ಡಿ.ವಿ ಸದಾನಂದಗೌಡರಿಗೆ ಕಾಂಗ್ರೆಸ್ ಆಫರ್ ಕೊಟ್ಟ ಬೆನ್ನಲ್ಲೇ ಮಧ್ಯಸ್ಥಿಕೆ ವಹಿಸಿದ RSS – ಡಿವಿಎಸ್ ಮುಂದಿನ ನಡೆ ಏನು?

ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿದೆ. ಟಿಕೆಟ್ ಘೋಷಿಸಿರೋ ಬಿಜೆಪಿಗೆ ಸಾಲು, ಸಾಲು ಸವಾಲು ಎದುರಾಗುತ್ತಿದೆ. ಶಿವಮೊಗ್ಗ, ದಾವಣಗೆರೆ, ಬೆಂಗಳೂರು ಉತ್ತರ ಹೀಗೆ ಹಲವು ಲೋಕಸಭಾ ಕ್ಷೇತ್ರದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಬೇಸರ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಸದಾನಂದ ಗೌಡರು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಬಿಜೆಪಿ ಹೈಕಮಾಂಡ್ ಹಾಗೂ ಆರ್ಎಸ್ಎಸ್ ಸದಾನಂದ ಗೌಡರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಾ. 21 ರಿಂದ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ – ಜಲಮಂಡಳಿ ಆದೇಶ
ಹೌದು, ಡಿ.ವಿ ಸದಾನಂದಗೌಡರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿದ್ದರು. ಕಾಂಗ್ರೆಸ್ ಪಕ್ಷ ಸೇರುವ ಆಫರ್ ಅನ್ನು ಕೂಡ ನೀಡಲಾಗಿತ್ತು. ಈ ಬೆನ್ನಲ್ಲೇ ಡಿ.ವಿ ಸದಾನಂದಗೌಡರನ್ನು ಕಾಂಗ್ರೆಸ್ ನಾಯಕರು ಸಂಪರ್ಕಿಸಿದ ಮೇಲೆ ಬಿಜೆಪಿ ಹೈಕಮಾಂಡ್ ಹಾಗೂ RSS ನಾಯಕರು ಅಲರ್ಟ್ ಆಗಿದ್ದಾರೆ. ಕಾಂಗ್ರೆಸ್ ಪಕ್ಷ ಸೇರುವ ಆಫರ್ ಬೆನ್ನಲ್ಲೇ RSS ನಾಯಕರು ಮಧ್ಯಸ್ಥಿಕೆ ವಹಿಸಿದ್ದು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಆರ್ಎಸ್ಎಸ್ ಪ್ರಮುಖರಲ್ಲಿ ದತ್ತಾತ್ರೇಯ ಹೊಸಬಾಳೆ, ಸಿ.ಆರ್. ಮುಕುಂದ್ ಅವರು ಡಿ.ವಿ ಸದಾನಂದಗೌಡರ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಸದ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗ್ತಿದೆ ಅಂತ ಹೇಳೋದಿಲ್ಲ. ನಿಮ್ಮ ಪ್ರಕರಣದಲ್ಲಿ ನಿಮ್ಮ ಹಿತವನ್ನ ಕಾಪಾಡಲು ಬದ್ಧರಿದ್ದೇವೆ. ಪಕ್ಷ ತ್ಯಜಿಸುವಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಬಿಜೆಪಿಯಲ್ಲಿ ಇವತ್ತಿನ ವಾತಾವರಣ ಸರಿ ಹೋಗಬೇಕಿದೆ. ಹಿರಿಯ ನಾಯಕರನ್ನ ಕಡೆಗಣನೆ ಮಾಡೋದು ಸರಿಯಲ್ಲ ಎಂದು ಆರ್ಎಸ್ಎಸ್ ನಾಯಕರು ಹೇಳಿದ್ದಾರೆ. RSS ನಾಯಕರು ಮಧ್ಯಸ್ಥಿಕೆಗೆ ಡಿ.ವಿ ಸದಾನಂದಗೌಡರು ಮಣಿದಿದ್ದು, ಕಾಂಗ್ರೆಸ್ ಪಕ್ಷ ಸೇರುವ ಆಫರ್ ಅನ್ನು ತಿರಸ್ಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.