ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ 2 ದಿನಗಳ ಮಧ್ಯಂತರ ಜಾಮೀನು – ಪುತ್ರನ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಲು ಅವಕಾಶ

ಬಿಜೆಪಿ ಮುಖಂಡ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ತಮ್ಮ ಮಗನ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಇದನ್ನೂ ಓದಿ : ನಟ ದರ್ಶನ್‌ಗೆ ಬಿಗ್ ರಿಲೀಫ್! – ದಾಸನ ಮನವಿಗೆ ಸ್ಪಂದಿಸಿದ ಕೋರ್ಟ್!
ಯೋಗೀಶಗೌಡ ಕೊಲೆ ಪ್ರಕರಣದ ಸಾಕ್ಷಿ ನಾಶದ ಆರೋಪದ ಮೇಲೆ ಕಳೆದ ಜೂನ್ ನಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜಾಮೀನು ತಿರಸ್ಕೃತವಾಗಿ ಮತ್ತೆ ಜೈಲುಪಾಲಾಗಿದ್ರು. ಆದ್ರೆ ಇದೀಗ ಕೋರ್ಟ್ ವಿನಯಕ್ ಕುಲಕರ್ಣಿಗೆ ಎರಡು ದಿನಗಳ ಮಟ್ಟಿಗೆ ಮಧ್ಯಂತರ ಜಾಮೀನು ನೀಡಿದೆ. ಪುತ್ರನ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಸಿಬಿಐನಿಂದ ಬಂಧಿತರಾಗಿರುವ ಶಾಸಕ ವಿನಯ್ ಕುಲಕರ್ಣಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಎರಡು ದಿನಗಳ ಕಾಲ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಈ ಹಿಂದೆ ಸಿಬಿಐನಿಂದ ಬಂಧಿತರಾಗಿ ಸೆರೆವಾಸ ಅನುಭವಿಸಿದ್ದ ವಿನಯ್ ಕುಲಕರ್ಣಿ, ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪದ ಮೇಲೆ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿತ್ತು. ಇದರಿಂದ ವಿನಯ್ ಕುಲಕರ್ಣಿ ಮರಳಿ ಪರಪ್ಪನ ಅಗ್ರಹಾರ ಸೇರಬೇಕಾಯಿತು. ಈಗ ತಮ್ಮ ಮಗ ಹೇಮಂತ್ ಅವರಿಗೆ ಅಪಘಾತವಾಗಿದ್ದರಿಂದ ಆತನ ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ. ಹೀಗಾಗಿ ಜಾಮೀನು ನೀಡುವಂತೆ ವಿನಯ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಶಾಸಕ ವಿನಯ್ ಕುಲಕರ್ಣಿ ಅವರಿಗೆ ಕೇವಲ ಎರಡು ದಿನಗಳವರೆಗೆ ಮಾತ್ರ ಜಾಮೀನು ಮಂಜೂರು ಮಾಡಿದ್ದು, ಸೆಪ್ಟೆಂಬರ್ 11ರ ಸಂಜೆ 5ಕ್ಕೆ ಸಿಬಿಐ ಅಧಿಕಾರಿಗಳ ಎದುರು ಹಾಜರಾಗಿ ಮರಳಿ ಜೈಲು ಸೇರಬೇಕಿದೆ.
ವಿನಯ್ ಕುಲಕರ್ಣಿ ಅವರ ಪುತ್ರ ಹೇಮಂತ್ ಅವರ ಕಾಲಿನ ಶಸ್ತ್ರ ಚಿಕಿತ್ಸೆ ಬೆಂಗಳೂರಿನಲ್ಲೇ ನಡೆಯುವುದರಿಂದ ವಿನಯ್ ಅವರು ಬೆಂಗಳೂರಿನಲ್ಲೇ ಉಳಿಯಬೇಕಾಗಿದೆ. ನ್ಯಾಯಾಲಯವು ವಿನಯ್ ಕುಲಕರ್ಣಿಗೆ 2 ದಿನಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಸೆಪ್ಟೆಂಬರ್ 11 ರಂದು ಸಂಜೆ 5 ಗಂಟೆಗೆ ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ. ಜಾಮೀನಿನ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಸಭೆ, ರಾಜಕೀಯ ರ್ಯಾಲಿ ಅಥವಾ ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಿದೆ. ಈ ಆದೇಶದಿಂದಾಗಿ, ವಿನಯ್ ಕುಲಕರ್ಣಿ ತಮ್ಮ ಮಗನ ಚಿಕಿತ್ಸೆಯ ಸಮಯದಲ್ಲಿ ಜೊತೆಯಿರಲು ಅವಕಾಶ ಪಡೆದಿದ್ದಾರೆ.

ನೋಡಿರಿ

