ತಪ್ಪಿ ಹೋಯ್ತು ‘ಕೈ’ ಟಿಕೆಟ್ – ‘ತೆನೆ’ ಹೊರಲು ಸಜ್ಜಾದ ರಘು ಆಚಾರ್..!

ತಪ್ಪಿ ಹೋಯ್ತು ‘ಕೈ’ ಟಿಕೆಟ್ – ‘ತೆನೆ’ ಹೊರಲು ಸಜ್ಜಾದ ರಘು ಆಚಾರ್..!

ಕಾಂಗ್ರೆಸ್ ಬಿಡುಗಡೆ ಮಾಡಿದ ಮೊದಲ ಹಂತದ ಪಟ್ಟಿಯಲ್ಲೂ ಟಿಕೆಟ್ ಘೋಷಿಸಿಲ್ಲ. ಎರಡನೇ ಹಂತದ ಪಟ್ಟಿಯಲ್ಲೂ ತಮ್ಮ ಹೆಸರು ಕಾಣಿಸಿಲ್ಲ ಎಂದು ಮಾಜಿ ಎಂಎಲ್‌ಸಿ ರಘು ಆಚಾರ್ ಬಂಡಾಯ ಎದ್ದಿದ್ದಾರೆ. ಕೈ ಪಾಳಯದ ವಿರುದ್ಧ ಕಿಡಿಕಾರಿದ್ದಾರೆ. ತೀವ್ರವಾಗಿ ಅಸಮಾಧಾನಗೊಂಡಿರುವ ರಘು ಆಚಾರ್, ಜೆಡಿಎಸ್ ಸೇರ್ಪಡೆಗೊಂಡು ಕಾಂಗ್ರೆಸ್ ವಿರುದ್ಧ ತೊಡೆತಟ್ಟಲು ಸಜ್ಜಾಗಿದ್ದಾರೆ. ಜೆಡಿಎಸ್ ಎಂಎಲ್‌ಸಿ ಟಿಎ ಶರವಣ ಅವರನ್ನು ಭೇಟಿಯಾದ ನಂತರ ಚಿತ್ರದುರ್ಗದಲ್ಲಿ ಹೇಳಿಕೆ ನೀಡಿದ ರಘು ಆಚಾರ್, ಏಪ್ರಿಲ್ 14ರ ಮಧ್ಯಾಹ್ನ 12.07ಕ್ಕೆ ಜೆಡಿಎಸ್ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅತ್ತ ‘ತೆನೆ’ ಇಳಿಸಿದ್ದಾಯ್ತು.. ಇತ್ತ ‘ಕೈ’ ಹಿಡಿದಾಯ್ತು..ಆದರೂ ಟಿಕೆಟ್ ಮಿಸ್ – ವೈಎಸ್‌ವಿ ದತ್ತ ಅತಂತ್ರ, ಅಭಿಮಾನಿಗಳಿಗೆ ಭಾವುಕ ಪತ್ರ

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿ ಜೆ ಪಿ ಭವನದಲ್ಲಿ ಜೆಡಿಎಸ್  ಸೇರ್ಪಡೆಯಾಗಲಿದ್ದೇನೆ ಎಂದು ರಘು ಆಚಾರ್ ಸ್ಪಷ್ಪಪಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸಲು ಶ್ರಮಿಸುತ್ತೇನೆ. ಜಿಲ್ಲೆಯ ಆರಕ್ಕೆ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸೋಲಲಿದೆ. ಸ್ವಾಭಿಮಾನಕ್ಕೆ ಚ್ಯುತಿ ತಂದವರಿಗೆ ಚುನಾವಣೆಯಲ್ಲಿ ಉತ್ತರ ನೀಡುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ರಘು ಆಚಾರ್ ಕಿಡಿಕಾರಿದ್ದಾರೆ. ಜೆಡಿಎಸ್ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ವರಿಷ್ಠರು ನನಗೆ ಟಿಕೆಟ್ ನೀಡುವ ಬಗ್ಗೆ ತೀರ್ಮಾನಿಸುತ್ತಾರೆ. ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಿದರೂ ನಾನು ಸಿದ್ಧನಾಗಿರುವೆ. ಇಲ್ಲವಾದರೆ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ. ಜೆಡಿಎಸ್ ಸೇರ್ಪಡೆ ಬಗ್ಗೆ ಈಗಷ್ಟೇ ಚರ್ಚೆಯಾಗಿದೆ, ಟಿಕೆಟ್‌ಗೆ ಸಮಯಬೇಕು ಎಂದು ರಘು ಆಚಾರ್ ಹೇಳಿದ್ದಾರೆ.

ಕಾಂಗ್ರೆಸ್ ಬಿಡುಗಡೆ ಮಾಡಿರುವ 2ನೇ ಪಟ್ಟಿಯಲ್ಲಿ ಚಿತ್ರದುರ್ಗದಿಂದ ಕೆ.ಸಿ. ವೀರೇಂದ್ರ ಪಪ್ಪಿಗೆ ಕೈ ಟಿಕೆಟ್ ಘೋಷಣೆಯಾಗಿದೆ.

suddiyaana