ಅಭ್ಯರ್ಥಿಗಳ ಪಟ್ಟಿ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಗೊಂದಲ -ಘೋಷಣೆಗೂ ಮುನ್ನವೇ ಕಾದಾಟ..!

ಅಭ್ಯರ್ಥಿಗಳ ಪಟ್ಟಿ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಗೊಂದಲ -ಘೋಷಣೆಗೂ ಮುನ್ನವೇ ಕಾದಾಟ..!

ಎಲ್ಲಾ ಅಂದುಕೊಂಡಂತೆ ಆಗಿದ್ರೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇವತ್ತು ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡ್ಬೇಕಿತ್ತು. ಆದ್ರೆ ಕಾಂಗ್ರೆಸ್ ನಾಯಕರಲ್ಲೇ ಈ ಬಗ್ಗೆ ಗೊಂದಲ ಇದ್ದಂತಿದೆ. ಯಾಕಂದ್ರೆ ಕೆಪಿಸಿಸಿ ಅಧ್ಯಕ್ಷರು ಎಐಸಿಸಿ ಅಧ್ಯಕ್ಷರ ಕಡೆ ಬೆರಳು ತೋರಿಸಿದ್ರೆ ಎಐಸಿಸಿ ಅಧ್ಯಕ್ಷರು ಸಂಘಟನಾ ಕಾರ್ಯದರ್ಶಿ ಕಡೆ ಬೊಟ್ಟು ಮಾಡ್ತಿದ್ದಾರೆ.

ಯುಗಾದಿ ಹಬ್ಬದ ದಿನ ಪಟ್ಟಿ ಬಿಡುಗಡೆ ಮಾಡೋದಾಗಿ ನಿನ್ನೆ ಡಿಕೆಶಿ ತಿಳಿಸಿದ್ರು. ಆದರೆ ಹಲವು ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಪಟ್ಟಿ ಬಿಡುಗಡೆಯನ್ನು ಮುಂದೂಡಿಕೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಡಿಕೆಶಿ ಇವತ್ತು ಮೊದಲ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಯುಗಾದಿ ಹಬ್ಬಕ್ಕೆ ಬೆಂಗಳೂರಿಗೆ ಬಂದಿದ್ದಾರೆ. ಹೀಗಾಗಿ ಎರಡು ಮೂರು ದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ. ಆದ್ರೆ ಮಲ್ಲಿಕಾರ್ಜುನ ಖರ್ಗೆ ಅವರು ಪಟ್ಟಿ ಬಿಡುಗಡೆ ಬಗ್ಗೆ ನನಗೆ ಗೊತ್ತೇ ಇಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಇದ್ದಾರೆ.. ಯಾವಾಗ ರಿಲೀಸ್ ಮಾಡ್ತಾರೋ ಗೊತ್ತಿಲ್ಲ ಅಂದಿದ್ದಾರೆ.

ಇದನ್ನೂ ಓದಿ : ಸಿಎಂ ರೇಸ್ ನಲ್ಲಿರುವ ಸಿದ್ದುಗೇ ಸಿಗ್ತಿಲ್ವಾ ಕ್ಷೇತ್ರ? – ಆಯ್ಕೆಗಳೆಷ್ಟು.. ಅಂತಿಮ ಯಾವುದು..?

ಮತ್ತೊಂದೆಡೆ ಕಾಂಗ್ರೆಸ್​ನಲ್ಲಿ ಈವರೆಗೂ ಯಾರಿಗೂ ಅಧಿಕೃತವಾಗಿ ಟಿಕೆಟ್ ಘೋಷಣೆ ಆಗಿಲ್ಲ. ಆದ್ರೆ ಘೋಷಣೆಗೂ ಮುನ್ನವೇ ತಾನೇ ಅಭ್ಯರ್ಥಿ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಕೃಷ್ಣ, ನಿನ್ನೆ ಮಂಡ್ಯದ ಆದಿಚುಂಚನಗಿರಿಗೆ ಡಿಕೆಶಿ ಜೊತೆಗೆ ತೆರಳಿ ಕಾಲಭೈರವೇಶ್ವರಿನಿಗೆ ಪೂಜೆ ಸಲ್ಲಿಸಿದ್ರು..ಬಳಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುರಿತು ಪೋಸ್ಟ್ ಹಾಕಿದ್ದಾರೆ. ಅಷ್ಟೇ ಅಲ್ಲದೇ ಫೇಸ್‍ಬುಕ್‍ನಲ್ಲಿ ತಾನು ಕಾಂಗ್ರೆಸ್ ಅಭ್ಯರ್ಥಿ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ. ಇದೀಗ ಡಾ. ಕೃಷ್ಣ ಅವರ ಫೇಸ್‍ಬುಕ್ ಪೋಸ್ಟ್ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯದಲ್ಲಿ ಬರೋಬ್ಬರಿ 16 ಮಂದಿ ಟಿಕೆಟ್‍ಗೆ ಅರ್ಜಿ ಹಾಕಿದ್ದರು.. ಆದರೂ ಡಾ.ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಟಿಕೆಟ್ ಘೋಷಣೆಗೂ ಮುನ್ನವೇ ಅಭ್ಯರ್ಥಿ ಯಾರೆಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರಾ ಎಂಬೆಲ್ಲಾ ಚರ್ಚೆಗಳು ನಡೆಯುತ್ತಿವೆ.

suddiyaana