ದೆಹಲಿಯತ್ತ ಡಿಕೆ ಶಿವಕುಮಾರ್ – ಇಂದೇ ಸಿಎಂ ಆಯ್ಕೆ ಸಾಧ್ಯತೆ

ದೆಹಲಿಯತ್ತ ಡಿಕೆ ಶಿವಕುಮಾರ್ – ಇಂದೇ ಸಿಎಂ ಆಯ್ಕೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಇದೀಗ ಸಿಎಂ ಆಯ್ಕೆ ವಿಚಾರದಲ್ಲಿ ಮಾತ್ರ ಕಾಂಗ್ರೆಸ್‌ ಗೆ ಕಗ್ಗಂಟು ಎದುರಾಗಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಹಿರಿಯ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಚರ್ಚಿಸಲು ಪಕ್ಷದ ವರಿಷ್ಠರು ಇಬ್ಬರು ನಾಯಕರಿಗೆ  ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ  ಸಿದ್ದರಾಮಯ್ಯ ಈಗಾಗಲೇ ದೆಹಲಿ ತಲುಪಿದ್ದಾರೆ. ಡಿ.ಕೆ. ಶಿವಕುಮಾರ್‌ ಮಂಗಳವಾರ ದೆಹಲಿಗೆ ತೆರಳುತ್ತಿದ್ದಾರೆ.

ಇದನ್ನೂ ಓದಿ: ‘ಕೊಟ್ಟರೆ ಸಿಎಂ ಹುದ್ದೆ ನೀಡಿ.. ನಾನಂತೂ ಸಚಿವನಾಗಲ್ಲ’ – ಡಿಕೆಶಿ ಹಠದಿಂದ ಹೈಕಮಾಂಡ್ ಗೆ ತಲೆಬಿಸಿ!

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಚರ್ಚಿಸಲು ಪಕ್ಷದ ವರಿಷ್ಠರ ಆಹ್ವಾನದ ಮೇರೆಗೆ ಸೋಮವಾರ ಡಿಕೆಶಿ ದೆಹಲಿಗೆ ತೆರಳಬೇಕಿತ್ತು. ಆದರೆ ಅವರು ದೆಹಲಿಗೆ ಹೋಗುವ ಪ್ಲಾನ್‌ ಅನ್ನು ಸಂಜೆ ವರೆಗೂ ಮುಂದೂಡುತ್ತಲೇ ಬಂದಿದ್ದರು. ಬಳಿಕ ಸೋಮವಾರ ಸಂಜೆ ತಮ್ಮ ಪ್ರವಾಸವನ್ನು ದಿಢೀರ್‌ ರದ್ದು ‌ಮಾಡಿದ್ದರು.  ಮಂಗಳವಾರ ಬೆಳಿಗ್ಗೆ ದೆಹಲಿಗೆ ಡಿ.ಕೆ. ಶಿವಕುಮಾರ್ ಹೊರಟಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ದೆಹಲಿಗೆ ಬರಲು ಹೇಳಿದ್ದಾರೆ. ಒಬ್ಬನೇ ದೆಹಲಿಗೆ ಬರುವಂತೆ ನಾಯಕರು ಹೇಳಿದ್ದಾರೆ. ಹೀಗಾಗಿ ನಾನೊಬ್ಬನೇ ದೆಹಲಿಗೆ ಹೊರಡುತ್ತಿದ್ದೇನೆ. ಕಾಂಗ್ರೆಸ್​ ಪಕ್ಷವೇ ನಮಗೆ ಶಕ್ತಿ. ರಾಜ್ಯದ ಜನರ ನಂಬಿಕೆ ಉಳಿಸಿಕೊಳ್ಳಲು ಶ್ರಮಪಡಬೇಕಿದೆ. ಕಾಂಗ್ರೆಸ್ ಪಕ್ಷ ನನಗೆ ತಾಯಿ, ದೇವಸ್ಥಾನ ಇದ್ದಂತೆ. ನನ್ನ ಕೆಲಸವನ್ನು ನಾನು ಮಾಡಿದ್ದೇನೆ ಎಂದು ದೆಹಲಿಗೆ ತೆರಳುವ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆದ್ದು ಬೀಗಿದ ನಂತರ ನೂತನ ಸಿಎಂ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲೆಡೆ ಮನೆಮಾಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರಾ ಅಥವಾ ಡಿ.ಕೆ. ಶಿವಕುಮಾರ್‌ ಸಿಎಂ ಆಗುತ್ತಾರಾ ಎನ್ನುವ ಪ್ರಶ್ನೆಗೆ ಇಂದು ರಾತ್ರಿ ಒಳಗೆ ಸ್ಪಷ್ಟ ಉತ್ತರ ಸಿಗಲಿದೆ.

suddiyaana