ಸಂಸದ ಸ್ಥಾನದಿಂದ ರಾಹುಲ್ ಅನರ್ಹ – ಕಲಾಪಕ್ಕೆ ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್ ಸಂಸದರು

ಸಂಸದ ಸ್ಥಾನದಿಂದ ರಾಹುಲ್ ಅನರ್ಹ – ಕಲಾಪಕ್ಕೆ ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್ ಸಂಸದರು

ಅದಾನಿ ವಿಚಾರ ಹಾಗೂ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತನ್ನ ಪ್ರತಿಭಟನೆಯನ್ನು ಕಾಂಗ್ರೆಸ್ ಮುಂದುವರಿಸಿದೆ. ಈ ಪ್ರತಿಭಟನೆಯ ಕಾವು ಕಲಾಪದ ಮೇಲೂ ಪರಿಣಾಮ ಬೀರಿದ್ದು, ಸೋಮವಾರ ಲೋಕಸಭೆ, ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ವಿರುದ್ದ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ಕಾರಣದಿಂದ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪ ಸಹ ಮುಂದೂಡಲಾಗಿದೆ. ಉಭಯ ಸದನಗಳ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಿಪಕ್ಷಗಳ ಸಂಸದರ ಪ್ರತಿಭಟನೆಯ ನಡುವೆ ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮತ್ತು ಲೋಕಸಭೆಯನ್ನು ಸಂಜೆ 4 ಗಂಟೆಗೆ ಮುಂದೂಡಲಾಯಿತು.

ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ

ದೇಶಾದ್ಯಂತ ರಾಜ್ಯ ವಿಧಾನಸಭೆಗಳಲ್ಲೂ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಮಹಾಘಟಬಂಧನ್ ನಾಯಕರು ಪಾಟ್ನಾದಲ್ಲಿ ಕಪ್ಪು ಪಟ್ಟಿಗಳನ್ನು ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಕಸಿದುಕೊಳ್ಳುವ ವಿಧಾನವು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ. ಈ ನಡುವೆ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಸಹ ಭಾಗಿಯಾಗಿದ್ದರು. ಈ ಸಭೆಯಲ್ಲಿ ಅಚ್ಚರಿಯೆಂಬಂತೆ ತೃಣಮೂಲ ಕಾಂಗ್ರೆಸ್ ಕೂಡ ಸೇರಿಕೊಂಡಿದೆ. ಪ್ರಸೂನ್ ಬ್ಯಾನರ್ಜಿ ಮತ್ತು ಜವಾಹರ್ ಸಿರ್ಕಾರ್ ಅವರು ಟಿಎಂಸಿಯನ್ನು ಪ್ರತಿನಿಧಿಸಿದ್ದು, ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸುವ ಬಗ್ಗೆ ಪ್ರತಿಪಕ್ಷಗಳ ಕಾರ್ಯತಂತ್ರವನ್ನು ಚರ್ಚಿಸಲಾಯಿತು. ಇತರ ವಿಷಯಗಳಲ್ಲಿ ಬಿಜೆಪಿ – ಕಾಂಗ್ರೆಸ್‌ನಿಂದ ದೂರವಿದ್ದರೂ ರಾಹುಲ್ ಗಾಂಧಿಯನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಿರುವ ವಿಚಾರದಲ್ಲಿ ಪ್ರತಿಪಕ್ಷಗಳು ಒಂದಾಗಬೇಕು ಎಂದು ಟಿಎಂಸಿ ಹೇಳಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮುಂದೆ ಸಾಗುವ ಯಾರನ್ನಾದರೂ ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದು ಹೇಳಿದರು.

suddiyaana