ಮದುವೆ ಆಲ್ಬಂನಲ್ಲಿ ತಾಳಿ ಕಟ್ಟುವ ವಿಡಿಯೋ ಮಿಸ್! – ಬೆಂಗಳೂರಿನ ಫೋಟೋಗ್ರಾಫರ್ ಗೆ ಬಿತ್ತು ಭಾರಿ ದಂಡ
ಮದುವೆ ಬಗ್ಗೆ ಜನರು ಅದೆಷ್ಟೋ ಕನಸುಗಳನ್ನು ಕಂಡಿರುತ್ತಾರೆ. ತಮ್ಮ ಸಂಗಾತಿಯನ್ನು ವರಿಸುವ ಕ್ಷಣ ಜೀವನಪೂರ್ತಿ ಹಸಿರಾಗಿರಬೇಕು ಎಂದು ವಿವಾಹದ ಸುಂದರ ಕ್ಷಣಗಳನ್ನು ಸೆರೆಹಿಡಿಯಲು ಫೋಟೋಗ್ರಾಫರ್‌ಗಳನ್ನು ನೇಮಕ ಮಾಡಿರುತ್ತಾರೆ. ಅವರಿಗೆ ಲಕ್ಷಾಂತರ ರೂಪಾಯಿ ಹಣ ನೀಡುತ್ತಾರೆ. ಆದರೆ ಮದುವೆಯ ವಿಡಿಯೋದಲ್ಲಿ ತಾಳಿ ಕಟ್ಟಿದ ದೃಶ್ಯವೇ ಇಲ್ಲ ಎಂದರೆ ಆ ದಂಪತಿಗೆ ಹೇಗಾಗುತ್ತದೆ ಅಲ್ವಾ? ಇಲ್ಲೊಬ್ಬ ಫೋಟೋಗ್ರಾಫರ್ ತಾಳಿ ಕಟ್ಟುವ ವಿಡಿಯೋವನ್ನು ಕಳೆದು ಕೊಂಡಿದ್ದಾನೆ. ಇದೀಗ ಆತನಿಗೆ ಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಇದನ್ನೂ ಓದಿ: ದಂಡ ಹಾಕಿದ್ದೂ ಸಾರ್ಥಕ ಆಯ್ತು – ಕೆಎಸ್ಆರ್‌ಟಿಸಿಗೆ ಹರಿದು ಬಂತು ಲಕ್ಷ ಲಕ್ಷ ಆದಾಯ..!
ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ. ವರದಿಯ ಪ್ರಕಾರ ನಿತಿನ್ ಕುಮಾರ್ ಅವರು ನವೆಂಬರ್ 9, 2019 ರಂದು ವಿವಾಹವಾಗಿದ್ದರು. ಫೋಟೋಗ್ರಾಫರ್ ರಾಹುಲ್ ಕುಮಾರ್ ತಮ್ಮ ಜೀವನದ ಮರೆಯಲಾಗದ ಕ್ಷಣಗಳನ್ನು ಅತ್ಯಂತ ಸುಂದರವಾಗಿ ಸೆರೆಹಿಡಿಯಲು ಒಪ್ಪಿಸಲಾಗಿತ್ತು. ಇದಕ್ಕಾಗಿ ನಿತಿನ್ ರಾಹುಲ್ಗೆ 1.2 ಲಕ್ಷ ರೂಪಾಯಿ ಮೌಲ್ಯದ ಕೆಲಸ ಕೊಟ್ಟಿದ್ದಾರೆ.ಮದುವೆ ಬಳಿಕ ಫೋಟೋಗ್ರಾಫರ್ ಮದುವೆಯ ಆಲ್ಬಂ, ವಿಡಿಯೋ ಕ್ಯಾಸೆಟ್ ಅನ್ನು ವರನಿಗೆ ನೀಡಿದ್ದಾನೆ. ಆದರೆ ಇದನ್ನು ನೋಡಿದ ದಂಪತಿಗಳು ಬೆಚ್ಚಿಬಿದ್ದಿದ್ದಾರೆ.
ರಾಹುಲ್ ಕುಮಾರ್ ಮತ್ತವರ ತಂಡ ಮದುವೆಗೆ ಸಂಬಂಧಿಸಿದ ಬಹುತೇಕ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ತಾಳಿಕಟ್ಟುವ ಕ್ಷಣ ಮಾತ್ರ ಮಿಸ್ ಮಾಡಿದ್ದಾರೆ. ಜೊತೆಗೆ ಮದುವೆಯ ಆಲ್ಬಂ ಮತ್ತು ವಿಡಿಯೋವನ್ನು ತಡವಾಗಿ ನೀಡಿದ್ದಾರೆ ಎನ್ನಲಾಗಿದೆ.
ರಾಹುಲ್ ಮತ್ತು ಅವರ ತಂಡ ಮದುವೆಯ ವೀಡಿಯೊಗಳು ಮತ್ತು ಫೋಟೋಗಳನ್ನು ಚಿತ್ರೀಕರಿಸಿದ್ದರು. ಆದರೆ ಮದುವೆಯಾದ ಒಂದು ವಾರದ ನಂತರ ನಿತಿನ್ ಆಲ್ಬಂ ಕೇಳಿದಾಗ ರಾಹುಲ್ ಆರಂಭದಲ್ಲಿ ಒಂದು ವಾರ ಸಮಯ ತೆಗೆದುಕೊಂಡರು, ಆದರೆ ನಂತರ ಅದು ಎರಡು ವಾರವಾಯಿತು. ಕೊನೆಗೆ ನಿತಿನ್ ಮತ್ತು ಆತನ ಸ್ನೇಹಿತರು ರಾಹುಲ್ ಕಚೇರಿ ಹೋಗಿ ಗಲಾಟೆ ಮಾಡಿದ್ದಾರೆ. ಬಳಿಕ ಬೇಸರಗೊಂಡ ನಿತಿನ್ ಕುಮಾರ್ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ವಾದ ವಿವಾಹದವನ್ನು ಆಲಿಸಿದ ನ್ಯಾಯಾಲಯ ಮೇ 30ರಂದು ತೀರ್ಪನ್ನು ಪ್ರಕಟಿಸಿದೆ. ಫೋಟೋಗ್ರಾಫರ್ ಅನ್ನು ಸೇವಾ ಕೊರೆತಯ ದೋಷಿ ಎಂದು ಉಲ್ಲೇಖಿಸಿ 25,000 ರೂ. ದಂಡ ಪಾವತಿಸುವಂತೆ ಸೂಚಿಸಿದೆ. ಇದರ ಜೊತೆ 5,000 ರೂಪಾಯಿಗಳನ್ನು ಕೋರ್ಟ್ ವೆಚ್ಚಕ್ಕಾಗಿ ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿದೆ.