‘ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ವಿವೇಕಾನಂದರ ನೆಪ’ – ಕಾಂಗ್ರೆಸ್ ಟ್ವೀಟ್
‘ಸಿಎಂ ಅಂಕಲ್’ ಗೆ ಕಾಂಗ್ರೆಸ್ ಪ್ರಶ್ನೆ

‘ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ವಿವೇಕಾನಂದರ ನೆಪ’ – ಕಾಂಗ್ರೆಸ್ ಟ್ವೀಟ್‘ಸಿಎಂ ಅಂಕಲ್’ ಗೆ ಕಾಂಗ್ರೆಸ್ ಪ್ರಶ್ನೆ

ರಾಜ್ಯದ ಸರ್ಕಾರಿ ಶಾಲೆಗಳಿಗೆ ಏಕರೂಪದ ಬಣ್ಣ ಬಳಿಯಲು ಚಿಂತನೆ ನಡೆಸುತ್ತಿರುವ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತಿದೆ. ಈ ವಿಚಾರವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಈಗ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಿಎಂ ಅಂಕಲ್ ಎಂದು ಹ್ಯಾಷ್‌ಟ್ಯಾಗ್‌ ಬಳಸಿ ಶಾಲಾ ಮಕ್ಕಳ ರೀತಿಯಲ್ಲಿ ಪ್ರಶ್ನೆ ಕೇಳಲು ಶುರು ಮಾಡಿದೆ. ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ವಿವೇಕಾನಂದರ ನೆಪ ಹೇಳುವ ಸರ್ಕಾರ ವಿವೇಕಾನಂದರ ನೈಜ ತತ್ವಗಳನ್ನು ಜಾರಿಗೊಳಿಸಲು ಮುಂದಾಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದೆ. ಜೇಮ್‌ಶೇಟ್ ಜಿ ಟಾಟಾ ಅವರ ಮೂಲಕ ಭಾರತದಲ್ಲಿ ಕೈಗಾರಿಕೆ ಮತ್ತು ವೈಜ್ಞಾನಿಕ ಕ್ರಾಂತಿಗೆ ವಿವೇಕಾನಂದರು ಕಾರಣರಾಗಿದ್ದರು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ತಾವು ಕೆಲಸ ಮಾಡ್ತಿಲ್ಲವೇಕೆ? ಎಂದು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಶ್ನಿಸಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ‘ವಿವೇಕ ಕೊಠಡಿ’- ಗೋಡೆಗೆ ಕೇಸರಿ ಬಣ್ಣ ಬಳಿಯುತ್ತಾ ಸರ್ಕಾರ?

ವಿವೇಕಾನಂದರ ಉಡುಗೆಯ ಬಣ್ಣ ಕೇಸರಿಯನ್ನೇ ಏಕರೂಪವಾಗಿ ಶಾಲಾ ಕೊಠಡಿಗಳಿಗೂ ಬಳಿಯಲು ಸರ್ಕಾರ ಚಿಂತನೆ ನಡೆಸಿದೆ. 992 ಕೋಟಿ ರೂಪಾಯಿ ವೆಚ್ಚದಲ್ಲಿ ವಿವೇಕ ಯೋಜನೆಗೆ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಇದೇ ವೇಳೆ ಸಿಎಂ ಬೊಮ್ಮಾಯಿ, ಶಾಲಾ ಕೊಠಡಿಗಳ ನಿರ್ಮಾಣದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ. ಕೇಸರಿ ಎಂದರೆ ನಿಮಗೆ ಭಯವೇಕೆ? ನಮ್ಮ ರಾಷ್ಟ್ರಧ್ವಜದಲ್ಲೂ ಕೇಸರಿ ಇದೆ. ಸ್ವಾಮಿ ವಿವೇಕಾನಂದರು ಕೂಡ ಕೇಸರಿ ಬಟ್ಟೆ ಹಾಕಿಕೊಳ್ಳುತ್ತಿದ್ದರು ಎಂದು ಸರ್ಕಾರದ ಯೋಜನೆಯನ್ನು ಸಮರ್ಥಿಸಿಕೊಂಡಿದ್ದರು. ಇದೀಗ ಮತ್ತೆ ಸರ್ಕಾರದ ನಡೆಯನ್ನ ಟ್ವೀಟ್ ಮೂಲಕ ಕಾಂಗ್ರೆಸ್ ಪ್ರಶ್ನಿಸಿದೆ. ಅಲ್ಲದೆ ಶಾಲಾ ಮಕ್ಕಳಿಗೆ ನವೆಂಬರ್‌ ತಿಂಗಳು ಬಂದರೂ ಸರಿಯಾಗಿ ಸಮವಸ್ತ್ರ ಪೂರೈಕೆ ಮಾಡದೆ, ಕೇವಲ ಕೊಠಡಿಗಳಿಗೆ ಬಣ್ಣ ಬಳಿಯುವ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡಲು ಹೊರಟಿದೆ ಎಂದು ಆರೋಪಿಸಿದೆ.

suddiyaana