ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಲೇ ಇದೆ ತಾಪಮಾನ – ವೇತನ ಸಹಿತ ಅರ್ಧ ದಿನ ರಜೆಗೆ ಪೌರಕಾರ್ಮಿಕರ ಆಗ್ರಹ
ಸಿಲಿಕಾನ್ ಸಿಟಿ ಬೆಂಗಳೂರು ಬೆಂದಕಾಳೂರು ಆಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಲೇ ಇದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬಿಸಿಗಾಳಿಯ ಮುನ್ಸೂಚನೆ ನೀಡಿದೆ. ಹೀಗಾಗಿ ಸಂಭಾವ್ಯ ಸಮಸ್ಯೆ ತಡೆಯುವ ನಿಟ್ಟಿನಲ್ಲಿ ವೇತನ ಕಡಿತ ಮಾಡದೆ ಅರ್ಧ ದಿನ ರಜೆ ನೀಡಬೇಕು ಎಂದು ಪೌರಕಾರ್ಮಿಕರು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ವೇ ಪಾಲಿಟಿಕ್ಸ್! – ಗುಪ್ತಚರ ವರದಿಯಲ್ಲಿ ಸಿಕ್ಕಿದ್ಯಾ ಕೈ ಗೆ ಅಚ್ಚರಿಯ ಫಲಿತಾಂಶ?
ಈ ಬಗ್ಗೆ ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟವು ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಗೆ ಪತ್ರ ಬರೆದಿದೆ. ಪೌರಕಾರ್ಮಿಕರಿಗೆ ಶಾಖದ ಹೊಡೆತದಿಂದ ರಕ್ಷಿಸಿಕೊಳ್ಳಲು ಹೆಚ್ಚುವರಿ ವಿರಾಮದೊಂದಿಗೆ ಕುಡಿಯುವ ನೀರು, ಒಆರ್‌ಎಸ್ ಮತ್ತು ಮಜ್ಜಿಗೆ ನೀಡಬೇಕು. ಶುದ್ಧ ನೀರು ಮತ್ತು ನೈರ್ಮಲ್ಯದ ಶೌಚಾಲಯಗಳಿಂದ ವಂಚಿತರಾಗಿರುವ ಪೌರಕಾರ್ಮಿಕರು ಶಾಖ-ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಕೆಲವು ವಾರಗಳಿಂದ ತೀವ್ರತರವಾದ ಶಾಖದಲ್ಲಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ಹೆಚ್ಚು ದಣಿವಾಗುತ್ತಿದೆ. ಕೆಲವರಿಗೆ ಕೆಲಸದ ವೇಳೆ ಆಯಾಸ, ತಲೆತಿರುಗುವಿಕೆ ಸಮಸ್ಯೆ ಕಾಣಿಸಿಕೊಂಡಿದೆ. ಬೇಸಗೆಯ ಮಟ್ಟಿಗೆ ಕೆಲಸದ ಅವಧಿ ಕಡಿಮೆ ಮಾಡಿ ವಿರಾಮ ನೀಡುವ ಅಗತ್ಯವಿದೆ ಎಂದು ಹಲವು ಮಂದಿ ಪೌರಕಾರ್ಮಿಕರು ಅಭಿಪ್ರಾಯಪಟ್ಟಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಪೌರಕಾರ್ಮಿಕರು ಬೆಳಿಗ್ಗೆ 6 ಗಂಟೆಗೆ ಕೆಲಸ ಪ್ರಾರಂಭಿಸುತ್ತಾರೆ. ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಇದನ್ನು ಮಧ್ಯಾಹ್ನ 2.30 ರವರೆಗೆ ವಿಸ್ತರಿಸಲಾಗುತ್ತದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಧ್ಯಾಹ್ನ 11ರಿಂದ 3 ಗಂಟೆಯ ಅವಧಿಯಲ್ಲಿ ಮನೆಯೊಳಗೆ ಇರಲು ಸೂಚನೆ ನೀಡಿರುವುದನ್ನು ಉಲ್ಲೇಖಿಸಿ, ಕೆಲಸದ ಸಮಯವನ್ನು ಬೆಳಿಗ್ಗೆ 11 ಕ್ಕೆ ಕಡಿತಗೊಳಿಸಬೇಕೆಂದು ಒಕ್ಕೂಟ ಮನವಿ ಮಾಡಿದೆ.