ಮತ್ತೊಂದು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ – 500 ರೂಪಾಯಿಗೆ ಸಿಲಿಂಡರ್, ಮನೆ ಒಡತಿಗೆ 10 ಸಾವಿರ ರೂಪಾಯಿ!
ಸರ್ಕಾರ ಬಡ ಜನರಿಗಾಗಿ ಒಂದೊಂದು ಯೋಜನೆಗಳನ್ನು ಜಾರಿ ಮಾಡುತ್ತಲೇ ಇದೆ. ಇದೀಗ ಕಾಂಗ್ರೆಸ್ ತನ್ನ ಮತದಾರರಿಗೆ ಮತ್ತೊಂದು ಬಂಪರ್ ಕೊಡುಗೆಯನ್ನು ಘೋಷಿಸಿದೆ. ಮನೆ ಒಡತಿಗೆ ವಾರ್ಷಿಕವಾಗಿ 10 ಸಾವಿರ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ. ಅಂದ ಹಾಗೆ ಈ ಗ್ಯಾರಂಟಿ ಕರ್ನಾಟಕದಲ್ಲಿ ಘೋಷಣೆಯಾಗಿಲ್ಲ. ಈ ಗ್ಯಾರಂಟಿ ಘೋಷಣೆಯಾಗಿರುವುದು ರಾಜಸ್ತಾನದಲ್ಲಿ.
ಒಂದೆಡೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದರೆ, ಇತ್ತ ಲೋಕಸಭೆ ಚುನಾವಣೆಯೂ ಹತ್ತಿರ ಬರುತ್ತಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಪಣತೊಟ್ಟಿರುವ ಕಾಂಗ್ರೆಸ್ ಚುನಾವಣಾ ರಾಜ್ಯಗಳಲ್ಲಿ ಒಂದೊಂದೇ ಗ್ಯಾರಂಟಿಗಳನ್ನು ಘೋಷಿಸುತ್ತಿದೆ. ಇದೀಗ ಕರ್ನಾಟಕದ ರೀತಿ ರಾಜಸ್ಥಾನದಲ್ಲೂ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಪ್ರಕಟಿಸಿದೆ. ಕರ್ನಾಟಕದಲ್ಲಿ ಗೃಹಿಣಿಯರಿಗೆ ಮಾಸಿಕ ₹2000 ನೀಡಲಾಗುತ್ತಿದ್ದರೆ, ರಾಜಸ್ಥಾನದಲ್ಲಿ ಪಕ್ಷ ಗೆದ್ದರೆ ವಾರ್ಷಿಕ ₹10 ಸಾವಿರ ನೀಡುವ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಕೆನಡಾ ದೇಶದವರಿಗೆ ವೀಸಾ ಸೇವೆಗಳನ್ನು ಮರು ಆರಂಭಿಸಿದ ಭಾರತ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಝುಂಝುನುನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಗ್ಯಾರಂಟಿ ಘೋಷಿಸಲಾಗಿದೆ. ಕಾಂಗ್ರೆಸ್ ಮತ್ತೆ ಗೆದ್ದರೆ 1.05 ಕೋಟಿ ಕುಟುಂಬಕ್ಕೆ ಗೃಹ ಬಳಕೆ ಸಿಲಿಂಡರ್ 500 ರೂಪಾಯಿ ಮತ್ತು ಕುಟುಂಬದ ಒಡತಿಗೆ ಗೃಹ ಲಕ್ಷ್ಮಿ ಯೋಜನೆಯಡಿ ವಾರ್ಷಿಕವಾಗಿ ಕಂತು ರೂಪದಲ್ಲಿ 10,000 ರೂಪಾಯಿ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಈ ಎರಡೂ ಗ್ಯಾರಂಟಿಗಳ ಅನುಷ್ಠಾನವಾಗಲಿದೆ ಎಂದು ಹೇಳಿದರು. ನ.25 ರಂದು ರಾಜಸ್ಥಾನದ 200 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಡಿ.3 ರಂದು ಫಲಿತಾಂಶ ಹೊರಬೀಳಲಿದೆ.