ಕಾಂಗ್ರೆಸ್ ನಲ್ಲೀಗ ಸಂಪುಟ ರಚನೆ ಸರ್ಕಸ್ – ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು

ಕಾಂಗ್ರೆಸ್ ನಲ್ಲೀಗ ಸಂಪುಟ ರಚನೆ ಸರ್ಕಸ್ – ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು

ಬೆಂಗಳೂರು: ಸಾಕಷ್ಟು ಹೈಡ್ರಾಮಗಳ ಬಳಿಕ ಸಿಎಂ ಆಯ್ಕೆ ಪ್ರಕ್ರಿಯೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಪೂರ್ಣಗೊಳಿಸಿದೆ. ಇದೀಗ ಹೈಕಮಾಂಡ್‌ ಮುಂದಿರುವ ಸವಾಲು ಎಂದರೆ ಸಚಿವ ಸಂಪುಟ ರಚನೆ. ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿದ್ದರು ಸಚಿವರಾಗಿ ಆಧಿಕಾರ ಸ್ವೀಕರಿಸುವ ಅವಕಾಶ ಸಿಎಂ ಸೇರಿದಂತೆ 34 ಜನರಿಗೆ ಮಾತ್ರವಿದೆ‌. ಹೀಗಾಗಿ ಸಂಪುಟ ರಚನೆ‌ ಮತ್ತು ಖಾತೆ ಹಂಚಿಕೆ ವಿಚಾರದಲ್ಲಿ ತಲೆಬಿಸಿ ಶುರುವಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪ್ರಮಾಣ ವಚನ ದಿನದಂದೇ ಸಿಇಟಿ ಪರೀಕ್ಷೆ – ವಿದ್ಯಾರ್ಥಿಗಳಿಗೆ ಟ್ರಾಫಿಕ್‌ ಭೀತಿ

ಉಪ ಮುಖ್ಯಮಂತ್ರಿ ಒಬ್ಬರೇ ಇರುತ್ತಾರೆ ಎಂದು ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಿದ್ದು, ಇದರ ಬೆನ್ನಲ್ಲೇ ಆ ಸ್ಥಾನದ ಆಕಾಂಕ್ಷಿಯಾಗಿದ್ದ ಕೆಲ ನಾಯಕರು ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಐಸಿಸಿ ಮುಂದಿರುವ ಪ್ರಮುಖ ಸವಾಲು ಎಂದರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪಾಳಯದಿಂದ ಶಾಸಕರನ್ನು ಸೇರಿಸಿಕೊಳ್ಳುವುದಾಗಿದ್ದು ಹಾಗೂ ಆರೋಗ್ಯಕರ ಸಮತೋಲನವನ್ನು ಕಾಯ್ದುಕೊಳ್ಳುವುದಾಗಿದೆ. ಈ ಹಿಂದೆ ಡಿಸಿಎಂ, ಗೃಹ, ಕಂದಾಯ ಹಾಗೂ ಇತರ ಪ್ರಮುಖ ಖಾತೆಗಳಲ್ಲಿ ಸೇವೆ ಸಲ್ಲಿಸಿದ ಹಲವು ಹಿರಿಯ ಶಾಸಕರು ಸಣ್ಣ ಖಾತೆಗಳಿಗೆ ತೃಪ್ತಿಪಡದಿರಬಹುದು. ಹೀಗಾಗಿ ಕಾಂಗ್ರೆಸ್‌ ಹೈಕಮಾಂಡ್‌‌ ಗೆ ತಲೆಬಿಸಿ ಶುರುವಾಗಿದೆ.

ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿ ಪ್ರಭಾವಶಾಲಿಯಾಗಿದ್ದ ಹಲವರು ಸೇರಿದಂತೆ ಹಲವು ಪ್ರಮುಖ ನಾಯಕರು ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದ್ದಾರೆ. ಅಲ್ಲದೆ, ಹಿರಿತನ ಹಾಗೂ ಅನುಭವ ಇರುವ ಘಟಾನುಘಟಿಗಳು ಸಹ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ, ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಹಾಗೂ ಸೇರ್ಪಡೆಯಾದ ನಂತರ ಅವರನ್ನು ನಿಭಾಯಿಸುವುದು ಹೇಗೆ ಎಂಬುವುದು ಕಾಂಗ್ರೆಸ್‌ ಮುಂದಿರುವ ದೊಡ್ಡ ಸವಾಲು.

ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು, ಸಚಿವ ಸಂಪುಟದಲ್ಲಿ ಒಬ್ಬರೇ ಡಿಸಿಎಂ ಇರುತ್ತಾರೆ ಮತ್ತು ಅದನ್ನು ಶಿವಕುಮಾರ್ ಅವರಿಗೆ ನೀಡಲಾಗುವುದು ಎಂದು ಹೇಳಿದರು. ಈ ಹೇಳಿಕೆ ನೀಡಿದ ಕೆಲವೇ ನಿಮಿಷಗಳಲ್ಲಿ ಮಾಜಿ ಡಿಸಿಎಂ ಡಾ.ಪರಮೇಶ್ವರ ಅವರು (ಎಐಸಿಸಿ) ನನ್ನನ್ನೂ ಡಿಸಿಎಂ ಮಾಡಬೇಕು ಎಂದು ಆಗ್ರಹಿಸಿದರು. ʼನಾನು ಪ್ರತಿಭಟಿಸುವುದಿಲ್ಲ, ಆದರೆ ಪಕ್ಷಕ್ಕೆ ನನ್ನ ಕೊಡುಗೆಯನ್ನು ಗುರುತಿಸಬೇಕು. ರಾಜ್ಯದಲ್ಲಿ ಪಕ್ಷದ ಅಗಾಧ ಗೆಲುವಿಗೆ ಹಲವು ನಾಯಕರು ಶ್ರಮಿಸಿದ್ದಾರೆ. ಒಬ್ಬರೇ ಡಿಸಿಎಂ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಎಂ.ಕೃಷ್ಣಪ್ಪ ಸೇರಿದಂತೆ ಹಲವು ಹಿರಿಯ ನಾಯಕರಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿಲ್ಲ. ಬಿಬಿಎಂಪಿ ಚುನಾವಣೆಗೂ ಮುನ್ನ ಮತ್ತೆ ಅಧಿಕಾರಕ್ಕೆ ಬರಲು ಸಂಪುಟದಲ್ಲಿ ಬಲಿಷ್ಠ ನಾಯಕರ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

suddiyaana