ಗೃಹಜ್ಯೋತಿ ಯೋಜನೆಗೆ ಮೊದಲ ದಿನ 55,000ಕ್ಕೂ ಹೆಚ್ಚು ಗ್ರಾಹಕರಿಂದ ಅರ್ಜಿ – ಆರಂಭದಲ್ಲೇ ಕಾಣಿಸಿಕೊಂಡ ಸರ್ವರ್ ಬಿಜಿ ಸಮಸ್ಯೆ
ಬೆಂಗಳೂರು: ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡುವ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಭಾನುವಾರದಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಜನ ಉತ್ಸುಕರಾಗಿದ್ದು, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಭಾನುವಾರ 55 ಸಾವಿರಕ್ಕೂ ಹೆಚ್ಚು ಮಂದಿ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್! – 1 ವಾರದಲ್ಲಿ ಬರೋಬ್ಬರಿ 3,12,09,696 ಮಂದಿ ಮಹಿಳೆಯರು ಪ್ರಯಾಣ
ಗೃಹಜ್ಯೋತಿ ಯೋಜನೆಗೆ ಮೊದಲ ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಸರ್ವಸ್ ಬಿಜಿಯಾಗಿದ್ದು ಅನೇಕರಿಗೆ ಅರ್ಜಿ ಸಲ್ಲಿಸಲಾಗುತ್ತಿಲ್ಲ. ಪೂರ್ವ ಸಿದ್ದತೆಗಳಿಲ್ಲದೇ ಗ್ಯಾರಂಟಿಗಳಿಗೆ ದಿನಾಂಕ ಘೋಷಿಸಿ ಕಾಂಗ್ರೆಸ್ ಪೀಕಲಾಟಕ್ಕೆ ಗುರಿಯಾಗಿದೆ. ತಾನೇ ಕೊಟ್ಟ ಡೆಡ್ ಲೈನ್ಗಳ ಒತ್ತಡದ ಸುಳಿಯಲ್ಲಿ ಕಾಂಗ್ರೆಸ್ ಸರ್ಕಾರ ಸಿಕ್ಕಿ ಹಾಕಿಕೊಂಡಿದೆ.
ಗೃಹಜ್ಯೋತಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್ (https://sevasindhugs.karnataka.gov.in) ಮೂಲಕ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸುವವರು ತಮ್ಮ ಗ್ರಾಹಕ ಐಡಿಯನ್ನು ವೆಬ್ ಪೋರ್ಟಲ್ ನಲ್ಲಿ ನಮೂದಿಸಬೇಕಾಗಿದ್ದು, ಜೊತೆಗೆ ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್ ನ್ನು ದಾಖಲಿಸಬೇಕಾಗುತ್ತದೆ. ಮೊಬೈಲ್, ಲ್ಯಾಪ್ ಟಾಪ್ ಅಥವಾ ಇಂಟರ್ ನೆಟ್ ಕೆಫೆಗಳ ಮೂಲಕವೂ ನೋಂದಣಿ ಮಾಡಬಹುದಾಗಿದ್ದು, ಹೆಚ್ಚಿನ ದಾಖಲೆಗಳ ಅಗತ್ಯವಿರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಬೆಂಗಳೂರು ಒನ್ ಕೇಂದ್ರ, ಗ್ರಾಮ ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಲಿ ಅವಕಾಶ ನೀಡಲಾಗಿದೆ. ಮೊದಲ ದಿನವೇ ಗ್ರಾಹಕರಿಂದ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಭಾನುವಾರದ ಹೊರತಾಗಿಯೂ ಎಲ್ಲಾ ಎಸ್ಕಾಮ್ ಗಳ ಅಧಿಕಾರಿಗಳೂ ನೋಂದಣಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.