ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮೇಲೆ ದಾಳಿ – ಕಪ್ಪು ಮಸಿ ಎರಚಿ ಹಲ್ಲೆ ನಡೆಸಿದ ಯುವಕರ ಗುಂಪು!

ಚುನಾವಣಾ ಪ್ರಚಾರದ ವೇಳೆ ಈಶಾನ್ಯ ದೆಹಲಿಯ ಕಾಂಗ್ರೆಸ್ ಮತ್ತು ಇಂಡಿಯಾ ಬ್ಲಾಕ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ಹಾರ ಹಾಕುವ ನೆಪದಲ್ಲಿ ಬಂದ ಯುವಕ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಕಪ್ಪು ಮಸಿ ಎರಚಿ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಪ್ರಜ್ವಲ್ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ತಕರಾರು ಇಲ್ಲ – ಹೆಚ್‌ಡಿ ದೇವೇಗೌಡ
ಪೂರ್ವ ದಿಲ್ಲಿಯ ನ್ಯೂ ಉಸ್ಮಾನ್‌ಪುರದಲ್ಲಿ ಕನ್ಹಯ್ಯಾ ಕುಮಾರ್ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಏಳರಿಂದ ಎಂಟು ಜನರಿದ್ದ ಯುವಕರ ಗುಂಪೊಂದು ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಾರ ಹಾಕುವ ನೆಪದಲ್ಲಿ ಬಂದು ಕನ್ಹಯ್ಯಕುಮಾರ್‌ಗೆ ಯುವಕನೊಬ್ಬ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಉಳಿದ ಯುವಕರು ಕನ್ಹಯ್ಯಾ ಕುಮಾರ್ ಮೇಲೆ ಕಪ್ಪು ಇಂಕ್ ಎರಚಿ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾಳಿಕೋರರ ಪೈಕಿ ಇಬ್ಬರು ಸಹ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಅವರ ಮೇಲೆ ತಾವೇ ದಾಳಿ ನಡೆದಿರುವುದಾಗಿ ಪ್ರತಿಪಾದಿಸಿದ್ದಾರೆ. ಅವರು ದೇಶವನ್ನು ವಿಭಜಿಸುವ ಘೋಷಣೆಗಳನ್ನು ಕೂಗಿದ್ದು, ಭಾರತೀಯ ಸೇನೆಯ ವಿರುದ್ಧ ಮಾತನಾಡಿದ್ದಕ್ಕಾಗಿ ಈ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಕೆಂಪಾದ ಕೈಗಳನ್ನು ತೋರಿಸಿ, ದೇಶವನ್ನು ತುಂಡು ತುಂಡಾಗಿ ವಿಭಜಿಸಲಾಗುತ್ತದೆ ಎಂದು ಘೋಷಣೆ ಕೂಗಿದ ಕಾರಣಕ್ಕೆ ಕನ್ಹಯ್ಯಾಗೆ ಈ ಶಿಕ್ಷೆ ನೀಡಲಾಗಿದೆ. ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಜೆಎನ್‌ಯು ಒಕ್ಕೂಟದ ಅಧ್ಯಕ್ಷರಾಗಿದ್ದ ಕನ್ಹಯ್ಯಾ ಅವರು 2016ರಲ್ಲಿ ನೀಡಿದ್ದರು ಎನ್ನಲಾದ ‘ತುಕ್ಡೆ ತುಕ್ಡೆ’ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದಾರೆ. “ನಾವು ದಾಳಿ ಮೂಲಕ ನಮ್ಮ ಉತ್ತರ ನೀಡಿದ್ದೇವೆ” ಎಂದು ಇಬ್ಬರು ವ್ಯಕ್ತಿಗಳು ತಿಳಿಸಿದ್ದಾರೆ. ತಮ್ಮನ್ನು ಅವರು ‘ಸನಾತನಿ ಸಿಂಹ’ಗಳು ಎಂದು ಕರೆದುಕೊಂಡಿದ್ದಾರೆ. ಕನ್ಹಯ್ಯಾ ಕುಮಾರ್ ಅವರು ಭಾರತೀಯ ಸೇನೆಯನ್ನು ಕೂಡ ಅವಮಾನಿಸಿದ್ದಾರೆ. ಅದಕ್ಕೆ ತಕ್ಕನಾಗಿ ‘ಟ್ರೀಟ್‌ಮೆಂಟ್’ ಕೊಟ್ಟಿದ್ದೇವೆ ಎಂದಿದ್ದಾರೆ.
ಈ ಪ್ರಕರಣದ ಸಂಬಂಧ ಬ್ರಹ್ಮಪುರಿಯ ಎಎಪಿ ಕೌನ್ಸಿಲರ್ ಛಾಯಾ ಗೌರವ್ ಶರ್ಮಾ ದೂರು ನೀಡಿದ್ದಾರೆ. ಕರ್ತಾರ್ ನಗರದಲ್ಲಿನ ಪಕ್ಷದ ಕಚೇರಿಯಿಂದ ತಾವು ಮತ್ತು ಕನ್ಹಯ್ಯಾ ಕುಮಾರ್ ಅವರು ಹೊರಗೆ ಹೋಗುತ್ತಿದ್ದಾಗ ಏಳರಿಂದ ಎಂಟು ಮಂದಿ ಬಂದು ಕನ್ಹಯ್ಯಾ ಅವರಿಗೆ ಹೂವಿನ ಹಾರ ಹಾಕಿದ್ದರು. ಬಳಿಕ ಅವರ ಮೇಲೆ ಕಪ್ಪು ಮಸಿ ಎರಚಿ, ಹಲ್ಲೆ ನಡೆಸಿದರು ಎಂದು ಆಪ್ ಕೌನ್ಸಿಲರ್ ತಿಳಿಸಿದ್ದಾರೆ. ದಾಳಿಯಲ್ಲಿ ಮೂರರಿಂದ ನಾಲ್ಕು ಮಂದಿ ಮಹಿಳೆಯರಿಗೆ ಗಾಯಗಳಾಗಿವೆ. ಒಬ್ಬ ಮಹಿಳಾ ಪತ್ರಕರ್ತರು ಗಲಾಟೆಯಲ್ಲಿ ಚರಂಡಿಗೆ ಬಿದ್ದಿದ್ದಾರೆ. ದುಷ್ಕರ್ಮಿಗಳು ತಮ್ಮ ಸ್ಟೋಲ್ ಮೂಲಕವೇ ತಮ್ಮನ್ನು ಒಂದು ಬದಿಗೆ ಎಳೆದುಕೊಂಡು ಹೋದರು. ತಮ್ಮನ್ನು ಹಾಗೂ ತಮ್ಮ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದಾರೆ.
ಛಾಯಾ ಶರ್ಮಾ ಅವರ ದೂರನ್ನು ಸ್ವೀಕರಿಸಿರುವುದಾಗಿ ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಈ ವಿಡಿಯೋಗಳನ್ನು ತಾವು ಪರಿಶೀಲನೆ ನಡೆಸುತ್ತಿದ್ದು, ತನಿಖೆ ಆರಂಭಿಸಿರುವುದಾಗಿ ಮಾಹಿತಿ ನೀಡಿದ್ದಾರೆ.