ನಾವಿಕನಿಲ್ಲದ ನೌಕೆ.. ನಾಯಕನಿಲ್ಲದ ಬಿಜೆಪಿ ಎರಡೂ ಮುಳುಗುವುದು ನಿಶ್ಚಿತ! – ವಿಪಕ್ಷ ನಾಯಕನ ಆಯ್ಕೆ ವಿಳಂಬಕ್ಕೆ ಕಾಂಗ್ರೆಸ್‌ ಲೇವಡಿ

ನಾವಿಕನಿಲ್ಲದ ನೌಕೆ.. ನಾಯಕನಿಲ್ಲದ ಬಿಜೆಪಿ ಎರಡೂ ಮುಳುಗುವುದು ನಿಶ್ಚಿತ! – ವಿಪಕ್ಷ ನಾಯಕನ ಆಯ್ಕೆ ವಿಳಂಬಕ್ಕೆ ಕಾಂಗ್ರೆಸ್‌ ಲೇವಡಿ

ಬೆಂಗಳೂರು: ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ಎರಡು ತಿಂಗಳುಗಳೇ ಕಳೆದಿವೆ. ಸರ್ಕಾರ ರಚನೆಯಾಗಿ ವಿಧಾನಸಭೆ ಅಧಿವೇಶನ ಕೂಡ ನಡೆಯುತ್ತಿದೆ. ಆದರೂ ಕೂಡ ವಿರೋಧ ಪಕ್ಷದ ನಾಯಕನ ಆಯ್ಕೆ ಇನ್ನೂ ಆಗಿಲ್ಲ. ಹೀಗಾಗಿ ಕಾಂಗ್ರೆಸ್‌ ಬಿಜೆಪಿ ವಿರುದ್ಧ ಲೇವಡಿ ಮಾಡುತ್ತಾ ಬಂದಿದೆ. ಜು. 1 ರಂದು ಕಾಂಗ್ರೆಸ್‌, ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ ಎಂಬ ಜಾಹೀರಾತನ್ನ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿತ್ತು. ಇದೀಗ ನಮ್ಮ ಪ್ರಕಟಣೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ ಅಂತಾ ಕಾಂಗ್ರೆಸ್‌ ಬಿಜೆಪಿಯನ್ನು ಮತ್ತೆ ಲೇವಡಿ ಮಾಡಿದೆ.

ಇದನ್ನೂ ಓದಿ: ಅಡುಗೆಗೆ ಟೊಮ್ಯಾಟೊ ಬಳಸಿದ ಗಂಡ – ಸಿಟ್ಟಿಗೆದ್ದು ತವರಿಗೆ ಹೋದಳು ಹೆಂಡತಿ!

ಕಾಂಗ್ರೆಸ್‌ ಟ್ವಿಟರ್‌ ನಲ್ಲಿ ತನ್ನ ಹಳೆಯ ಪೋಸ್ಟ್‌ ಗೆ ಮತ್ತೆ ಟ್ವೀಟ್‌ ಮಾಡಿದೆ. ಜು.1 ರಂದು ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ ಎಂಬ ಜಾಹೀರಾತನ್ನು ಉಲ್ಲೇಖಿಸಿ, ʼನಮ್ಮ ಪ್ರಕಟಣೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ, ಪ್ರೀತಿ ಬಿಜೆಪಿ. ನಿಮ್ಮ ಹೈಕಮಾಂಡ್ ವರಿಷ್ಠರಿಗೆ ಇನ್ನೂ ಸೂಕ್ತ ಸಂದರ್ಭ, ಸೂಕ್ತ ಸಮಯ, ಸೂಕ್ತ ಮುಹೂರ್ತ ಕೂಡಿ ಬಂದಿಲ್ಲವೇ?  ಹಿನಾಯ ಸೋಲಿನ ಬಳಿಕ ಕರ್ನಾಟಕದ ಬಿಜೆಪಿಯನ್ನು ದೆಹಲಿಯ ನಾಯಕರು ಕಾಲ ಕೆಳಗಿನ ಕಸದಂತೆ ಕಾಣುತ್ತಿದ್ದಾರೆಯೇ? ಅಥವಾ ಆಂತರಿಕ ಕಲಹ ಇನ್ನೂ ಮುಗಿದಿಲ್ಲವೇ? ಎಂದು ಪ್ರಶ್ನಿಸಿದೆ.

ಚುನಾವಣೆ ಫಲಿತಾಂಶ ಬಂದು 2 ತಿಂಗಳಾಯ್ತು, ಅಧಿವೇಶನವೂ ಪ್ರಾರಂಭ ಆಯ್ತು, ಆದರೆ ಬಿಜೆಪಿಯ ವಿರೋಧ ಪಕ್ಷದ ನಾಯಕನೆಲ್ಲಿ? ನಾವಿಕನಿಲ್ಲದ ನೌಕೆ, ನಾಯಕನಿಲ್ಲದ ಬಿಜೆಪಿ ಎರಡೂ ಮುಳುಗುವುದು ನಿಶ್ಚಿತ! ಹಿಂದೆ ಬಿಎಸ್‌ ಯಡಿಯೂರಪ್ಪ ಅವರು ಸಂಪುಟ ರಚನೆಗೆ ತಿಂಗಳುಗಟ್ಟಲೆ ಹೈಕಮಾಂಡ್ ಬಾಗಿಲು ಕಾದಿದ್ದರು. ನಂತರ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆಗೆ 15ಕ್ಕೂ ಹೆಚ್ಚು ಬಾರಿ ದೆಹಲಿ ದಂಡಯಾತ್ರೆ ಮಾಡಿದ್ದರು. ಆದರೂ ಸಂಪುಟ ವಿಸ್ತರಣೆಯಾಗಲಿಲ್ಲ. ಈಗ ವಿಪಕ್ಷ ನಾಯಕನ ಆಯ್ಕೆಗೆ ಸತಾಯಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡಿಗೆ ಕರ್ನಾಟಕವನ್ನಷ್ಟೇ ಅಲ್ಲ, ಕರ್ನಾಟಕದ ಬಿಜೆಪಿಯನ್ನು ಕಂಡರೂ ತಾತ್ಸಾರವೇ? ಎಂದು ವ್ಯಂಗ್ಯವಾಡಿದೆ.

suddiyaana