ವಿವಾದದ ಸುಳಿಯಲ್ಲಿ ‘ದಿ ಕೇರಳ ಸ್ಟೋರಿ’ – ರಾಜಕೀಯ ತಿರುವು ಪಡೆದಿದ್ದೇಕೆ ಸಿನಿಮಾ?

ವಿವಾದದ ಸುಳಿಯಲ್ಲಿ ‘ದಿ ಕೇರಳ ಸ್ಟೋರಿ’ – ರಾಜಕೀಯ ತಿರುವು ಪಡೆದಿದ್ದೇಕೆ ಸಿನಿಮಾ?

ಮೇ 5 ರಂದು ದೇಶದಾದ್ಯಂತ ರಿಲೀಸ್ ಆಗುತ್ತಿರುವ ‘ದಿ ಕೇರಳ ಸ್ಟೋರಿ’ ಎಂಬ ಹಿಂದಿ ಸಿನಿಮಾಗೆ ಕೇರಳದಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೇ ಇದೀಗ ಕೇರಳ ಕಾಂಗ್ರೆಸ್ ಕೂಡ ಈ ಚಿತ್ರ ರಿಲೀಸ್ ಆಗುವುದನ್ನು ತಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.

ಸುದಿಪ್ಟೋ ಸೆನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಹಸಿ ಸುಳ್ಳುಗಳೇ ತುಂಬಿದೆ. ಈ ಸಿನಿಮಾ ಸಮಾಜದ ಹಾದಿ ತಪ್ಪಿಸುವುದರಿಂದ ಚಿತ್ರವನ್ನು ರಿಲೀಸ್ ಮಾಡಲು ಬಿಡಬಾರದು ಎಂದು ಕೇರಳ ಕಾಂಗ್ರೆಸ್ ಮನವಿ ಸಲ್ಲಿಸಿದೆ.

ಇದನ್ನೂ ಓದಿ: ವೀರಪ್ಪನ್ ಮಗಳು ಸಿನಿಮಾ ಹೀರೋಯಿನ್ – ‘ಮಾವೀರನ್ ಪಿಳ್ಳೈ’ ಚಿತ್ರಕ್ಕೆ ಬಣ್ಣ ಹಚ್ಚಿದ ವಿಜಯಲಕ್ಷ್ಮೀ

ಇನ್ನು ಕಾಂಗ್ರೆಸ್ ಜೊತೆಗೆ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ ಕೂಡ ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಘ ಪರಿವಾರದವರು ಸೇರಿಕೊಂಡು, ಒಂದು ಸಮುದಾಯದ ವಿರುದ್ಧ ಕೆಟ್ಟ ಅಭಿಪ್ರಾಯ ಹುಟ್ಟುವಂತೆ ಮಾಡಲು ಈ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ. ಇದು ಕೇರಳ ರಾಜ್ಯಕ್ಕೂ ಅಪಮಾನ ಮಾಡುವಂತಹ ಚಿತ್ರ. ಹಾಗಾಗಿ ಕೂಡಲೇ ಬಿಡುಗಡೆಯನ್ನು ತಡೆಯಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿವೆ.

‘ದಿ ಕೇರಳ ಸ್ಟೋರಿ’ ಚಿತ್ರದ ಟ್ರೈಲರ್ ಎರಡು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿದ್ದು, ಭಾರಿ ಸದ್ದು ಮಾಡಿತ್ತು. ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ ಕೇರಳದಾದ್ಯಂತ ಭಾರಿ ವಿವಾದವೆಬ್ಬಿಸಿದ್ದು, ಈ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ಕೂಡ ಹುಟ್ಟಿಕೊಂಡಿದೆ.

ಈ ಸಿನಿಮಾದಲ್ಲಿ ಲವ್ ಜಿಹಾದ್ ಜೊತೆಗೆ ಐಸಿಸ್ ಸೇರುವ ಮುನ್ನ ಮಾಡಲಾಗುವ ಬ್ರೈನ್ ವಾಷ್ ಸೇರಿದಂತೆ ಹತ್ತಾರ ವಿಷಯಗಳನ್ನು ಕಥಾಹಂದರದಲ್ಲಿ ಜೋಡಿಸಲಾಗಿದೆಯಂತೆ. ಕೇರಳದ ಯುವತಿಯರ ನಾಪತ್ತೆ ಆದ ಬಳಿಕ ಲವ್ ಜಿಹಾದ್ ಬಲೆ, ಐಸಿಸ್ ಸೇರಿದ ಕಾಲೇಜು ಯುವತಿಯರ ರಿಯಲ್ ಸ್ಟೋರಿಯನ್ನು ತೆರೆಯ ಮೇಲೆ ತಂದಿರೋದಾಗಿ ನಿರ್ದೇಶಕರು ಹೇಳಿದ್ದಾರೆ.

ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ವಿವಾದಿತ ಅಂಶಗಳು ಇವೆ ಎಂದು ವಿರೋಧ ವ್ಯಕ್ತವಾಗಿದೆ. ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಈ ರೀತಿಯ ಸಂಭಾಷಣೆ ಸಿನಿಮಾದಲ್ಲಿ ಇದೆ. ಇಂತಹ ಸಂಭಾಷಣೆ ಮತ್ತು ಕಥೆಯಿಂದ ವಿವಾದ ಹುಟ್ಟಿಕೊಂಡಿದೆ.

ಇದೀಗ ಈ ಚಿತ್ರದ ವಿವಾದ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಲವ್ ಜಿಹಾದ್ ಸುತ್ತಾ ಹೆಣೆದಿರುವ ಕಥಾ ಹಂದರ ಬಿಜೆಪಿಗೆ ಚುನಾವಣೆ ಅಸ್ತ್ರವಾಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಹೀಗಾಗಿ ಬಿಜೆಪಿಯು  ಈ ವಿಷಯವನ್ನು ಇಟ್ಟುಕೊಂಡು ಹಲವು ಲಾಭಗಳನ್ನು ಪಡೆದುಕೊಳ್ಳಲಿದೆ ಅಂತಾ ಹೇಳಲಾಗಿತ್ತಿದೆ.

suddiyaana