ಕಾವೇರಿ ವಿಚಾರದಲ್ಲಿ ಕಾಂಗ್ರೆಸ್‌ ನ ಚಿಲ್ಲರೆ ರಾಜಕಾರಣ..  ವಿದ್ಯುತ್ ಪೂರೈಕೆ ಮಾಡದಷ್ಟು ನಿಶಕ್ತವಾಗಿದೆ – ಸರ್ಕಾರದ ವಿರುದ್ಧ ಬಿಜೆಪಿ ಟೀಕಾಪ್ರಹಾರ

ಕಾವೇರಿ ವಿಚಾರದಲ್ಲಿ ಕಾಂಗ್ರೆಸ್‌ ನ ಚಿಲ್ಲರೆ ರಾಜಕಾರಣ..  ವಿದ್ಯುತ್ ಪೂರೈಕೆ ಮಾಡದಷ್ಟು ನಿಶಕ್ತವಾಗಿದೆ – ಸರ್ಕಾರದ ವಿರುದ್ಧ ಬಿಜೆಪಿ ಟೀಕಾಪ್ರಹಾರ

ಬೆಂಗಳೂರು: ರಾಜ್ಯದಲ್ಲಿ ಕಾವೇರಿ ಕಿಚ್ಚು ಕಾವೇರಿದೆ. ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಬಿಡಬೇಕೆಂದು ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶ ನೀಡಿದೆ. ಈ ಆದೇಶದ ವಿರುದ್ಧ ರಾಜ್ಯದಲ್ಲಿ ಹಲವು ಸಂಘಟನೆಗಳು ನಿರಂತವಾಗಿ ಪ್ರತಿಭಟನೆ ನಡೆಸುತ್ತಿವೆ. ಇದೀಗ ರಾಜ್ಯ ಬಿಜೆಪಿ, ರಾಜ್ಯದಲ್ಲಿ ರೈತರನ್ನು ಸಂಕಷ್ಟಕ್ಕೆ ತಂದಿಟ್ಟಿರುವ ಕಾವೇರಿ ಹಾಗೂ ವಿದ್ಯುತ್ ಕೊರತೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದೆ.

ಕಾಂಗ್ರೆಸ್‌ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ಸರ್ಕಾರ ಕಾವೇರಿ ವಿಚಾರದಲ್ಲಿ ತಮ್ಮ ತಪ್ಪುಗಳನ್ನು ಮರೆಮಾಚಲು ಸದಾ ಇತರರ ಮೇಲೆ ಗೂಬೆ ಕೂರಿಸುತ್ತಾ, ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ: ಕೆಆರ್‌ಎಸ್‌ ಡ್ಯಾಂನಲ್ಲಿ ನೀರಿನ ಮಟ್ಟ ಭಾರಿ ಕುಸಿತ – 12 ವರ್ಷಗಳಲ್ಲಿ 2ನೇ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆ!

ಬಿಜಿಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ “ಪವರ್ ಸರ್‌ಪ್ಲಸ್ ಸ್ಟೇಟ್” ಸಾಧನೆ ಮಾಡಿತ್ತು.  ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕರ್ನಾಟಕದ ಎಲ್ಲಾ ಘನತೆಗಳನ್ನು ಕಳೆದು ಹಾಳು ಮಾಡಿ ರಾಜ್ಯವನ್ನು ಕತ್ತಲಿಗೆ ದೂಡಿದೆ. ಉಚಿತ ವಿದ್ಯುತ್ ಕೊಡುತ್ತೇವೆಂದು ಕಿವಿ ಮೇಲೆ ಹೂವಿಟ್ಟ ಕಾಂಗ್ರೆಸ್ ಇದೀಗ ಹಣ ಕೊಡುತ್ತೇವೆಂದರೂ ವಿದ್ಯುತ್ ಪೂರೈಕೆ ಮಾಡದಷ್ಟು ನಿಶಕ್ತವಾಗಿದೆ ಎಂದು ಟೀಕಿಸಿದೆ.

ಸಿದ್ದರಾಮಯ್ಯ ಅವರ ಅಸಮರ್ಥ ಆಡಳಿತದಿಂದಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಸಂಪೂರ್ಣ ಕುಂಠಿತವಾಗಿದೆ. ಹೊರ ರಾಜ್ಯಗಳಿಂದಲೂ ವಿದ್ಯುತ್ ಖರೀದಿ ಮಾಡಲು ಕೂಡ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಈಗಾಗಲೇ ವಿದ್ಯುತ್ ದರ ಏರಿಕೆಯಿಂದ ಕಂಗೆಟ್ಟಿದ್ದ ಕೃಷಿ, ಕೈಗಾರಿಕೆಗಳು ವಿದ್ಯುತ್ ಅಭಾವದಿಂದ ಮತ್ತಷ್ಟು ಕುಗ್ಗಿ ಹೋಗಿವೆ. ಇದರ ನಡುವೆ ರಾಜ್ಯಕ್ಕೆ ಲೋಡ್ ಶೆಡ್ಡಿಂಗ್ ಭೂತ ಆಗಲೇ ಆವರಿಸಿದೆ.  ಇದೇ ಕಾಂಗ್ರೆಸ್ಸಿನ ಕತ್ತಲು ರಾಜ್ಯದ ಗ್ಯಾರಂಟಿ ಎಂದು ಕಿಡಿಕಾರಿದೆ.

Shwetha M