ಕೈ ತಪ್ಪಿದ ಬಾಗಲಕೋಟೆ ಟಿಕೆಟ್ – ಬಂಡಾಯದ ಕಹಳೆ ಮೊಳಗಿಸುತ್ತಾರಾ ವೀಣಾ ಕಾಶಪ್ಪನವರ್?
ಟಿಕೆಟ್ ಸಿಕ್ಕಿಲ್ಲ ಅಂತಾ ಕಣ್ಣೀರು ಹಾಕಿದ್ದಾಯ್ತು. ಬೆಂಬಲಿಗರು ಕೂಡಾ ಟಿಕೆಟ್ಗಾಗಿ ಹೋರಾಟ ಮಾಡಿದ್ದೂ ಆಯ್ತು. ಆದ್ರೂ ಕೂಡಾ ಬಾಗಲಕೋಟೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಒಲಿದಿದ್ದು ಮಾತ್ರ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ಅವರಿಗೆ. ಇದ್ರಿಂದ ತುಂಬಾ ನೊಂದಿರುವ ವೀಣಾ ಕಾಶಪ್ಪನವರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ಗೆ ಸಾಲು ಸಾಲು ಸಂಕಷ್ಟ – ಆದಾಯ ತೆರಿಗೆ ಇಲಾಖೆ ಹೊಸ ನೋಟಿಸ್ ಜಾರಿ
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೀಣಾ ಕಾಶಪ್ಪನವರ್, ಸಂಸತ್ ಚುನಾವಣೆಯ ಬಳಿಕ ಯಾವುದಾದರೂ ಸ್ಥಾನಮಾನ ನೀಡುವ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿಲ್ಲ. ತನಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಳಿದ್ದರೂ ಸಂಸದೆಯಾಗಬೇಕೆಂಬ ಅದಮ್ಯ ಹಂಬಲದಿಂದ ಅದನ್ನು ನಿರಾಕರಿಸಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಕಾಯುತ್ತಿದ್ದೆ. ಆದರೆ ವರಿಷ್ಠರು ತನಗೆ ನಿರಾಶೆಗೊಳಿಸಿದರು ಮತ್ತು ತನ್ನ ಸಾಮರ್ಥ್ಯವನ್ನು ಕೇವಲ ಕ್ಷೇತ್ರದಲ್ಲಿ ಸಂಘಟನೆ ಕೆಲಸ ಮಾಡುವುದಕ್ಕೆ ಸೀಮಿತಗೊಳಿಸಿದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆ ಕ್ಷೇತ್ರದಲ್ಲಿ ತಾನು ಸ್ಥಳೀಯಳು ಮತ್ತು ಜನ ತನ್ನನ್ನು ಗುರುತಿಸುತ್ತಾರೆ ಆದರೆ ಸಂಯುಕ್ತ ಪಾಟೀಲ್ ಅವರ ಪತಿ ಬೀದರ್ ನವರು, ಅವರಿಗೆ ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಬಹುದಿತ್ತಲ್ಲ? ಅವರನ್ನು ಬಾಗಲಕೋಟೆಗೆ ಕರೆತರುವ ಅವಶ್ಯಕತೆ ಏನಿತ್ತು? ಪಂಚಮಸಾಲಿ ಸಮುದಾಯದ ಹೆಸರು ಹೇಳಿಕೊಂಡು ಹೊರಗಿನಿಂದ ಬಂದು ಟಿಕೆಟ್ ಪಡೆಯುವುದು ಅನ್ಯಾಯ. ಬಂಡಾಯ ಅಭ್ಯರ್ಥಿ ಆಗುವ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು.