ಪ್ರಜ್ವಲ್ ರಾಸಲೀಲೆಗೆ JDSನಲ್ಲಿ ಬಿರುಗಾಳಿ – 13 ದಳ ಶಾಸಕರು ಕಾಂಗ್ರೆಸ್ ಸೇರ್ಪಡೆ?
ಸಿದ್ದು, ಡಿಕೆಶಿ ರಣವ್ಯೂಹ ಎಂಥಾದ್ದು?

ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ವೋಟಿಂಗ್ ಹೊತ್ತಲ್ಲೇ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದರಿಂದ ಮತದಾರರ ಒಲವು ಯಾರ ಕಡೆ ವಾಲಿದೆ ಅನ್ನೋ ಕ್ಯೂರಿಯಾಸಿಟಿ ಇದೆ. ಹಾಸನ ಸಂಸದರ ರಾಸಲೀಲೆ ಪ್ರಕರಣದ ನಡುವೆ ಕರ್ನಾಟಕ ಸರ್ಕಾರ ಪತನದ ಸುದ್ದಿ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾದಾಗಿನಿಂದ್ಲೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೇಳಿಕೊಂಡು ಬರುತ್ತಿದ್ದಾರೆ. ಇದೀಗ ಸರ್ಕಾರ ಪತನ ಅನ್ನುತ್ತಿದ್ದವರಿಗೆ ಶಾಕ್ ಕೊಡಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಿಗ್ ಪ್ಲಾನ್ ಮಾಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರ ಉಳಿಯಲ್ಲ ಎನ್ನುತ್ತಿದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ ತಿರುಗೇಟು ಕೊಡಲು ಕಾಂಗ್ರೆಸ್ ಅಂಗಳದಲ್ಲಿ ಮಾಸ್ಟರ್ ಪ್ಲಾನ್ವೊಂದು ಸಿದ್ಧಗೊಂಡಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರೋದು ಡೌಟ್? – ಫ್ಲೈಟ್ ಟಿಕೆಟ್ ರದ್ದು.. ಹಣ ವಾಪಸ್ ಪಡೆಯದೆ ಗೊಂದಲ ಸೃಷ್ಟಿಸಿದ ನಡೆ
ರಿವರ್ಸ್ ಆಪರೇಷನ್?
ಸದ್ಯ ಲೋಕಸಭಾ ಚುನಾವಣೆ ಹೊತ್ತಲ್ಲೇ ರಾಜ್ಯ ರಾಜಕೀಯದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ಕೋಲಾಹಲ ಎಬ್ಬಿಸಿದೆ. ಇದೇ ಪ್ರಕರಣದಿಂದ ಜೆಡಿಎಸ್ನ ಅನೇಕ ಶಾಸಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇತ್ತ ಜೆಡಿಎಸ್ ಶಾಸಕರಾಗಿರೋ ಕಾರಣ ಕ್ಷೇತ್ರದ ಅಭಿವೃದ್ದಿಯೂ ಆಗುತ್ತಿಲ್ಲ. ತಮಗೆ ಬೇಕಾದ ಸಬ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿಸಲಾಗುತ್ತಿಲ್ಲ. ಕ್ಷೇತ್ರದ ಅಭಿವೃದ್ದಿಯಾಗಬೇಕಾದರೆ ಕೈ ಸೇರಬೇಕು ಅಥವಾ ತಟಸ್ಥವಾಗಿರಬೇಕು ಎಂದು ತಮ್ಮೊಳಗೆ ಚರ್ಚೆ ನಡೆಸುತ್ತಿದ್ದಾರಂತೆ. ಈಗಾಗಲೇ ಜೆಡಿಎಸ್ನ ಏಳಕ್ಕೂ ಹೆಚ್ಚು ಶಾಸಕರು ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಜೊತೆ ಹೋಗಲು ಮುಂದಾಗಿದ್ದಾರೆ ಎನ್ನಲಾಗಿದೆ. 13 ಶಾಸಕರ ಗುಂಪು ರಚನೆಯಾದರೆ, ಅವರೆಲ್ಲರನ್ನೂ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳುವ ಕುರಿತು ಚರ್ಚೆಗಳು ನಡೆದಿವೆ. ಒಂದು ವೇಳೆ ಶಾಸಕರ ಸಂಖ್ಯೆ ಕಡಿಮೆಯಾದರೆ ಬಿಜೆಪಿ ಎಂಎಲ್ಎಗಳಾದ ಎಸ್ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಕರೆದುಕೊಂಡು ಬರೋ ಸಾಧ್ಯತೆ ಇದೆ. ಒಂದು ವೇಳೆ ಜೆಡಿಎಸ್ ಅಸಮಾಧಾನಿತ ಹಾಗೂ ಬಿಜೆಪಿಯಿಂದ ಒಂದು ಹೆಜ್ಜೆ ಹೊರಗೆ ಇರಿಸಿರೋ ಶಾಸಕರ ಸೇರಿಸಿ ತಟಸ್ಥ ಬಣವನ್ನೂ ರಚಿಸುವ ಚಿಂತನೆಗಳು ನಡೆದಿವೆ ಎನ್ನಲಾಗಿದೆ.
ಜೆಡಿಎಸ್ ಅಸಮಾಧಾನಿತ ಕೆಲ ಶಾಸಕರು ಪಕ್ಷದಲ್ಲಿದ್ದುಕೊಂಡು ಕಾಂಗ್ರೆಸ್ ಪರವಾಗಿರುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಜೆಡಿಎಸ್ನ ಅಸಮಾಧಾನಿತ ಕೆಲ ಶಾಸಕರಿಂದಲೇ ಮುಂದಿನ ರೂಪುರೇಷೆ ಬಗ್ಗೆ ರಹಸ್ಯ ಮಾತುಕತೆ ನಡೆದಿದೆ. ಒಟ್ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರವನ್ನ ಬೀಳಿಸೋ ಮಾತನಾಡ್ತಿದ್ರೆ ಅತ್ತ ತೆರೆ ಮರೆಯಲ್ಲೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ರಿವರ್ಸ್ ಆಪರೇಷನ್ ನಡೆಸೋಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಅವ್ರದ್ದೇ ಶಾಸಕರನ್ನ ತಮ್ಮತ್ತ ಸೆಳೆದುಕೊಂಡು ಅವ್ರ ಬಲವನ್ನ ಮತ್ತಷ್ಟು ಕುಗ್ಗಿಯೋ ರಣತಂತ್ರ ಹೆಣೆದಿದ್ದಾರೆ.

ನೋಡಿರಿ

