ಯುವಕರಿಗೆ ಉದ್ಯೋಗದ ಜೊತೆ 1 ಲಕ್ಷ ವೇತನ, ಬಡ ಕುಟುಂಬಕ್ಕೆ ವಾರ್ಷಿಕ 1 ಲಕ್ಷ ರೂ. – ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಯುವಕರಿಗೆ ಉದ್ಯೋಗದ ಜೊತೆ 1 ಲಕ್ಷ ವೇತನ, ಬಡ ಕುಟುಂಬಕ್ಕೆ ವಾರ್ಷಿಕ 1 ಲಕ್ಷ ರೂ. – ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳು ಯಶಸ್ವಿಯಾದ ಹಿನ್ನೆಲೆಯಲ್ಲಿ ಅದೇ ರೀತಿಯ ಸೂತ್ರವನ್ನು ಇಟ್ಟುಕೊಂಡು ಕಾಂಗ್ರೆಸ್ ಕೇಂದ್ರದಲ್ಲಿ ಮೋದಿ ಸಾಮ್ರಾಜ್ಯವನ್ನು ಕೆಡವಲು ಮುಂದಾಗಿದೆ. ಶುಕ್ರವಾರ ಕಾಂಗ್ರೆಸ್‌ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ದಿಲ್ಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಈ ಪ್ರಣಾಳಿಕೆಯಲ್ಲಿ ಐದು ನ್ಯಾಯಗಳ ಜೊತೆ 25 ಭರವಸೆಗಳನ್ನು ಕೊಟ್ಟಿದೆ. ಪ್ರಣಾಳಿಕೆಗೆ ನ್ಯಾಯಪತ್ರ ಎಂದು ಹೆಸರಿಟ್ಟಿರುವ ಕಾಂಗ್ರೆಸ್, ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ್ ನ್ಯಾಯ ಮತ್ತು ಹಿಸ್ಸೆದಾರಿ ನ್ಯಾಯ ಹಾಗೂ ಖಾತರಿಗಳು ಸೇರಿದಂತೆ ಪಂಚ ನ್ಯಾಯ ಅಥವಾ ನ್ಯಾಯದ ಐದು ಸ್ತಂಭಗಳಿಗೆ ಒತ್ತು ನೀಡಿದೆ.

ಇದನ್ನೂ ಓದಿ: ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ರಾಜಕುಮಾರ್ ಕಾರಣ ಎಂದ ದರ್ಶನ್ ಫ್ಯಾನ್ಸ್ – ಅಪ್ಪು ಫ್ಯಾನ್ಸ್‌ ಫುಲ್‌ ಗರಂ

ಕಾಂಗ್ರೆಸ್​ ಪಕ್ಷವು ದೇಶಾದ್ಯಂತ ಜಾತಿ ಆಧಾರಿತ ಜನಗಣತಿ ನಡೆಸುವುದಾಗಿ ಭರವಸೆ ನೀಡಿದೆ. 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್​ ಸರ್ಕಾರ ರಚನೆಯಾದರೆ ಬಡ ಕುಟುಂಬದ ಮಹಿಳೆಯರಿಗೆ ಪ್ರತಿ ವರ್ಷ ಲಕ್ಷ ರೂ.ಗಳ ನೆರವು ನೀಡುವುದಾಗಿ ತಿಳಿಸಿದ ಅವರು ರೈತರ ಸಾಲ ಮನ್ನಾ ಮಾಡುವುದಾಗಿ ಮಲ್ಲಿಕಾರ್ಜುನ್‌ ಖರ್ಗೆ ಭರವಸೆ ನೀಡಿದರು.

ಯುವ ನ್ಯಾಯ ಅಡಿಯಲ್ಲಿ ಪಕ್ಷವು ಮಾತನಾಡಿರುವ ಐದು ಖಾತರಿಗಳಲ್ಲಿ 30 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಭರವಸೆ ಮತ್ತು ಒಂದು ವರ್ಷದವರೆಗೆ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮದಡಿಯಲ್ಲಿ ಯುವಕರಿಗೆ 1 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾರೆ.

ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಪ್ರತಿ ವರ್ಷ ಎಂಎಸ್‌ಪಿ ಘೋಷಿಸುವ ಕಾನೂನು ಖಾತರಿ ನೀಡುವುದಾಗಿ ಘೋ‍ಷಿಸಿದೆ.

ಕಾರ್ಮಿಕ ನ್ಯಾಯ ಅಡಿಯಲ್ಲಿ, ಕಾರ್ಮಿಕರಿಗೆ ಆರೋಗ್ಯದ ಹಕ್ಕನ್ನು ಒದಗಿಸುವುದು, ದಿನಕ್ಕೆ ಕನಿಷ್ಠ 400 ರೂ. ವೇತನ ಮತ್ತು ನಗರ ಉದ್ಯೋಗ ಖಾತರಿಯನ್ನು ಖಚಿತಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಪ್ರಣಾಳಿಕೆಯಲ್ಲಿ 25 ಬಗೆಯ ಭರವಸೆಗಳನ್ನು ನೀಡಲಾಗಿದೆ. ನಮ್ಮ ಪ್ರಣಾಳಿಕೆ ಬಡವರಿಗೆ ಮೀಸಲಾಗಿದೆ ಎಂದು ಖರ್ಗೆ ಹೇಳಿದರು.

Shwetha M