ಹಿಮಾಚಲದ ಹೊಸ ಸಿಎಂ ಯಾರು?-ರೇಸ್ನಲ್ಲಿ ನಾಲ್ವರು ನಾಯಕರು
‘ಕೈ’ ಗೆಲುವಿನ ಹಿಂದೆ ಪ್ರಿಯಾಂಕಾ ಗಾಂಧಿ ಮ್ಯಾಜಿಕ್!
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನ ಮಣಿಸಿ ಕಾಂಗ್ರೆಸ್ ಗೆದ್ದು ಬೀಗಿದ್ದಾಗಿದೆ. ಈಗ ಸರ್ಕಾರ ರಚನೆಗೆ ಭಾರಿ ಸರ್ಕಸ್ ಕೂಡ ಶುರುವಾಗಿದೆ. ಹಿಮಾಚಲ ನೂತನ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಸದ್ಯದ ಕುತೂಹಲ. ಯಾಕಂದ್ರೆ, ಹಿಮಾಚಲ ಕಾಂಗ್ರೆಸ್ನ ಒಟ್ಟು ನಾಲ್ಕು ಮಂದಿ ನಾಯಕರು ಸಿಎಂ ರೇಸ್ನಲ್ಲಿದ್ದಾರೆ. ಹೀಗಾಗಿ ಇಂದು ಕಾಂಗ್ರೆಸ್ ಶಾಸಕರ ಮಹತ್ವದ ಸಭೆ ಕೂಡ ನಡೆಯಲಿದೆ. ಈ ವೇಳೆ, ಮುಖ್ಯಮಂತ್ರಿ ಹುದ್ದೆ, ಪಕ್ಷದ ಮುಂದಿರೋ ಸವಾಲು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ನಡೆಯಲಿದೆ.
ಮಾಜಿ ಸಿಎಂ ವೀರಭದ್ರ ಸಿಂಗ್ ಪತ್ನಿ ಹಿಮಾಚಲ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಮುಖ್ಯಮಂತ್ರಿ ರೇಸ್ನ ಮುಂಚೂಣಿಯಲ್ಲಿದ್ದಾರೆ. ಅಲ್ದೆ, ತಮಗೆ ಎಲ್ಲಾ ಶಾಸಕರ ಬೆಂಬಲವಿದೆ ಅಂತಾನೂ ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಯಾರು ಅನ್ನೋ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳೋ ಸಾಧ್ಯತೆ ಇದೆ. ಯಾಕಂದ್ರೆ ಹಿಮಾಚಲದಲ್ಲಿ ಭರ್ಜರಿ ಗೆಲುವಿನ ಹಿಂದೆ ಪ್ರಿಯಾಂಕಾರ ರಣತಂತ್ರ ಕೂಡ ಅಡಗಿದೆ. ಪ್ರಿಯಾಂಕಾ ನೇತೃತ್ವದಲ್ಲೇ ಹಿಮಾಚಲದಲ್ಲಿ ಕಾಂಗ್ರೆಸ್ ಪ್ರಚಾರ ನಡೆಸಿತ್ತು. ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರು, ಯುವಕರಿಗಾಗಿ ವಿವಿಧ ಯೋಜನೆಗಳನ್ನ ಜಾರಿಗೊಳಿಸೋ ಭರವಸೆಯನ್ನ ಜನರಿಗೆ ಪರಿಣಾಮಕಾರಿಯಾಗಿ ತಲುಪುವಂತೆ ಪ್ರಿಯಾಂಕಾ ನೋಡಿಕೊಂಡಿದ್ರು. ಹೀಗಾಗಿ ಹಿಮಾಚಲದಲ್ಲಿ ಗೆಲುವಿಗೆ ಪ್ರಿಯಾಂಕಾ ಗಾಂಧಿಯೇ ಕಾರಣ ಅಂತಾ ಹಲವು ಕಾಂಗ್ರೆಸ್ ನಾಯಕರು ಬಣ್ಣಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಹಿಮಾಚಲ ಗೆಲುವಿನ ಶ್ರೇಯಸ್ಸನ್ನು ಪ್ರಿಯಾಂಕಾ ಗಾಂಧಿಗೆ ಕೊಟ್ಟಿದ್ದಾರೆ.