ಮುಂದುವರಿದ ಹಮಾಸ್‌, ಇಸ್ರೇಲ್‌ ಕದನ – ಮತ್ತೆ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಮುಂದುವರಿದ ಹಮಾಸ್‌, ಇಸ್ರೇಲ್‌ ಕದನ – ಮತ್ತೆ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಇಸ್ರೇಲ್‌ ಹಾಗೂ ಹಮಾಸ್‌ ಬಂಡುಕೋರರ ಮಧ್ಯೆ ಭೀಕರ ಯುದ್ಧ ನಡೆಯುತ್ತಿದೆ. ಈಗಾಗಲೇ ಈ ಕದನದಲ್ಲಿ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಹಮಾಸ್‌ ಉಗ್ರರು ಇಸ್ರೇಲ್‌ ಪ್ರಜೆಗಳನ್ನು ಒತ್ತೆಯಾಳಾಗಿ ಇರಿಸಿದ್ದಾರೆ. ಇದೀಗ ಮಾನವೀಯತೆ ಆಧಾರ ಮೇಲೆ ಗಾಜಾ ಪಟ್ಟಿಯಲ್ಲಿ ಇಬ್ಬರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವುದಾಗಿ ಹಮಾಸ್ ತಿಳಿಸಿದೆ.

ಹಮಾಸ್‌ ಹಲವು ಮಂದಿಯನ್ನು ಒತ್ತೆಯಾಳಾಗಿರಿಸಿದೆ. ಕಳೆದ ಕೆಲವು ದಿನಗಳ ಹಿಂದೆ ಅಮೆರಿಕನ್‌ ಪ್ರಜೆಗಳನ್ನು ಮಾನವೀಯತೆಯ ಆಧಾರದ ಮೇಲೆ ಬಿಡುಗಡೆ ಮಾಡಿತ್ತು. ಇದೀಗ ಇಬ್ಬರು ವೃದ್ಧ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಮಾನವೀಯ ಹಾಗೂ ಅವರ ಆರೋಗ್ಯದ ಕಾಳಜಿಯ ಹಿನ್ನೆಲೆ ನಾವು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ಹಮಾಸ್ ತಿಳಿಸಿದೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಖಾಸಗಿ ವಾಹನಗಳದ್ದೇ ದರ್ಬಾರ್!‌ – ನಗರದಲ್ಲಿ 1 ಕೋಟಿಯ ಗಡಿ ದಾಟಲಿದೆ ಖಾಸಗಿ ವಾಹನಗಳ ಸಂಖ್ಯೆ!

ಬಿಡುಗಡೆಯಾದ ಒತ್ತೆಯಾಳುಗಳನ್ನು ನೂರಿಟ್ ಕೂಪರ್ (79) ಹಾಗೂ ಯೋಚೆವೆಡ್ ಲಿಫ್‌ಶಿಟ್ಜ್ (85) ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಗಾಜಾ ಗಡಿಯ ಸಮೀಪವಿರುವ ನಿರ್ ಓಜ್‌ನ ಕಿಬ್ಜತ್ಜ್‌ನಲ್ಲಿ ಈ ಇಬ್ಬರು ವೃದ್ಧೆಯರನ್ನು ಅವರ ಪತಿಯರೊಂದಿಗೆ ತಮ್ಮ ಮನೆಗಳಿಂದ ಹಮಾಸ್ ಉಗ್ರರು ಒತ್ತೆಯಾಳಾಗಿ ತೆಗೆದುಕೊಂಡಿದ್ದರು. ಇದೀಗ ವೃದ್ಧ ಮಹಿಳೆಯರನ್ನು ಆರೋಗ್ಯದ ಹಾಗೂ ಮಾನವೀಯ ದೃಷ್ಟಿಯಿಂದ ಬಿಡುಗಡೆ ಮಾಡಿದರೂ ಅವರ ಪತಿಯರನ್ನು ಬಿಡುಗಡೆ ಮಾಡಲಾಗಿಲ್ಲ ಎನ್ನಲಾಗದೆ.

ಇದಕ್ಕೆ ಸಂಬಂಧಿಸಿದಂತೆ ಇಂಟರ್‌ನ್ಯಾಷನಲ್ ಕಮಿಟಿ ಆಫ್ ದಿ ರೆಡ್‌ಕ್ರಾಸ್ ಒತ್ತೆಯಾಳುಗಳ ಬಿಡುಗಡೆಯನ್ನು ಸುಗಮಗೊಳಿಸಿದೆ ಎಂದು ತಿಳಿಸಿದೆ. ಬಿಡುಗಡೆಯಾದ ಒತ್ತೆಯಾಳುಗಳು ಈಜಿಪ್ಟಿನ ರಫಾ ಕ್ರಾಸಿಂಗ್‌ಗೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಇಸ್ರೇಲ್ ಯಾವುದೇ ಅಧಿಕೃತ ಪ್ರಕಟಣೆಯನ್ನು ಮಾಡಿಲ್ಲ.

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಗಾಜಾ ಪಟ್ಟಿ ಬಳಿ ದಾಳಿ ನಡೆಸಿ ಇಸ್ರೇಲಿ ಪ್ರಜೆಗಳು ಸೇರಿದಂತೆ ನೂರಾರು ಜನರನ್ನು ಅಪಹರಿಸಿದ್ದರು. ಅವರನ್ನು ಒತ್ತೆಯಾಳಾಗಿ ಇಟ್ಟ 2 ವಾರಗಳ ಬಳಿಕ ಕಳೆದ ಶುಕ್ರವಾರ ಅಮೆರಿಕ ಮೂಲದ ಜುಡಿತ್ ಹಾಗೂ ನಟಾಲಿ ರಾನನ್ ಅವರನ್ನು ಹಮಾಸ್ ಬಿಡುಗಡೆ ಮಾಡಿದೆ. ಇಸ್ರೇಲಿ ಸೇನೆಯ ಅಂದಾಜಿನ ಪ್ರಕಾರ 220ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಹಮಾಸ್ ವಶದಲ್ಲಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೋಮವಾರ ಪ್ಯಾಲೆಸ್ತೀನ್ ಗುಂಪು ಮೊದಲು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ಮಾತ್ರವೇ ಕದನ ವಿರಾಮದ ಬಗ್ಗೆ ಮಾತುಕತೆ ನಡೆಸಬಹುದು ಎಂದಿದ್ದಾರೆ. ಇಸ್ರೇಲ್ ಸೋಮವಾರ ಗಾಜಾದ ಮೇಲೆ ತನ್ನ ವೈಮಾನಿಕ ದಾಳಿಯನ್ನು ಹೆಚ್ಚಿಸಿದೆ. ಕಳೆದ 24 ಗಂಟೆಗಳಲ್ಲಿ ಬಾಂಬ್ ದಾಳಿಗೆ 436 ಜನರು ಸಾವನ್ನಪ್ಪಿರುವುದಾಗಿ ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

Shwetha M