಆಚಾರ್ಯ ಅವರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಭಾರೀ ಗಾತ್ರದ ಆಲದ ಮೇಲೆ ಅವರ ಮೇಲೆ ಬಿದ್ದಿದೆ. ಮರ ಬಿದ್ದ ಹಿನ್ನೆಲೆ ವಿದ್ಯುತ್ ಕಂಬ ಸೇರಿದಂತೆ ಇತರ ಕಟ್ಟಡಗಳಿಗೂ ಹಾನಿಯಾಗಿದೆ. ಮರ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮರ ಬಿದ್ದು ಗಾಯಗೊಂಡ ಪ್ರವೀಣ್ ಅವರನ್ನು ಕೂಡಲೇ ಸಥಳೀಯ ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಈ ಹಿಂದೆ ಹೋಟೆಲ್ ನಲ್ಲಿ ಕ್ಯಾಷರ್ ಆಗಿದ್ದ ದಿವಾಕರ್ ಶೆಟ್ಟಿ ರಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅಲ್ಲದೆ ಕುಂದಾಪುರ ತಾಲೂಕಿನ ಕಮಲಶಿಲೆ ದೇವಸ್ಥಾನದ ಹಿರಿಯ ಅರ್ಚಕ ಶೇಷಾದ್ರಿ ಐತಾಳ್ ನೀರಿನಲ್ಲಿ ಕೊಚ್ಚಿ ಹೋಗಿ ಸಾವನಪ್ಪಿದ್ದರು. ಎಂದಿನಂತೆ ದೇವಸ್ಥಾನಕ್ಕೆ ಪೂಜೆಗೆ ಬರುತ್ತಿದ್ದ ಸಂದರ್ಭ ಕುಬ್ಜ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯನ್ನು ದಾಟುವ ಸಂದರ್ಭ ಈ ಅವಘಡ ಸಂಭವಿಸಿತ್ತು.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆಯ ಆರ್ಭಟ ಜೋರಾಗಿ. ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದೆ. ಸತತ ಮಳೆಯಿಂದಾಗಿ ಮನೆಯೊಂದರ ಮೇಲೆ ಮಣ್ಣು ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರ ಎಂಬಲ್ಲಿನ ಮನೆಯೊಂದರಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಝರೀನಾ ಎಂದು ಗುರುತಿಸಲಾಗಿದೆ.

suddiyaana