ಮಂಡ್ಯದಲ್ಲಿ ಕುಮಾರಣ್ಣನ ಸೋಲಿಸಲು ಸಿದ್ದು-ಡಿಕೆಶಿ ಹೆಣೆದ ವ್ಯೂಹ ಎಂಥಾದ್ದು?

ಮಂಡ್ಯದಲ್ಲಿ ಕುಮಾರಣ್ಣನ ಸೋಲಿಸಲು ಸಿದ್ದು-ಡಿಕೆಶಿ ಹೆಣೆದ ವ್ಯೂಹ ಎಂಥಾದ್ದು?

ಅಂತೂ ಇಂತೂ ಅಳೆದು ತೂಗಿ, ಹತ್ತಾರು ಸಸ್ಪೆನ್ಸ್ ಕ್ರಿಯೇಟ್ ಮಾಡಿ ಕೊನೆಗೂ ಹೆಚ್ ಡಿ ಕುಮಾರಸ್ವಾಮಿಯವ್ರೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡೋದಾಗಿ ಘೋಷಿಸಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ವಿರುದ್ಧ ಸೋತಿದ್ದ ನಿಖಿಲ್ ಕುಮಾರಸ್ವಾಮಿಯವ್ರ ಸೋಲಿನ ಸೇಡನ್ನ ತೀರಿಸಿಕೊಳ್ಳೋಕೆ ತಂದೆಯೇ ಅಖಾಡಕ್ಕೆ ಇಳಿದಿದ್ದಾರೆ. ಜೆಡಿಎಸ್ ಭದ್ರಕೋಟೆಯನ್ನ ಮರಳಿ ಕೈವಶ ಮಾಡಿಕೊಳ್ಳೋಕೆ ಪಣ ತೊಟ್ಟಿದ್ದಾರೆ. ಆದ್ರೆ ಈ ಬಾರಿ ಮಂಡ್ಯದಲ್ಲಿ ಹೆಚ್​​ಡಿಕೆಗೆ ಗೆಲುವು ಅಷ್ಟು ಸುಲಭವಾಗಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯನ್ನ ಬಹುತೇಕ ಕಬ್ಜ ಮಾಡಿರೋ ಕಾಂಗ್ರೆಸ್ ಪಡೆ ಲೋಕಸಭಾ ಚುನಾವಣೆಯಲ್ಲೂ ಗೆದ್ದು ಬೀಗೋಕೆ ರಣತಂತ್ರ ರೂಪಿಸುತ್ತಿದೆ. ಸಚಿವ ಚೆಲುವರಾಯಸ್ವಾಮಿಗೆ ಟಾರ್ಗೆಟ್ ನೀಡಿ ಕುಮಾರಸ್ವಾಮಿವ್ರನ್ನ ಸೋಲಿಸೋಕೆ ಪ್ಲ್ಯಾನ್ ರೂಪಿಸಿದೆ.

ಇದನ್ನೂ ಓದಿ: ಹೃದಯಾಘಾತದಿಂದ ಕನ್ನಡ, ತಮಿಳು ನಟ ಡ್ಯಾನಿಯಲ್​​ ಬಾಲಾಜಿ ನಿಧನ

ಕಾಂಗ್ರೆಸ್ ಗೆಲುವಿಗೆ ಪಣ!

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರುಗೆ ಟಿಕೆಟ್ ನೀಡಲಾಗಿದೆ.  ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಚಂದ್ರು ಮತ್ತು ಹೆಚ್​ಡಿಕೆ ನಡುವೆಯೇ ನೇರ ಪೈಪೋಟಿ ನಡೆಯಲಿದೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದರು. ಆದರೆ, ಮಂಡ್ಯದ ಜನ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್‌ಗೆ ಮಣೆ ಹಾಕಿದ್ದರು. ನಿಖಿಲ್ ಸೋಲಿನಿಂದ ಕುಮಾರಸ್ವಾಮಿ ಮುಖಭಂಗ ಅನುಭವಿಸುವಂತಾಗಿತ್ತು. ಆದರೆ ಇದೀಗ ಸ್ವತಃ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಈ ಪೈಕಿ 6ರಲ್ಲಿ ಕಾಂಗ್ರೆಸ್, ಒಂದರಲ್ಲಿ ರೈತಸಂಘ, 1ರಲ್ಲಿ ಜೆಡಿಎಸ್‌ ಇದೆ. ಹೀಗಾಗಿ ಕಾಂಗ್ರೆಸ್ ಪ್ರಾಬಲ್ಯವಿರೋ ಕಾರಣದಿಂದಾಗಿ ಕಾಂಗ್ರೆಸ್ ಗೆಲುವಿಗೆ ಜಿಲ್ಲೆಯ ಕೈ ನಾಯಕರು ಪಣತೊಟ್ಟಿದ್ದಾರೆ. ಅದಕ್ಕಾಗಿಯೇ ಪ್ರಭಾವಿ ಅಭ್ಯರ್ಥಿ ಹಾಗೂ ಉದ್ಯಮಿ ಸ್ಟಾರ್ ಚಂದ್ರು ಅವರನ್ನು ಕಣಕ್ಕಿಳಿಸಲಾಗಿದೆ. ಸ್ಟಾರ್ ಚಂದ್ರು ಗೆಲುವಿಗೆ ಎಲ್ಲಾ ಕಾಂಗ್ರೆಸ್ ಶಾಸಕರು ಭಿನ್ನಮತ ಇಲ್ಲದೆ ಪ್ರಯತ್ನ ಶುರು ಮಾಡಿದ್ದಾರೆ.

ಮಂಡ್ಯದಿಂದ ಕುಮಾರಸ್ವಾಮಿ ಅಖಾಡಕ್ಕಿಳಿಯುತ್ತಿದ್ದಂತೆ ಸಹಜವಾಗಿ ಮಂಡ್ಯ ಕಣ ರಂಗೇರಿದೆ. ಹೀಗಾಗಿ ಸ್ವತಃ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಇದನ್ನು ಪ್ರತಿಷ್ಠೆಯ ಕಣವನ್ನಾಗಿ ಸ್ವೀಕಾರ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಅವರ ವಿರುದ್ಧ ಕುಮಾರಸ್ವಾಮಿಯವರು ತಮ್ಮ ಸಂಬಂಧಿ ಸಿ.ಎನ್ ಮಂಜುನಾಥ್ ಅವ್ರನ್ನೇ ಕಣಕ್ಕಿಳಿಸಿದ್ದಾರೆ. ಹೀಗಾಗಿ ಮಂಡ್ಯದಲ್ಲೇ ತಿರುಗೇಟು ಕೊಡ್ಬೇಕು ಅಂತಾ ಚಾಲೆಂಜ್ ಆಗಿ ಸ್ವೀಕರಿಸಿದ್ದಾರೆ.

ಚಲುವರಾಯಸ್ವಾಮಿಗೆ ಟಾರ್ಗೆಟ್!  

ಮಂಡ್ಯದ ಕಾಂಗ್ರೆಸ್​ನ ಬಹುತೇಕ ಶಾಸಕರು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವೈಯಕ್ತಿಕ ಭಿನ್ನಮತ ಹೊಂದಿದ್ದಾರೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ತಮ್ಮ ಅಭ್ಯರ್ಥಿಯ ಗೆಲುವಿಗೆ ಪ್ರಯತ್ನ ನಡೆಸುತ್ತಿದ್ದಾರೆ. ಅಲ್ದೇ   ಕುಮಾರಸ್ವಾಮಿ ಮಂಡ್ಯದಲ್ಲಿ ಸಿಂಪತಿ ಮತಗಳನ್ನು ತಮ್ಮ ಕಡೆಗೆ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಆರೋಗ್ಯ ಸಮಸ್ಯೆ, ಕಳೆದ ಬಾರಿ ಪುತ್ರನ ಸೋಲು, ಜಾತಿ ಅಸ್ಮಿತೆ ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುವ ಸಾಧ್ಯತೆ ಇದೆ. ಅಲ್ದೇ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಕೂಡಾ ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ನಡೆಸುವ ತಂತ್ರಕಾರಿಯನ್ನು ಜೆಡಿಎಸ್ ಮಾಡುತ್ತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಚಿವ ಚೆಲುವರಾಯಸ್ವಾಮಿಗೆ ಟಾರ್ಗೆಟ್ ನೀಡಿದ್ದಾರೆ. ಮಂಡ್ಯದಲ್ಲಿ ಎಲ್ಲರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸೂಕ್ತ ರಣತಂತ್ರ ರೂಪಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಸದ್ಯದ ಮಂಡ್ಯ ರಾಜಕೀಯ ಲೆಕ್ಕಾಚಾರದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದ ಸುಮಲತಾ ಅಂಬರೀಶ್ ಸೈಲೆಂಟ್ ಆಗಿದ್ದಾರೆ. ಶನಿವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಭೆ ಕರೆದಿದ್ದಾರೆ. ಸಭೆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಹಾಗೇನಾದ್ರೂ ಸುಮಲತಾ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ್ರೆ ಜಿಲ್ಲೆಯ ಇಡೀ ಚಿತ್ರಣವೇ ಬದಲಾಗಲಿದೆ. ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

Shwetha M