ಕಾಂಗ್ರೆಸ್ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧತೆ -ಕಾಂಗ್ರೆಸ್ ಗೆ 4 ಕ್ಷೇತ್ರದಲ್ಲಿ ಗೆಲುವು?
ಲೋಕಸಭಾ ಚುನಾವಣೆಗೆ ಈಗಾಗ್ಲೇ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. 195 ಕ್ಷೇತ್ರಗಳಿಗೆ ಕದನಕಲಿಗಳ ಹೆಸರನ್ನು ಘೋಷಿಸಿದೆ. ಇದೀಗ ಕಾಂಗ್ರೆಸ್ ಹೈಕಮಾಂಡ್ ಕೂಡ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಮಾರ್ಚ್ 10 ರ ಒಳಗೆ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಬಿಡುಗಡೆಗೆ ಮುಂದಾಗಿದ್ದು, ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಕರ್ನಾಟಕದ 10ಕ್ಕೂ ಹೆಚ್ಚು ಗೊಂದಲವಿಲ್ಲದ ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ. ಈಗಾಗ್ಲೇ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುಮಾರು 15 ಕ್ಷೇತ್ರಗಳ ಹೆಸರನ್ನು ಅಂತಿಮಗೊಳಿಸಿದ್ದಾರೆ. ಸಂಭವನೀಯರ ಪಟ್ಟಿಯನ್ನು ದೆಹಲಿ ವರಿಷ್ಠರಿಗೆ ಕಳಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್‌ಗೆ ಬಿಗ್ ರಿಲೀಫ್ – ಇಡಿ ಪ್ರಕರಣವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್!
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನಿರೀಕ್ಷೆಯಂತೆಯೇ ಹಾಲಿ ಸಂಸದ ಡಿ.ಕೆ ಸುರೇಶ್ಗೆ ಮತ್ತೊಮ್ಮೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ. ಇನ್ನು ಭಾರೀ ಪೈಪೋಟಿಗೆ ಕಾರಣವಾಗಿರುವ ಮಂಡ್ಯ ಕ್ಷೇತ್ರದಿಂದ ಸ್ಟಾರ್ ಮಂಜು ಅಲಿಯಾಸ್ ವೆಂಕಟೇರಮಣಗೌಡ ಅವ್ರಿಗೆ ಟಿಕೆಟ್ ನೀಡುವ ನಿರೀಕ್ಷೆ ಇದೆ. ಇನ್ನು ತುಮಕೂರು ಕ್ಷೇತ್ರದಿಂದ ಎಸ್.ಪಿ ಮುದ್ದಹನುಮೇಗೌಡ, ಮೈಸೂರಿನಿಂದ ಎಂ. ಲಕ್ಷ್ಮಣ್, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ರಕ್ಷಾ ರಾಮಯ್ಯ ಅಖಾಡಕ್ಕಿಳಿಯುವ ಸಾಧ್ಯತೆ ಇದೆ. ಇನ್ನು ಕೋಲಾರದಿಂದ ಹಾಲಿ ಸಚಿವ ಕೆ.ಹೆಚ್ ಮುನಿಯಪ್ಪರನ್ನು ಕಣಕ್ಕಿಳಿಸಲು ಪ್ಲ್ಯಾನ್ ಸಿದ್ಧವಾಗಿದೆ. ಬೆಂಗಳೂರು ಕೇಂದ್ರಕ್ಕೆ ಎನ್.ಎ ಹ್ಯಾರಿಸ್, ಬೆಂಗಳೂರು ದಕ್ಷಿಣಕ್ಕೆ ಸೌಮ್ಯಾ ರೆಡ್ಡಿ, ಹಾಸನದಲ್ಲಿ ಶ್ರೇಯಸ್ ಪಟೇಲ್ ಹಾಗೂ ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜಕುಮಾರ್ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಹಾಗೇ ಚಿತ್ರದುರ್ಗ ಕ್ಷೇತ್ರದಿಂದ ಬಿ.ಎನ್ ಚಂದ್ರಪ್ಪ, ವಿಜಯಪುರದಿಂದ ಮಾಜಿ ಶಾಸಕ ರಾಜು ಅಲಗೂರು, ಬೀದರ್ನಿಂದ ರಾಜಶೇಖರ್ ಪಾಟೀಲ್, ಕಲಬುರಗಿಯಿಂದ ರಾಧಾಕೃಷ್ಣ ಹೆಸರು ಕೇಳಿ ಬರ್ತಿದೆ. ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ ಅಥವಾ ಅಂಶುಮಂತ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಇನ್ನು ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲು ಬಿಜೆಪಿ ಹಾಗೂ ಜೆಡಿಎಸ್ 28 ಕ್ಷೇತ್ರಗಳನ್ನೂ ಟಾರ್ಗೆಟ್ ಮಾಡಿವೆ. ಹೀಗಾಗಿ ಕಾಂಗ್ರೆಸ್ ನಾಯಕರು ಅಳೆದು ತೂಗಿ ಅಭ್ಯರ್ಥಿಗಳನ್ನ ಫೈನಲ್ ಮಾಡುತ್ತಿದ್ದಾರೆ. ಮೊದಲ 15 ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಾಲಿ ಸಚಿವರ ಪೈಕಿ ಒಬ್ಬರ ಹೆಸರು ಮಾತ್ರ ಇದೆ. ಅದು ಕೋಲಾರ ಕ್ಷೇತ್ರಕ್ಕೆ ಕೆ.ಹೆಚ್. ಮುನಿಯಪ್ಪ. ಇನ್ನು ಹಾಲಿ ಶಾಸಕರ ಪೈಕಿ ಬೆಂಗಳೂರು ಕೇಂದ್ರಕ್ಕೆ ಎನ್.ಎ. ಹ್ಯಾರೀಸ್ ಅವರ ಹೆಸರು ಇದೆ. ಪ್ರತಿಯೊಂದು ಕ್ಷೇತ್ರದ ಟಿಕೆಟ್ ಗಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲು ನಿರ್ಧರಿಸಲಾಗಿದೆ. ಮತ್ತೊಂದೆಡೆ ಚುನಾವಣೆ ಘೋಷಣೆಗೂ ಮುನ್ನವೇ ಹಲವು ಸಮೀಕ್ಷೆಗಳು ನಡೆಯುತ್ತಿವೆ. ಅದ್ರಲ್ಲಿ ಅಚ್ಚರಿಯ ಫಲಿತಾಂಶ ಹೊರ ಬಿದ್ದಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿಯೂ ಈ ಬಾರಿ ಜನ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ
ಇಂಡಿಯಾ ಟಿವಿ-ಸಿಎನ್‌ಎಕ್ಸ್ ನಡೆಸಿದ ಸರ್ವೇಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ 22 ಕ್ಷೇತ್ರ, ಜೆಡಿಎಸ್ 2 ಸ್ಥಾನ ಹಾಗೂ ಹಾಗೂ ಕಾಂಗ್ರೆಸ್ 4 ಸ್ಥಾನ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ. ಚಾಮರಾಜನಗರ ಕ್ಷೇತ್ರ, ಬೆಂಗಳೂರು ಗ್ರಾಮಾಂತರ ಕ್ಷೇತ್ರ, ಕಲಬುರಗಿ ಕ್ಷೇತ್ರ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಮಾಹಿತಿ ಹೊರಹಾಕಿದೆ. ಚಾಮರಾಜನಗರದಲ್ಲಿ ಬಿಜೆಪಿ ಹಾಲಿ ಸಂಸದ ಶ್ರೀನಿವಾಸಪ್ರಸಾದ್ ಈಗಾಗಲೇ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದು ಕಾಂಗ್ರೆಸ್ಗೆ ವರದಾನವಾಗಬಹುದು ಎನ್ನಲಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹಾಲಿ ಸಂಸದ ಡಿ. ಕೆ. ಸುರೇಶ್ ಈ ಬಾರಿಯೂ ಟಿಕೆಟ್ ಸಿಕ್ಕದೆ ಗೆಲ್ಲುವ ಅವಕಾಶ ದಟ್ಟವಾಗಿದೆ. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲೂ ಈ ಸಲ ಕಾಂಗ್ರೆಸ್ ಜಯಗಳಿಸುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿಯೂ ಈ ಬಾರಿ ಜನ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಚುನಾವಣಾ ಪೂರ್ವ ಸಮೀಕ್ಷೆ ಬಹಿರಂಗಪಡಿಸಿದೆ.
ಒಟ್ಟಾರೆ ಲೋಕಸಭಾ ಚುನಾವಣಾ ಕಣ ದಿನದಿನಕ್ಕೂ ರಂಗೇರುತ್ತಿದೆ. ಇದೀಗ ಟಿಕೆಟ್ ಫೈಟ್ ಜೋರಾಗೇ ನಡೀತಿದ್ದು ಎಲ್ಲಾ ಪಕ್ಷಗಳಲ್ಲೂ ಅಸಮಧಾನಕ್ಕೆ ಕಾರಣವಾಗಿದೆ. ಎಲ್ಲಾ ಭಿನ್ನಮತಗಳನ್ನ ಶಮನ ಮಾಡಿ ಗೆಲ್ಲಲೇಬೇಕಾದ ಅನಿವಾರ್ಯತೆಯೂ ಇದೆ.