ಕೋಲಾರದಲ್ಲಿಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ – ಸಿದ್ದು ಸ್ಪರ್ಧಿಸುವ ಕ್ಷೇತ್ರದಲ್ಲಿ ಅದೆಷ್ಟು ಲೆಕ್ಕಾಚಾರ..!?  

ಕೋಲಾರದಲ್ಲಿಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ – ಸಿದ್ದು ಸ್ಪರ್ಧಿಸುವ ಕ್ಷೇತ್ರದಲ್ಲಿ ಅದೆಷ್ಟು ಲೆಕ್ಕಾಚಾರ..!?  

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಸಲ ಕೋಲಾರ ಕ್ಷೇತ್ರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅದ್ರಲ್ಲೂ ಕಾಂಗ್ರೆಸ್​ ಮಾಸ್ ಲೀಡರ್ ಸಿದ್ದರಾಮಯ್ಯ ಪಾಲಿಗೆ ರಾಜಕೀಯ ಜೀವನದ ಮಾಡು ಇಲ್ಲವೇ ಮಡಿ ಹೋರಾಟ ನಡೆಯಲಿದೆ. ಇದೇ ಕೋಲಾರ ಕ್ಷೇತ್ರದಲ್ಲಿ ಇವತ್ತು ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ನಡೆಯಲಿದ್ದು, ಹತ್ತಾರು ಲೆಕ್ಕಾಚಾರಗಳು ಶುರುವಾಗಿವೆ.

ಇದನ್ನೂ ಓದಿ:ದೆಹಲಿ ಗಣರಾಜ್ಯೋತ್ಸವದ ಪರೇಡ್ ಗೆ ಮಳೆ ಭೀತಿ! – ಜ. 24 ರಿಂದ 27 ರವರೆಗೆ ಭಾರಿ ಮಳೆ ಸಾಧ್ಯತೆ

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ದಿನ ದಿನಕ್ಕೂ ರಂಗೇರುತ್ತಿದೆ. ಎಲೆಕ್ಷನ್ ಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ಮೂರು ರಾಜಕೀಯ ಪಕ್ಷಗಳು ಪ್ರಚಾರದ ತಂತ್ರಗಾರಿಕೆ ಶುರು ಮಾಡಿವೆ. ಮತದಾರರ ಮನಗೆಲ್ಲಲು ಜಿದ್ದಾಜಿದ್ದಿಗೆ ಬಿದ್ದು ಉಚಿತ ಆಫರ್​ಗಳನ್ನ ಕೊಡ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ಇವತ್ತು ಕಾಂಗ್ರೆಸ್​ನ ಪ್ರಜಾಧ್ವನಿ ಯಾತ್ರೆ ಕೋಲಾರ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಕೋಲಾರ ಹೊರವಲಯದ ಟಮಕ ಬಳಿ ಮಧ್ಯಾಹ್ನ ಸಮಾವೇಶ ಪ್ರಾರಂಭವಾಗಲಿದೆ. ವಿಪಕ್ಷ ನಾಯಕ  ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿರುವ ಹಿನ್ನೆಲೆ ಕೋಲಾರದ ಪ್ರಜಾಧ್ವನಿ ಸಮಾವೇಶ ಮಹತ್ವ ಪಡೆದುಕೊಂಡಿದೆ. ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಡಾ. ಜಿ.ಪರಮೇಶ್ವರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಶಾಸಕ ಕೃಷ್ಣಭೈರೇಗೌಡ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.  ಇಂದಿನ ಕಾಂಗ್ರೆಸ್ ಸಮಾವೇಶದಲ್ಲಿ 50 ಸಾವಿರ ಜನ ಸೇರುವ ನಿರೀಕ್ಷೆ ಇದೆ.

ಕೋಲಾರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯೋದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯರನ್ನ ಗೆಲ್ಲಿಸೋಕೆ ಒಂದು ಬಣ ಸಿದ್ಧವಾಗಿದ್ರೆ, ಮತ್ತೊಂದು ಬಣ ಸೋಲಿಸೋಕೆ ರಣವ್ಯೂಹ ಹೆಣೆಯುತ್ತಿದೆ. ಈಗಾಗಲೇ ಸಿದ್ದರಾಮಯ್ಯ ಇದು ನನ್ನ ಜೀವನದ ಕೊನೇ ಚುನಾವಣೆ ಅಂತಾ ಹೇಳಿದ್ದು, ಬಳಿಕ ರಾಜಕೀಯ ನಿವೃತ್ತಿ ಪಡೆಯೋದಾಗಿ ತಿಳಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕೋಲಾರ ಕ್ಷೇತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಎಲೆಕ್ಷನ್ ಬಂದಾಗ ಪಕ್ಷಗಳು ಉಚಿತ ಆಫರ್​ಗಳನ್ನ ಕೊಡೋದು ಹೊಸತೇನಲ್ಲ. ಆದ್ರೆ ಈ ಸಲ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಮೂರೂ ಪಕ್ಷಗಳು ಪಣ ತೊಟ್ಟಿವೆ. ಇದೇ ಕಾರಣಕ್ಕೆ ಕಾಂಗ್ರೆಸ್​ ಪ್ರಚಾರದ ಭರಾಟೆಯಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕೆಲವೊಂದಿಷ್ಟು ಉಚಿತ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್​ ಬಸ್​ ಯಾತ್ರೆ ಮೂಲಕ ರಾಜ್ಯ ಸುತ್ತುತ್ತಿದ್ರೆ ಜೆಡಿಎಸ್​ ಪಂಚರತ್ನ ಯಾತ್ರೆ ಮೂಲಕ ಪಂಚ ಯೋಜನೆಗಳನ್ನು ಮುಂದಿಟ್ಟುಕೊಂಡು ಜನಮನ ಗೆಲ್ಲಲು ಯಾತ್ರೆ ನಡೆಸುತ್ತಿದ್ದಾರೆ. ಬಿಜೆಪಿ ಕೂಡ  ಮನೆಮನೆಗೂ ಸರ್ಕಾರದ ಕಾರ್ಯಕ್ರಮಗಳನ್ನ ಮುಟ್ಟಿಸಲು  ವಿಜಯ ಸಂಕಲ್ಪ ಅಭಿಯಾನ ಪ್ರಾರಂಭಿಸಿದೆ. ಹೀಗೆ ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ಬ್ಯುಸಿಯಾಗಿದ್ದು, ರಾಜಕೀಯ ಅಖಾಡ ಮತ್ತಷ್ಟು ರಂಗೇರುತ್ತಿದೆ.

suddiyaana