ಬೆಳಗಾವಿ ಅಧಿವೇಶನದಲ್ಲಿ ಟಿಪ್ಪು ಜಯಂತಿ ಕಿಚ್ಚು – ವಿಪಕ್ಷಗಳಿಗೆ ಸಿಗ್ತಾ ಹೊಸ ಅಸ್ತ್ರ?

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಟಿಪ್ಪು ಜಯಂತಿ ಕಿಚ್ಚು ಹಚ್ಚಿದೆ. ಟಿಪ್ಪು ಜಯಂತಿ ಕುರಿತು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಸರ್ಕಾರದ ಗಮನ ಸೆಳೆಯುವ ಸೂಚನೆಯಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ ಇದ್ದನ್ನೇ ಇಟ್ಟುಕೊಂಡು ವಿಪಕ್ಷಗಳು ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆಯಿದೆ. ಈ ಮೂಲಕ ಕೆಲವು ವರ್ಷಗಳಿಂದ ಶಮನಗೊಂಡಿದ್ದ ಟಿಪ್ಪು ಜಯಂತಿಯ ಕಿಡಿ ಮತ್ತೆ ಹೊತ್ತಿಕೊಳ್ಳಬಹುದು.
ಇದನ್ನೂ ಓದಿ: ರೈತ ವಿರೋಧಿ ನೀತಿ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ – 50ಕ್ಕೂ ಹೆಚ್ಚು ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ!
ಸದನದಲ್ಲಿ ಟಿಪ್ಪು ಜಯಂತಿ ವಿಚಾರವನ್ನು ಪ್ರಸ್ತಾಪಿಸಿದ ಕಾಶಪ್ಪನವರ್ ನಮ್ಮ ರಾಷ್ಟ್ರದಲ್ಲಿ ಎಲ್ಲಾ ಜಾತಿ, ಜನಾಂಗ ಇದ್ದು, ಜಾತ್ಯತೀತ ರಾಷ್ಟ್ರದಲ್ಲಿ ವಿರೋಧ ಯಾಕೆ? ಅಲ್ಪ ಸಂಖ್ಯಾತರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ವಾ? ಈ ಹಿಂದೆ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಟಿಪ್ಪು ವೇಷ ಹಾಕಿರಲಿಲ್ವಾ ಎಂದು ಪ್ರಶ್ನಿಸಿದ್ದಾರೆ. ಇತ್ತ ವಿಪಕ್ಷದಿಂದ ಅಧಿವೇಶನದಲ್ಲಿ ಕಾಲಹರಣ ಮಾಡಲು ಟಿಪ್ಪು ವಿಚಾರ ಉಪಯೋಗಿಸುತ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ 2013-18ರ ಸರ್ಕಾರದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅಂದಿನ ಸರ್ಕಾರ ಅಸ್ತು ಎಂದಿತ್ತು. ಆದರೆ, ಬಿಜೆಪಿ ಈ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದೇ ಕಾರಣದಿಂದಾಗಿ ಕರಾವಳಿ ಭಾಗದಲ್ಲಿ ಸಂಘರ್ಷದ ಸನ್ನಿವೇಶ ನಿರ್ಮಾಣಗೊಂಡಿತ್ತು. ಈ ಎಲ್ಲಾ ವಿರೋಧದ ನಡುವೆಯೂ, ಅಂದಿನ ಸರ್ಕಾರ ಬಿಗಿ ಭದ್ರತೆಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿತ್ತು. 2019ರಲ್ಲಿ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ಸ್ಥಗಿತಗೊಳಿಸಿತ್ತು. ಮತ್ತೆ ಇದೀಗ ಕೈ ಶಾಸಕ ಕಾಶಪ್ಪನವರ್ ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಸರ್ಕಾರ ಇದಕ್ಕೆ ಯಾವ ರೀತಿ ಉತ್ತರಿಸಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದ್ದು, ರಾಜ್ಯದಲ್ಲಿ ಈ ಕುರಿತಾದ ಮತ್ತೊಂದು ಸುತ್ತಿನ ವಿವಾದದ ಚರ್ಚೆ ಆರಂಭವಾಗುವ ಮುನ್ಸೂಚನೆ ಇದೆ.

ನೋಡಿರಿ

