ಮಂಡ್ಯದಲ್ಲಿ ‘ಕೈ’ ಸೈಲೆಂಟ್ ಗೇಮ್ – ಮತ್ತೊಮ್ಮೆ ಚುನಾವಣೆಗೆ ಧುಮುಕಲು ಮೋಹಕ ತಾರೆ ರಮ್ಯಾ ಪ್ಲ್ಯಾನ್

ಮಂಡ್ಯದಲ್ಲಿ ‘ಕೈ’ ಸೈಲೆಂಟ್ ಗೇಮ್ –  ಮತ್ತೊಮ್ಮೆ ಚುನಾವಣೆಗೆ ಧುಮುಕಲು ಮೋಹಕ ತಾರೆ ರಮ್ಯಾ ಪ್ಲ್ಯಾನ್

ಲೋಕಸಭಾ ಚುನಾವಣೆಗೆ ಎರಡು ತಿಂಗಳಷ್ಟೇ ಬಾಕಿ ಇದೆ. ಕರ್ನಾಟಕದಲ್ಲಿ ಕ್ಷೇತ್ರವಾರು ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗೇ ನಡೀತಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ರೆ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಟ ಮಾಡೋಕೆ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ವಿವಿಧ ಕ್ಷೇತ್ರಗಳ ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸುತ್ತಿದ್ದಾರೆ. ಆಯಾ ಕ್ಷೇತ್ರಗಳ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಆದ್ರೆ ಮಂಡ್ಯ ಕ್ಷೇತ್ರದ ವಿಚಾರವಾಗಿ ಮಾತ್ರ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ರಮ್ಯ ರೀ ಎಂಟ್ರಿ ಕೊಡ್ತಾರೆ, ಸಚಿವ ಚೆಲುವರಾಯಸ್ವಾಮಿಯವ್ರೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸ್ತಾರೆ ಎನ್ನಲಾಗ್ತಿದೆ. ಆದ್ರೆ ಕಾಂಗ್ರೆಸ್ಸಿಗರ ಈ ಸೈಲೆಂಟ್ ಗೇಮ್ ಹಿಂದೆ ಬೇರೆಯದ್ದೇ ಲೆಕ್ಕಾಚಾರ ಇದೆ.

ಇದನ್ನೂ ಓದಿ: ರಾಷ್ಟ್ರ ಮಟ್ಟದಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದ ಸದ್ದು – ಅಭ್ಯರ್ಥಿ ರೇಸ್ ನಲ್ಲಿ ಘಟಾನುಘಟಿಗಳ ತಂತ್ರಗಾರಿಕೆ

ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಿಂದ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋದು ಫೈನಲ್ ಆಗಿಲ್ಲ. ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿಯವ್ರೇ ಅಭ್ಯರ್ಥಿ ಆಗಬಹುದು ಇಲ್ಲ ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಸ್ಪರ್ಧೆ ಮಾಡ್ಬೋದು ಎಂದು ಚರ್ಚೆಯಾಗ್ತಿದೆ. ಆದ್ರೆ ಈ ಬಗ್ಗೆ ಕ್ಲಾರಿಟಿ ಇಲ್ಲ. ಇನ್ನು ಸಂಸದೆ ಸುಮಲತಾ ಅಂಬರೀಶ್ ನಡೆ ಕೂಡ ನಿಗೂಢವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಈ ಸಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಟಿಕೆಟ್ ಸುಮಲತಾಗೆ ಸಿಗೋದು ಡೌಟ್ ಇದೆ. ಹೀಗಾಗಿ ಸುಮಲತಾ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸೋ ಮಾತುಗಳನ್ನಾಡಿದ್ದಾರೆ. ಸುಮಲತಾಗೆ ಬಿಜೆಪಿ ಟಿಕೆಟ್ ಸಿಗದೇ ಇದ್ದ ಪಕ್ಷದಲ್ಲಿ ಅವ್ರನ್ನ ಕಾಂಗ್ರೆಸ್ ಗೆ ಸೆಳೆಯೋ ಸಾಧ್ಯತೆಯೂ ಇದೆ. ಮೊದ್ಲಿಂದಲೂ ಮಂಡ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ ಅನ್ನೋದು ಗೊತ್ತಿರುವ ಕಾಂಗ್ರೆಸ್​ಗೆ ನೇರ ಎದುರಾಳಿ ಅಂದ್ರೆ ಅದು ಜೆಡಿಎಸ್. ಆದ್ರೀಗ ಸುಮಲತಾ ಕೂಡ ಇರೋದ್ರಿಂದ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಇದೇ ಕಾರಣಕ್ಕೆ ಮಂಡ್ಯದಲ್ಲಿ ಯಾವ ಅಭ್ಯರ್ಥಿಯನ್ನ ಸ್ಪರ್ಧೆಗೆ ಇಳಿಸೋದು ಅನ್ನೋ ಬಗ್ಗೆ ನಿರ್ಧಾರ ಕೈಗೊಂಡಿಲ್ಲ.

ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಮಾಜಿ ಸಂಸದೆ ರಮ್ಯಾ ಹೆಸರು ಭಾರೀ ಚರ್ಚೆಯಲ್ಲಿದೆ. ಖುದ್ದು ಕಾಂಗ್ರೆಸ್ ಶಾಸಕರೇ ರಮ್ಯಾ ಮಂಡ್ಯದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಮಾಹಿತಿ ನೀಡಿದ್ದಾರೆ. ಅಲ್ಲದೆ ಹಲವರು ತೆರೆಮರೆಯಲ್ಲೇ ಟಿಕೆಟ್​ಗಾಗಿ ಕಸರತ್ತು ಆರಂಭಿಸಿದ್ದಾರೆ.

ಮಂಡ್ಯ ಕ್ಷೇತ್ರದಿಂದಲೇ ಮತ್ತೊಮ್ಮೆ ಚುನಾವಣಾ ಅಖಾಡಕ್ಕೆ ಧುಮುಕಲು ಮಾಜಿ ಸಂಸದೆ ರಮ್ಯಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ.  ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಾಣಿಗ ಅವ್ರೇ ಖುದ್ದು ಈ ಮಾಹಿತಿ ಹಂಚಿಕೊಂಡಿದ್ದರು. ನಟಿ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ರಮ್ಯಾ ಅವರು ಮಂಡ್ಯದಿಂದ ಸ್ಪರ್ಧೆ ಮಾಡಿದ್ರೆ ನಾನು ಸಂಪೂರ್ಣವಾಗಿ ಸಪೋರ್ಟ್ ಮಾಡ್ತೀನಿ. ಹಾಗೇ ಮಾಜಿ ಸಿಎಂ ಎಸ್.​​ಎಂ ಕೃಷ್ಣ ಅವರ ಪುತ್ರಿ ಶಾಂಭವಿ ಸೇರಿದಂತೆ ಹಲವರು ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ ಎಂದಿದ್ದರು. ಆದ್ರೆ ಕಾಂಗ್ರೆಸ್​ನಲ್ಲಿ ಟಿಕೆಟ್ ಆಕಾಂಕ್ಷಿಗಳು ಕ್ಯೂನಲ್ಲಿ ನಿಂತಿದ್ರೂ ಅವ್ರಿಗೆ ಕ್ಷೇತ್ರದಲ್ಲಿ ಅಷ್ಟೊಂದು ಚಾರ್ಮ್ ಇಲ್ಲ. ಜಿಲ್ಲೆಯಲ್ಲಿ ಹಿಡಿತ ಹೊಂದಿರುವ ನಾಯಕರೂ ಇಲ್ಲ. ಇದಕ್ಕಾಗೇ ಸಚಿವ ಚೆಲುವರಾಯಸ್ವಾಮಿ ಅವ್ರನ್ನೇ ಲೋಕಸಭೆಗೆ ನಿಲ್ಲಿಸೋಣ ಎಂದು ಕಾಂಗ್ರೆಸ್ ನಾಯಕರೇ ಸಲಹೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರೇನೋ ಅಭ್ಯರ್ಥಿಗಳು ಇದ್ದಾರೆ ಅಂತಿದ್ದಾರೆ. ಇತ್ತ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರೋ ಕುಮಾರಣ್ಣ ಹೇಗಾದ್ರೂ ಮಾಡಿ ಮಂಡ್ಯ ಕ್ಷೇತ್ರವನ್ನ ತಮ್ಮ ಬಳಿಯೇ ಉಳಿಸಿಕೊಳ್ಳೋಕೆ ನಾನಾ ಕಸರತ್ತು ಮಾಡ್ತಿದ್ದಾರೆ. ಅತ್ತ ಬಿಜೆಪಿ ಹೈಕಮಾಂಡ್​ ಹೆಚ್.ಡಿ ಕುಮಾರಸ್ವಾಮಿಯವ್ರೇ ನೀವೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ. ನಮ್ಮ ಸರ್ಕಾರ ಬಂದ್ರೆ ನಿಮ್ಮನ್ನೂ ಕೇಂದ್ರ ಸಚಿವ ಮಾಡ್ತೀವಿ ಅಂತಾ ಆಫರ್ ಕೊಟ್ಟಿದ್ದಾರೆ. ಹೀಗಾಗಿ ಕುಮಾರಣ್ಣ ಯಾವ ನಿರ್ಧಾರ ಕೈಗೊಳ್ತಾರೆ..? ಸುಮಲತಾ ನಡೆ ಏನು ಅನ್ನೋದನ್ನ ನೋಡಿ ಕಾಂಗ್ರೆಸ್ ಕೂಡ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದೆ.

Sulekha