ಪ್ರೇಮಿಗಳ ದಿನವೇ ಬಿಜೆಪಿ ಮೇಲೆ ಕಾಂಗ್ರೆಸ್ ಗೆ ಲವ್ –  ಹೇಗಿವೆ ನೋಡಿ ಗ್ರೀಟಿಂಗ್ ಕಾರ್ಡ್ಸ್?

ಪ್ರೇಮಿಗಳ ದಿನವೇ ಬಿಜೆಪಿ ಮೇಲೆ ಕಾಂಗ್ರೆಸ್ ಗೆ ಲವ್ –  ಹೇಗಿವೆ ನೋಡಿ ಗ್ರೀಟಿಂಗ್ ಕಾರ್ಡ್ಸ್?

ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪದ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಹಲವು ತಿಂಗಳಿನಿಂದ ಕಿಡಿಕಾರುತ್ತಿದೆ. ಕಳೆದ ಮೂರು ತಿಂಗಳಿಂದ ಪೇ ಸಿಎಂ ಅಭಿಯಾನ ಮಾಡುತ್ತಿತ್ತು. ಇದೀಗ 40% ಕಮಿಷನ್ ವಿಚಾರವಾಗಿ ಪ್ರೇಮಿಗಳ ದಿನದಂದೇ ಕಾಂಗ್ರೆಸ್ ವಿಭಿನ್ನ ಅಭಿಯಾನ ಆರಂಭಿಸಿದೆ.

ರಾಜ್ಯ ಕಾಂಗ್ರೆಸ್ ಪ್ರೇಮಿಗಳ ದಿನದಂದು ವಿಶೇಷವಾಗಿ 40% ಲವ್ ಅಭಿಯಾನವನ್ನು ಆರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸೇರಿದಂತೆ ಅನೇಕ ನಾಯಕರನ್ನು ವಿಭಿನ್ನವಾಗಿ ಚಿತ್ರಿಸಿ ಪೋಸ್ಟರ್ ಹಂಚಿಕೊಂಡಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿಮಾನ ಲ್ಯಾಂಡಿಂಗ್​ ಗೆ ನಿರಾಕರಣೆ – ‘ರಾಗಾ’ ಬಗ್ಗೆ ಬಿಜೆಪಿಗೆ ಭಯ ಶುರುವಾಯ್ತಾ..!?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ 40% ಕಮಿಷನ್ ವಿಚಾರವಾಗಿ ಕಾಂಗ್ರೆಸ್ ಪೇ ಸಿಎಂ ಅಭಿಯಾನ ಮಾಡಿತ್ತು. ಇದೀಗ 40% ಲವ್ ಎಂದು ಅಭಿಯಾನ ಆರಂಭಿಸಿದೆ. ಈ ಪೋಸ್ಟರ್ ನಲ್ಲಿ  ‘ಬಿಜೆಪಿಗರು ಶುದ್ಧ 40% ಪ್ರೇಮಿಗಳು. 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯೂಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು!! ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ…..!’ ಎಂದು ಸಿಎಂ ಬೊಮ್ಮಾಯಿ ಅವರನ್ನು ವ್ಯಂಗ್ಯವಾಡಿದೆ.

ಇನ್ನೂ ಸಂಸದ ತೇಜಸ್ವಿ ಸೂರ್ಯ ಅವರಿಗೆ ಟಾಂಗ್ ನೀಡಿರುವ ಕಾಂಗ್ರೆಸ್,  ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು ಎಂದು ವ್ಯಂಗ್ಯ ಮಾಡಿದೆ. ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು. ಸಿಎಂ ಮನೆಗೆ ಕಲ್ಲು ಹೊಡೆಯುವುದು. ರೈತರಿಗೆ ಅವಮಾನಿಸುವುದು. ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸಲಿಂಗ್ ಅಗತ್ಯವಿದೆ ಎಂದಿದೆ.

“ಪ್ರೀತಿ ಮಧುರ, ತ್ಯಾಗ ಅಮರ ಎಂದು ಟ್ವೀಟ್ ಮಾಡುವ ಮೂಲಕ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಟಾಂಗ್ ನೀಡಿದೆ. ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ. ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ ಎಂದು ಟ್ವೀಟ್ ಮಾಡಿದೆ.

ಈ ಸ್ಪೆಷಲ್ ಡಾಕ್ಟರ್‌ಗೆ ಹೃದಯ ಬಡಿತವೂ ತಿಳಿಯುತ್ತದೆ. ಲೂಟಿ ಹೊಡೆತವೂ ತಿಳಿದಿದೆ! ಈ ಡಾಕ್ಟರ್‌ಗೂ ಲವ್ವಾಗಿದೆ – ಪಿಎಸ್ ಐ ಹುದ್ದೆಗಳ ಮೇಲೆ ಎಂದು ಡಾ. ಅಶ್ವತ್ಥನಾರಾಯಣ ವಿರುದ್ಧ ಕಿಡಿ ಕಾರಿದೆ.

ಬಿಜೆಪಿಗರದ್ದು ಗೋ ಪ್ರೀತಿಯಲ್ಲ, Go ಪ್ರೀತಿ, ಬಿಜೆಪಿಗರು ಗೋವಿನ ಎದುರು ಫ್ಲರ್ಟ್ ಮಾಡುತ್ತಾರೆ ಹೊರತು ಪ್ರೀತಿಯಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರನ್ನು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ. ಮಂಡ್ಯದಲ್ಲಿ ತಿರಸ್ಕಾರದ ಪ್ರೇಮ ವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನಪ್ರೇಮಿಗೆ ನಮ್ಮ ಸಾಂತ್ವನಗಳು ಎಂದು ಹೇಳುವ ಮೂಲಕ ಕಂದಾಯ ಸಚಿವ ಆರ್. ಅಶೋಕ್ ಕಾಲೆಳೆದಿದೆ.

ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ, “ಸಚಿವ ಹುದ್ದೆ” ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ ಎಂದು ರೇಣುಕಾಚಾರ್ಯಗೆ ಕಾಂಗ್ರೆಸ್ ಲೇವಡಿ ಮಾಡಿದೆ.

ಪಂಪ್ ವೆಲ್ ಫ್ಲೈಓವರ್ ವಿಚಾರವಾಗಿ ನಳೀನ್ ಕುಮಾರ್ ಕಟೀಲ್ ಅವರನ್ನು ಕಾಂಗ್ರೆಸ್ ಕಾಲೆಳೆದಿದ್ದು, ಪ್ರೇಮವಿರುವ ಕಡೆ ದ್ವೇಷಕ್ಕೆ ಜಾಗವಿಲ್ಲ.. ಆದರೆ ದ್ವೇಷವನ್ನೇ ಪ್ರೇಮಿಸಿದರೆ….!? ದ್ವೇಷವನ್ನೇ ಪ್ರೀತಿಸಿ, ದ್ವೇಷವನ್ನೇ ಧ್ಯಾನಿಸಿ, ದ್ವೇಷದೊಂದಿಗೆ ರೊಮ್ಯಾನ್ಸ್ ಮಾಡುವ ವಿಶಿಷ್ಠ ಪ್ರೇಮಿ ಇವರು!! ಎಂದು ವ್ಯಂಗ್ಯವಾಡಿದೆ.

ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ರನ್ನೂ ಕಾಂಗ್ರೆಸ್ ಟೀಕಿಸಿದೆ. “ಸರಸ ಸಲ್ಲಾಪದ ಸಿಡಿಗಳು” ಬಿಜೆಪಿಗರ ‘ಸಿಡಿ ಸಂಭ್ರಮ’ದ ಎಪಿಸೋಡ್‌ಗಳು ನೂರಾರಿವೆಯಂತೆ. ಯತ್ನಾಳರು ಹೇಳುವ ಸಿಡಿ ಸಿಡಿಯುವುದು ಯಾವಾಗ? ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಇನ್ನೂ ಗೃಹ ಸಚಿವ ಆರಗ ಜ್ಞಾನೇಂದ್ರ ರನ್ನೂ ಕಾಂಗ್ರೆಸ್ ಕಾಲೆಳೆದಿದೆ. ‘ಪ್ರೀತಿಯ ಪಯಣದ ಹಾದಿಯಲ್ಲಿ ಕೇವಲ ಕಲ್ಲು ಮುಳ್ಳುಗಳಷ್ಟೇ ಇರುವುದಿಲ್ಲ.. ರಸ್ತೆ ಗುಂಡಿಗಳು, ಕಿತ್ತು ಹೋದ ಡಾಂಬರು ಕೂಡ ಇರುತ್ತವೆ! ಏಕೆಂದರೆ ಅದು – #40PercentLove !!’ ಅಂತಾ ವ್ಯಂಗ್ಯವಾಡಿದೆ.

‘ಪ್ರೇಮದಲ್ಲಿ ಮುಳುಗಿದವರು ಸದಾ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಮತ್ತು ಆ ಭ್ರಮೆಗಳನ್ನೇ ವಾಸ್ತವ ಎಂದು ತಿಳಿದುಕೊಂಡಿರುತ್ತಾರೆ. ಇದು ಪ್ರೇಮದ ಮೊದಲ ಹಂತ!’ ಅಂತಾ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯನ್ನು ಲೇವಡಿ ಮಾಡಿದೆ.

ಇನ್ನು, ಆರೋಗ್ಯ ಸಚಿವ ಡಾ. ಕೆ ಸುಧಾಕರ್ ರನ್ನು ಆಕ್ಸಿಜನ್ ವಿಚಾರವಾಗಿ ಟೀಕಿಸಿದ್ದು, ‘ಕನಸಲ್ಲೂ ನೀನೇ, ಮನಸಲ್ಲೂ ನೀನೇ, ಉಸಿರಲ್ಲೂ ನೀನೇ, ಹೆಸರಲ್ಲೂ ನೀನೇ.. ಹೃದಯದ “ಆಕ್ಸಿಜನ್”! ಕಮಿಷನ್ ಕೊಡಿಸುವ, ಖಜಾನೆ ತುಂಬುವ “ಆಕ್ಸಿಜನ್” ಎಂದರೆ ಇವರಿಗೆ ಅದಮ್ಯ ಪ್ರೇಮ!! ಎಂದಿದೆ.

suddiyaana