ಅಯೋಧ್ಯೆಯ ರಾಮ ಮಂದಿರದ ಸಂಕೀರ್ಣ ನಿರ್ಮಾಣ ಕಾರ್ಯ 2024ರ ಡಿಸೆಂಬರ್ ವೇಳೆಗೆ ಪೂರ್ಣ
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೊಂಡು ಎರಡು ತಿಂಗಳಾಗುತ್ತಾ ಬಂದಿದೆ. ಲಕ್ಷಾಂತರ ಮಂದಿ ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ಇದೀಗ ರಾಮಮಂದಿರ ಸಂಕೀರ್ಣದ ನಿರ್ಮಾಣ ಕಾಮಗಾರಿಯನ್ನು ಕೂಡ ನಡೆಯುತ್ತಿದ್ದು ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಈ ಬಗ್ಗೆ ದೇವಸ್ಥಾನದ ಟ್ರಸ್ಟ್ನ ಸದಸ್ಯ ಅನಿಲ್ ಮಿಶ್ರಾ ಮಾಹಿತಿ ನೀಡಿದ್ದಾರೆ.ಅಯೋಧ್ಯೆ ರಾಮಮಂದಿರ ಸಂಕೀರ್ಣ ಕೆಲಸವನ್ನು ಪ್ರಸ್ತುತ ಸುಮಾರು 1,500 ಕಾರ್ಮಿಕರು ಮಾಡುತ್ತಿದ್ದಾರೆ. ಮೂರು ಅಂತಸ್ತಿನ ದೇವಾಲಯದ ಕಟ್ಟಡದ ಉಳಿದ ಎರಡು ಮಹಡಿಗಳ ನಿರ್ಮಾಣವನ್ನು ತ್ವರಿತಗೊಳಿಸಲು 3,500 ಕ್ಕೂ ಹೆಚ್ಚು ಹೆಚ್ಚುವರಿ ಕಾರ್ಮಿಕರನ್ನು ಶೀಘ್ರದಲ್ಲೇ ನಿಯೋಜಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಈ ದೇವಾಲಯ ದಿನದಲ್ಲಿ ಎರಡು ಬಾರಿ ಮಾಯವಾಗುತ್ತದೆ – ಸ್ತಂಭೇಶ್ವರ ದೇಗುಲದಲ್ಲಿ ಇಂದಿಗೂ ನಡೆಯುತ್ತದೆ ವಿಸ್ಮಯ..!
ದೇವಾಲಯ ನಿರ್ಮಾಣ ಸಮಿತಿಯ ಸಭೆ ಇತ್ತೀಚೆಗೆ ನಡೆದಿದ್ದು, ಈ ವರ್ಷಾಂತ್ಯದೊಳಗೆ ರಾಮಜನ್ಮಭೂಮಿ ಸಂಕೀರ್ಣದಲ್ಲಿ ಎಲ್ಲಾ ನಿರ್ಮಾಣಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಗರ್ಭಗುಡಿಯು ದೇವಾಲಯದ ನೆಲ ಮಹಡಿಯಲ್ಲಿದೆ ಮತ್ತು ಮೊದಲ ಮಹಡಿಯಲ್ಲಿ ಶ್ರೀರಾಮನ ಆಸ್ಥಾನವನ್ನು ಸ್ಥಾಪಿಸಲಾಗುವುದು, ರಾಮಲಲ್ಲಾನ ದರ್ಶನದ ನಂತರ ಭಕ್ತರು ಶ್ರೀರಾಮನ ಆಸ್ಥಾನದ ದರ್ಶನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಭವ್ಯ ದೇಗುಲದ ಮುಖ್ಯ ಶಿಖರ ಹಾಗೂ ಇನ್ನೊಂದು ಶಿಖರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, 300 ದಿನಗಳಲ್ಲಿ ಶಿಖರಗಳು ಸಿದ್ಧಗೊಳ್ಳಲಿವೆ. ಮಳೆ ಮತ್ತು ಬಿಸಿಲಿನಿಂದ ಭಕ್ತರನ್ನು ರಕ್ಷಿಸಲು ದೇವಸ್ಥಾನದ ಪರ್ಕೋಟ ಕೂಡ ಮಳೆಗಾಲದ ಆಗಮನದ ಮೊದಲು ಸಿದ್ಧವಾಗಲಿದೆ. ಸಂಕೀರ್ಣದಲ್ಲಿ, ಪರ್ಕೋಟಾದ ಉದ್ದಕ್ಕೂ ಆರು ದೇವರು ಮತ್ತು ದೇವತೆಗಳ ದೇವಾಲಯಗಳನ್ನು ನಿರ್ಮಿಸಲಾಗುವುದು, ಜೊತೆಗೆ ಏಳು ಋಷಿಗಳ ದೇವಾಲಯಗಳನ್ನು ಸಹ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.