ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸಲ್ವಾ ಸಿದ್ದರಾಮಯ್ಯ – ರಾಹುಲ್ ಗಾಂಧಿ ನೀಡಿರೋ ಸಲಹೆ ಏನು..?

ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸಲ್ವಾ ಸಿದ್ದರಾಮಯ್ಯ – ರಾಹುಲ್ ಗಾಂಧಿ ನೀಡಿರೋ ಸಲಹೆ ಏನು..?

ಕರ್ನಾಟಕ ವಿಧಾನಸಭಾ ಚುನಾವಣಾ ಘೋಷಣೆಗೆ ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿದೆ. ಕಾಂಗ್ರೆಸ್ ಕೂಡ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ರೆಡಿ ಮಾಡಿದೆ. ಆದ್ರೆ ವಿಪಕ್ಷನಾಯಕ ಸಿದ್ದರಾಮಯ್ಯ ಸ್ಪರ್ಧೆ ವಿಚಾರವೇ ಗೊಂದಲದ ಗೂಡಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ್ದರು. ಆದ್ರೆ ಈಗ ಕೋಲಾರ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ರಾಹುಲ್ ಗಾಂಧಿ(Rahul Gandhi) ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ. ಮಾರ್ಚ್ 17ರಂದು ದೆಹಲಿಯಲ್ಲಿ ನಡೆದ ಸಿಇಸಿ ಸಭೆಯಲ್ಲಿ ರಾಹುಲ್​ ಗಾಂಧಿ ಅವರು ಸಿದ್ದರಾಮಯ್ಯರಿಗೆ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಹಾಗೂ ಕೋಲಾರದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದಾರಂತೆ.

ಇದನ್ನೂ ಓದಿ : ಬೊಮ್ಮಾಯಿ ವಿರುದ್ಧ ವಿನಯ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ – ಶಿಗ್ಗಾಂವಿಯಲ್ಲಿ ಏನೆಲ್ಲಾ ಲೆಕ್ಕಾಚಾರ..?

ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ಹೈಕಮಾಂಡ್​ ಹೇಳಿದ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ. ನಂಜನಗೂಡು ಕ್ಷೇತ್ರದಲ್ಲಿ ಧ್ರುವನಾರಾಯಣ ಪುತ್ರ ಸ್ಪರ್ಧಿಸುತ್ತಾರೆ. ನಾನು ಆರ್. ಧ್ರುವನಾರಾಯಣ ಪುತ್ರ ದರ್ಶನ್​​ ಪರ ಇದ್ದೇನೆ. ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧಿಸಲ್ಲವೆಂದು ಮಹದೇವಪ್ಪ ಹೇಳಿದ್ದಾರೆ. ಮಹದೇವಪ್ಪ ಸ್ಪರ್ಧಿಸಲ್ಲ ಎಂದ ಮೇಲೆ ದರ್ಶನ್​ಗೆ ಟಿಕೆಟ್​ ಕೊಡ್ತೀವಿ ಎಂದಿದ್ದಾರೆ. ಇದೇ ವೇಳೆ ಮಾತನಾಡಿರುವ ಸಿದ್ದು, ಮಾ.22ರ ಬೆಳಗ್ಗೆ ಅಂದ್ರೆ ಯುಗಾದಿ ಹಬ್ಬದಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ.

ನಿನ್ನೆ ಕೇಂದ್ರ ಚುನಾವಣಾ ಸಮಿತಿ ಸಭೆ ಬಳಿಕ ರಾಹುಲ್ ಗಾಂಧಿ ಸಿದ್ದರಾಮಯ್ಯರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ಈ ವೇಳೆ ಕೋಲಾರ ವಿಷಯ ಹಾಗೂ ಇತರರ ಟಿಕೆಟ್ ಬಗ್ಗೆ ಮಾತುಕತೆ ನಡೆದಿದೆ. ರಾಹುಲ್ ಗಾಂಧಿ ಸಲಹೆ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸದಲ್ಲಿಂದು ಕೋಲಾರ ಕಾಂಗ್ರೆಸ್ ನಾಯಕರ ಸಭೆ ನಡೆಯಲಿದೆ. ಸಭೆಯಲ್ಲಿ ಚುನಾವಣಾ ತಯಾರಿ ಕುರಿತು ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ. ಕೋಲಾರ ಕಾರ್ಯಕ್ರಮದ ಮಾಹಿತಿ ಪಡೆಯಲಿದ್ದಾರೆ. ಹಾಗೂ ಕೆಲ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ.

ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ, ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲಿ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೂ ಗೆದ್ದು ಬರುತ್ತಾರೆ. ಹಾಗೇನಾದ್ರೂ ವರುಣಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಯೋದಾದರೂ ಅಲ್ಲಿಂದಲೇ ಇಳಿಯಲಿ ಎಂದಿದ್ದಾರೆ. ಹೀಗಾಗಿ ಸಿದ್ದು ಯಾವ ಕ್ಷೇತ್ರದಿಂದ ರಣಕಣಕ್ಕೆ ಧುಮುಕುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

suddiyaana