ಲೋಕಸಭಾ ಚುನಾವಣೆಗೆ ಸಚಿವರನ್ನ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲ್ಯಾನ್ – ಒಪ್ಪಿಗೆ ಜೊತೆ ಮಂತ್ರಿಗಳ ಭರ್ಜರಿ ಡಿಮ್ಯಾಂಡ್

ಲೋಕಸಭಾ ಚುನಾವಣೆಗೆ ಸಚಿವರನ್ನ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲ್ಯಾನ್ – ಒಪ್ಪಿಗೆ ಜೊತೆ ಮಂತ್ರಿಗಳ ಭರ್ಜರಿ ಡಿಮ್ಯಾಂಡ್

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ತಿದೆ. ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸಿರುವ ಕಾಂಗ್ರೆಸ್‌ ಕೆಲವು ಸಚಿವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದೆ. ಆದರೆ, ಚುನಾವಣೆಗೆ ಸ್ಪರ್ಧಿಸಲು ಒಪ್ಪಿಕೊಳ್ಳುತ್ತಿರುವ ಸಚಿವರು ತಮ್ಮ ಮಕ್ಕಳಿಗೆ ಬೈ ಎಲೆಕ್ಷನ್‌ ಟಿಕೆಟ್‌ ನೀಡಬೇಕೆಂಬ ಷರತ್ತು ಮುಂದಿಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಲೋಕಸಭಾ ಚುನಾವಣೆಗೆ ಇನ್ನು 9 ತಿಂಗಳು ಮಾತ್ರ ಬಾಕಿಯಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್‌ ಬಿಗ್‌ ಪ್ಲ್ಯಾನ್‌ ಮಾಡುತ್ತಿದೆ. ಈ ರಣತಂತ್ರದ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿನ ಕೆಲ ಸಚಿವರನ್ನು ಚುನಾವಣೆಗೆ ನಿಲ್ಲಿಸುವ ಬಗ್ಗೆ ಕಾಂಗ್ರೆಸ್‌ ಯೋಚನೆ ಮಾಡುತ್ತಿದೆ. ಅದರಲ್ಲೂ ಹೆಚ್ಚಿನ ವರ್ಚಸ್ಸು, ಜನಪ್ರಿಯತೆ ಇರುವ ಸಚಿವರನ್ನು ಲೋಕಕದನ ಕಣಕ್ಕೆ ಇಳಿಸುವ ಚಿಂತನೆಯಲ್ಲಿ ಕಾಂಗ್ರೆಸ್‌ ನಾಯಕರು ಇದ್ದಾರೆ. ಕಾಂಗ್ರೆಸ್‌ ವರಿಷ್ಠರ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದಿಷ್ಟು ಸಚಿವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಹಮತ ಹೊಂದಿದ್ದರೆ, ಕೆಲ ಸಚಿವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಆಗಸ್ಟ್‌ 14 ರಂದು ಕೆಪಿಸಿಸಿ ಸಭೆ ಕರೆಯಲಾಗಿದ್ದು, ಆ ಸಭೆ ಬಳಿಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕರು ಮಾಹಿತಿ ನೀಡಿದ್ದಾರೆ. ಹಲವು ಸಚಿವರ ಹೆಸರು ಈಗಾಗಲೇ ಹಲವು ಕ್ಷೇತ್ರಗಳಿಗೆ ಕೇಳಿ ಬಂದಿದೆ ಎಂಬುದರ ವಿವರ ಇಲ್ಲಿದೆ.

ಇದನ್ನೂ ಓದಿ : ಗುತ್ತಿಗೆದಾರರು ಸ್ವಾರ್ಥ ಹಾಗೂ ದುರುದ್ದೇಶದಿಂದ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ – ಸಿಎಂ ಸಿದ್ದರಾಮಯ್ಯ 

ಚುನಾವಣೆಗೆ ಸಚಿವರನ್ನು ಕಣಕ್ಕಿಳಿಸುವ ನಿರ್ಧಾರದ ಹಿಂದೆ ಕಾಂಗ್ರೆಸ್‌ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ ಮಾಡುತ್ತಿದೆ. ಲೋಕಸಭಾ ಚುನಾವಣೆಗೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು, ಅವರು ಚುನಾವಣೆಯಲ್ಲಿ ಗೆದ್ದರೆ ಸಚಿವ ಸಂಪುಟದಲ್ಲಿ ಖಾಲಿಯಾಗುವ ಸ್ಥಾನಗಳನ್ನು ಬೇರೆಯವರಿಗೆ ನೀಡಿ ಪಕ್ಷದಲ್ಲಿ ಉಂಟಾಗಿರುವ ಅತೃಪ್ತಿಯನ್ನು ಶಮನಗೊಳಿಸಬಹುದು ಎಂಬ ಚಿಂತನೆಯಲ್ಲಿ ಕಾಂಗ್ರೆಸ್‌ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಅವರು, ಅಭ್ಯರ್ಥಿಗಳ ಆಯ್ಕೆಯಲ್ಲಿ ಗೆಲ್ಲುವುದೇ ಪ್ರಮುಖ ಮಾನದಂಡವಾಗಿದೆ. ಎಲ್ಲರೂ ಹೈಕಮಾಂಡ್‌ನ ನಿರ್ಧಾರಕ್ಕೆ ಬದ್ಧವಾಗಿರಬೇಕು. ಇದು ಸಚಿವರಿಗೂ ಕೂಡ ಅನ್ವಯವಾಗಲಿದೆ ಎಂದಿದ್ದಾರೆ. ಇನ್ನು ಯಾವ್ಯಾವ ಸಚಿವರ ಹೆಸರು ಕೇಳಿ ಬಂದಿದೆ ಅನ್ನೋ ಮಾಹಿತಿ ಇಲ್ಲಿದೆ.

ಸತೀಶ್ ಜಾರಕಿಹೊಳಿ

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಂಭಾವ್ಯರಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೆಸರಿದೆ. 2021ರ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯ ಮಂಗಳಾ ಅಂಗಡಿ ಅವರಿಂದ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದರು. ಈಗ ಮತ್ತೆ ಸತೀಶ್‌ ಜಾರಕಿಹೊಳಿ ಅವರು ಮತದಾರರ ಮೇಲೆ ಹೊಂದಿರುವ ಪ್ರಭಾವವನ್ನು ಬಳಸಿಕೊಳ್ಳಲು ಪಕ್ಷ ಮುಂದಾಗಿದೆ. ಸತೀಶ್‌ ಜಾರಕಿಹೊಳಿ ಕೇವಲ ವಾಲ್ಮೀಕಿ ಸಮುದಾಯ ಮಾತ್ರವಲ್ಲದೇ ಇತರೆ ಸಮುದಾಯದವರ ಜೊತೆಯು ಉತ್ತಮ ಜನಸಂಪರ್ಕ ಹೊಂದಿರುವುದು ಇಲ್ಲಿ ಕಾಂಗ್ರೆಸ್‌ಗೆ ಪ್ಲಸ್‌ ಆಗಲಿದೆ. ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ಲೋಕಸಭಾ ಚುನಾವಣೆಗೆ ಸಚಿವರನ್ನು ಕಣಕ್ಕಿಳಿಸುವ ಬಗ್ಗೆ ಇನ್ನಷ್ಟೇ ತೀರ್ಮಾನ ತೆಗೆದುಕೊಳ್ಳಬೇಕಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಗೆಲುವೊಂದೇ ಮಾನದಂಡವನ್ನಾಗಿ ಪರಿಗಣಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ. ಹೀಗಿದ್ದರೂ ಸತೀಶ್‌ ಜಾರಕಿಹೊಳಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಪಕ್ಷಕ್ಕೆ ಷರತ್ತು ಬದ್ಧ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ತಮ್ಮ ಗೆಲುವಿನಿಂದ ಯಮಕನಮರಡಿ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ತಮ್ಮ ಮಕ್ಕಳಾದ ರಾಹುಲ್‌ ಅಥವಾ ಪ್ರಿಯಾಂಕಾ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕು ಎಂಬ ಷರತ್ತು ಇಡಲಿದ್ದಾರೆ ಎನ್ನಲಾಗಿದೆ. ಅದಲ್ಲದೇ, ಲೋಕಸಭಾ ಚುನಾವಣೆಗೆ ತಮ್ಮ ಬದಲಾಗಿ ಪುತ್ರ ಅಥವಾ ಪುತ್ರಿಗೆ ಟಿಕೆಟ್‌ ಕೊಡಿಸುವ ಇರಾದೆಯಲ್ಲಿ ಸತೀಶ್‌ ಜಾರಕಿಹೊಳಿ ಇದ್ದಾರೆ. ಈ ಬಗ್ಗೆಯೂ ವರಿಷ್ಠರ ಬಳಿ ಮಾತುಕತೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕೆ.ಎನ್ ರಾಜಣ್ಣ

ಸಹಕಾರ ಸಚಿವ ಕೆ.ಎನ್‌ ರಾಜಣ್ಣ ಹೈಕಮಾಂಡ್‌ ಒಪ್ಪಿಗೆ ನೀಡಿದರೆ ತುಮಕೂರಿನಿಂದ ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿದ್ದಾರೆ. ಆದರೆ, ಕೆ.ಎನ್‌ ರಾಜಣ್ಣ ಕೂಡ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬೈ ಎಲೆಕ್ಷನ್‌ನಲ್ಲಿ ತಮ್ಮ ಪುತ್ರ, ಸದ್ಯ ಪರಿಷತ್‌ ಸದಸ್ಯರಾಗಿರುವ ಆರ್‌.ರಾಜೇಂದ್ರ ಅವರಿಗೆ ಟಿಕೆಟ್‌ ನೀಡಬೇಕು. ರಾಜೇಂದ್ರ ಚುನಾವಣೆಯಲ್ಲಿ ಗೆದ್ದರೆ ಸಚಿವ ಸ್ಥಾನವನ್ನು ಕೂಡ ನೀಡಬೇಕು ಎಂಬ ಷರತ್ತನ್ನು ಕೂಡ ಇಟ್ಟಿದ್ದಾರೆ ಎನ್ನಲಾಗಿದೆ. ಇನ್ನು, ಕೋಲಾರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಣಕ್ಕಿಳಿಯಬಹುದೆಂದು ಹೇಳಲಾಗುತ್ತಿದ್ದು, ಕಲಬುರಗಿಯಿಂದ ಕೋಲಾರಕ್ಕೆ ಖರ್ಗೆ ವಲಸೆ ಬರುವ ಸಾಧ್ಯತೆ ಇದೆ. ಚಿಕ್ಕಬಳ್ಳಾಪುರಕ್ಕೆ ಯುವ ಕಾಂಗ್ರೆಸ್‌ ಮಾಜಿ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಅಥವಾ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾಗಬಹುದು ಎನ್ನಲಾಗಿದೆ.

ರಾಮಲಿಂಗಾರೆಡ್ಡಿ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಬೇಕು ಎಂಬ ಚಿಂತನೆಯಲ್ಲಿ ಕಾಂಗ್ರೆಸ್‌ ಇದೆ. ಆದರೆ, ರಾಮಲಿಂಗಾರೆಡ್ಡಿ ಅವರು ತಮ್ಮ ಪುತ್ರಿ, ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರಿಗೆ ಎಂಪಿ ಟಿಕೆಟ್‌ ನೀಡಬೇಕು ಎಂಬ ಲಾಬಿ ನಡೆಸಿರುವ ಬಗ್ಗೆ ವರದಿಯಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಸೌಮ್ಯ ರೆಡ್ಡಿ ಅವರು ಕೇವಲ 16 ಮತಗಳಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಕೂಡ ಆಗಿರುವ ರಾಮಲಿಂಗಾರೆಡ್ಡಿ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಚಿವರನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸುವ ಬಗ್ಗೆ ಪಕ್ಷ ಚಿಂತನೆ ನಡೆಸುತ್ತಿರುವುದು ನಿಜ. ಬೆಂಗಳೂರು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಈ ಪ್ರಯೋಗವನ್ನು ಮಾಡಲು ಪಕ್ಷ ಮುಂದಾಗಿದ್ದು, ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಲು ಈ ತಂತ್ರದ ಮೊರೆ ಹೋಗಿದೆ ಎಂದಿದ್ದಾರೆ.

ಹೆಚ್.ಸಿ ಮಹದೇವಪ್ಪ

ಇನ್ನು, ಎಸ್‌ಸಿ ಮೀಸಲು ಕ್ಷೇತ್ರ ಚಾಮರಾಜನಗರಕ್ಕೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ಅವರ ಹೆಸರು ಕೇಳಿಬರುತ್ತಿದೆ. ಅವರು ಕೂಡ ತಮ್ಮಿಂದ ತೆರವಾಗುವ ಟಿ ನರಸೀಪುರದಲ್ಲಿ ಪುತ್ರ ಸುನೀಲ್‌ ಬೋಸ್‌ಗೆ ಟಿಕೆಟ್‌ ನೀಡುವಂತೆ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕೆ.ಹೆಚ್ ಮುನಿಯಪ್ಪ

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್‌ ಮುನಿಯಪ್ಪ ಅವರು ಕೋಲಾರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಮತ್ತೆ ಸಂಸತ್ ಕಡೆ ಮುಖ ಮಾಡುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಅವರು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌ ಮುನಿಸ್ವಾಮಿ ಎದುರು ಸೋಲುವ ಮುನ್ನ ಕೆ.ಹೆಚ್ ಮುನಿಯಪ್ಪ ಅವರು 7 ಬಾರಿ ಸಂಸದರಾಗಿ ಗೆಲುವು ಸಾಧಿಸಿದ್ದರು.

ಕೃಷ್ಣಭೈರೇಗೌಡ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಕಣಕ್ಕಿಳಿಸಲು ಪಕ್ಷ ಮುಂದಾಗಿದೆ. ಕೃಷ್ಣ ಭೈರೇಗೌಡ ಅವರ ಸಂಬಂಧಿ ರಾಜಕೀಯದಲ್ಲಿಲ್ಲದಿರುವುದರಿಂದ ಇಲ್ಲಿ ಯಾವುದೇ ಷರತ್ತುಗಳು ಬರಲ್ಲ ಎನ್ನಲಾಗಿದೆ. ಕೃಷ್ಣ ಭೈರೇಗೌಡ 2019ರಲ್ಲಿ ಬೆಂಗಳೂರು ಉತ್ತರದಿಂದ ಸ್ಪರ್ಧಿಸಿ, ಡಿವಿ ಸದಾನಂದಗೌಡ ವಿರುದ್ಧ ಸೋಲು ಅನುಭವಿಸಿದ್ದರು. 2014ರಲ್ಲಿ ಬೆಂಗಳೂರು ದಕ್ಷಿಣದಲ್ಲಿ ಸ್ಪರ್ಧಿಸಿದ್ದ ಕೃಷ್ಣ ಭೈರೇಗೌಡ ಮಾಜಿ ಕೇಂದ್ರ ಸಚಿವ ಅನಂತಕುಮಾರ್‌ ವಿರುದ್ಧ ಸೋಲು ಅನುಭವಿಸಿದ್ದರು. ಇದರ ಜೊತೆ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಕಣಕ್ಕಿಳಿಯುವ ನಿರೀಕ್ಷೆ ಇದೆ.

suddiyaana