ಉಳಿದ 100 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಗೆ ‘ಕೈ’ ಕಸರತ್ತು – ನಾಯಕರ ಬೆನ್ನು ಬಿದ್ದ ಟಿಕೆಟ್ ಆಕಾಂಕ್ಷಿಗಳು!

ಉಳಿದ 100 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಗೆ ‘ಕೈ’ ಕಸರತ್ತು – ನಾಯಕರ ಬೆನ್ನು ಬಿದ್ದ ಟಿಕೆಟ್ ಆಕಾಂಕ್ಷಿಗಳು!

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಪಕ್ಷಗಳಲ್ಲಿ ಟಿಕೆಟ್ ಫೈಟ್ ಜೋರಾಗಿದೆ. 224 ಕ್ಷೇತ್ರಗಳ ಪೈಕಿ ಮೊದಲನೇ ಪಟ್ಟಿಯಲ್ಲಿ ಕಾಂಗ್ರೆಸ್ 124 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿತ್ತು. ಆದರೆ ಉಳಿದಿರೋ 100 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡುವುದೇ ಸವಾಲಾಗಿ ಪರಿಣಮಿಸಿದೆ. ಟಿಕೆಟ್ ಆಕಾಂಕ್ಷಿಗಳ ನಡುವೆ ಪೈಪೋಟಿ ಜೋರಾಗಿದ್ದು ಯಾರನ್ನ ಆಯ್ಕೆ ಮಾಡಬೇಕು ಅನ್ನುವುದೇ ಗೊಂದಲ ಸೃಷ್ಟಿಸಿದೆ.

ಏಪ್ರಿಲ್ 10 ರೊಳಗಾಗಿ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಮಾಡುವ ಚಿಂತನೆ ನಡೆಸುತ್ತಿದೆ. ಉಳಿದ 100 ಕ್ಷೇತ್ರಗಳ ಪೈಕಿ 70 ರಿಂದ 75 ಅಭ್ಯರ್ಥಿಗಳ ಹೆಸರುಗಳನ್ನು ಎರಡನೇ ಪಟ್ಟಿಯಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ. ಉಳಿದ 25  ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕೊನೆಯ ಗಳಿಗೆಯಲ್ಲಿ ಮೂರನೇ ಹಂತದ ಪಟ್ಟಿಯಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಚುನಾವಣಾ ಅಕ್ರಮ – ಇಲ್ಲಿಯವರೆಗೆ ವಶಕ್ಕೆ ಪಡೆದ ಹಣವೆಷ್ಟು ಗೊತ್ತಾ?

ಮತ್ತೊಂದೆಡೆ ಏಪ್ರಿಲ್ 5 ರಂದು ರಾಹುಲ್ ‌ಗಾಂಧಿ ಕೋಲಾರಕ್ಕೆ‌ ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಭೇಟಿ ಬಳಿಕವಷ್ಟೇ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಅಂತಿಮಗೊಳಿಸಿದ ಹೆಸರನ್ನು ಕೇಂದ್ರ ಚುನಾವಣಾ ಸಮಿತಿ ಸಭೆಗೆ ಕಳಿಸಿಕೊಡಲಾಗುತ್ತದೆ. ಅಲ್ಲಿ ಚರ್ಚೆ ಆದ ಬಳಿಕ ಹೆಸರು ಅಂತಿಮಗೊಳ್ಳಲಿದೆ. ಎರಡನೇ ಹಂತದ ಪಟ್ಟಿ ಬಿಡುಗಡೆ ಕಸರತ್ತು ನಡೆಯುತ್ತಿದ್ದು, ಗುರುವಾರ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯುತ್ತಿದೆ. ಎರಡನೇ ಹಂತದ ಟಿಕೆಟ್ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಒಂದು ಸುತ್ತಿನ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿದೆ. ಈ ಸಭೆಯಲ್ಲಿ 34 ಮಂದಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ. ಇನ್ನು‌ ಉಳಿದ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಜಟಿಲವಾಗಿದೆ. ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲು ಸಾಕಷ್ಟು ಲಾಬಿ ನಡೆಯುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದು, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಲಾಬಿ ನಡೆಸುತ್ತಿದ್ದಾರೆ.

suddiyaana