ಅನ್ನಭಾಗ್ಯ ಯೋಜನೆ ಜಾರಿ ವಿಚಾರವಾಗಿ ಕಾಲೆಳೆದ ಬಿಜೆಪಿ – ಮೋದಿಯನ್ನು ಮುಂದಿಟ್ಟು ಕಾಂಗ್ರೆಸ್ ತಿರುಗೇಟು!
ಬೆಂಗಳೂರು: ಕಾಂಗ್ರೆಸ್ ಬಿಜೆಪಿ ನಡುವಿನ ಟ್ವೀಟ್ ಸಮರ ತಾರಕಕ್ಕೇರಿದೆ. ಅನ್ನಭಾಗ್ಯದ ಅಕ್ಕಿ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ವಾದ ಮುಂದುವರಿದಿದೆ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡಲು ನಿರಾಕರಿಸಿದೆ. ಹೀಗಾಗಿ ಕಾಂಗ್ರೆಸ್ ಬಿಜೆಪಿಯನ್ನು ದೂರುತ್ತಿದೆ. ಇನ್ನು ಅನ್ನಭಾಗ್ಯದ ಅಕ್ಕಿ ಬದಲು ಹಣ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ. ಇದನ್ನೇ ರಾಜ್ಯ ಬಿಜೆಪಿ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಅವರ ಸರ್ಕಾರ ಕೇಂದ್ರದ ಅಕ್ಕಿಯನ್ನು ತಮ್ಮದೆಂದು ಲೇಬಲ್ ಹಚ್ಚಿಕೊಂಡಿದೆ ಎಂದು ಲೇವಡಿ ಮಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಪ್ರಧಾನಿ ಮೋದಿ ಅವರ ಸರ್ಕಾರವು, “ಗರೀಬ್ ಕಲ್ಯಾಣ್ ಅನ್ನ ಯೋಜನೆ”ಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಿ, ಪ್ರತಿಯೊಬ್ಬರಿಗೂ ಉಚಿತವಾಗಿ ಅಕ್ಕಿ ದೊರೆಯುವಂತೆ ಮಾಡಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ಪುಷ್ಠಿ ನೀಡಿತು. ಆದರೆ, ಆ ಅಕ್ಕಿಯನ್ನು ತಮ್ಮದೆಂದು ಲೇಬಲ್ ಹಚ್ಚಿಕೊಂಡಿದ್ದು ಮಾತ್ರ ಸಿದ್ಧರಾಮಯ್ಯನವರ ಸರ್ಕಾರ ಎಂದು ಟೀಕಿಸಿದೆ.
ಇದನ್ನೂ ಓದಿ: ಯುವಬ್ರಿಗೇಡ್ ಕಾರ್ಯಕರ್ತನ ಕೊಲೆಯೇ ಬಿಜೆಪಿಗೆ ಅಸ್ತ್ರ – ಮೃತನ ಮನೆಗೆ ಬಿಜೆಪಿ ನಾಯಕರ ನಿಯೋಗ ಭೇಟಿ
ಈ ಚುನಾವಣೆ ಪೂರ್ವದಲ್ಲಿ ಜನತೆಗೆ 10 ಕೆಜಿ ಅಕ್ಕಿ ನೀಡುತ್ತೇವೆಂದು ರಾಜ್ಯ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆ ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ಸೇರಿ, ಒಟ್ಟು 15 ಕೆಜಿ ಅಕ್ಕಿ ರಾಜ್ಯದ ಜನತೆಗೆ ತಲುಪಬೇಕಾಗಿತ್ತು. ಆದರೆ, ಈಗ ರಾಜ್ಯದ ಜನತೆಗೆ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಮಾತ್ರ ತಲುಪುತ್ತಿದೆ. 10 ಕೆಜಿ ಅಕ್ಕಿ ನೀಡಬೇಕಾಗಿದ್ದ ರಾಜ್ಯ ಸರ್ಕಾರ, ಕೇವಲ ₹170 ನೀಡಿ “ಕೈ” ತೊಳೆದುಕೊಳ್ಳುತ್ತಿದೆ. ಅಂದರೇ, ₹17ಕ್ಕೆ ಕೆಜಿ ಅಕ್ಕಿ, ಖರೀದಿಸುವ ಸಂದಿಗ್ಧ ಸ್ಥಿತಿ ಫಲಾನುಭವಿಗಳದ್ದಾಗಿದೆ. ₹17ಕ್ಕೆ ಕೆಜಿ ಅಕ್ಕಿ ಎಲ್ಲಿ ಸಿಗುತ್ತದೆ ಎಂಬುದನ್ನು ಸಿದ್ಧರಾಮಯ್ಯ ಅವರು ಸ್ವಲ್ಪ ರಿಸರ್ಚ್ ಮಾಡಿ ತಿಳಿಸಬೇಕು ಎಂದು ಟ್ವೀಟ್‌ನಲ್ಲಿ ಹೇಳಿದೆ.
ಅನ್ನಭಾಗ್ಯದ ಅಕ್ಕಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬ ವರದಿಗಳು ದಿನನಿತ್ಯ ಮಾಧ್ಯಮಗಳಲ್ಲಿ ಬರುತ್ತಿವೆ. ಆದರೇ, ಅಕ್ಕಿ ಕಳ್ಳಸಾಗಾಣಿಕೆಯನ್ನು ತಡೆಯಲು ಎಟಿಎಂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೇ, ಅನ್ನಭಾಗ್ಯದ ಅಕ್ಕಿಯ ಅಕ್ರಮ ಸಾಗಣೆಯಲ್ಲಿಯೂ ಸಹ ಸರ್ಕಾರ ಕಮಿಷನ್ ಹೊಡೆಯುತ್ತಿದೆ ಎಂಬ ಅನುಮಾನ ದಟ್ಟವಾಗಿದೆ ಎಂದು ಆರೋಪಿಸಿದೆ.
ಅನ್ನಭಾಗ್ಯ ಯೋಜನೆಯ ಅಕ್ಕಿ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಅನಾವಶ್ಯಕವಾಗಿ ಬೊಬ್ಬೆ ಹೊಡೆದಿದ್ದ ಎಟಿಎಂ ಸರ್ಕಾರ, ರಾಜ್ಯದಲ್ಲಿಯೇ ರೈತರಿಂದ ಅಕ್ಕಿ ಖರೀದಿಸಿ ಎಂದರೇ ಮೀನಾಮೇಷ ಎಣಿಸಿತ್ತು. ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಿದರೇ , ಪ್ರತಿ ಕೆಜಿ ಅಕ್ಕಿಗೆ ಕಮಿಷನ್ ಹೊಡೆಯಬಹುದೆಂಬ ದುರಾಲೋಚನೆ ಸಿದ್ಧರಾಮಯ್ಯ ಅವರ ಸರ್ಕಾರದ್ದಾಗಿತ್ತು. ಆದರೇ ಅದಕ್ಕೆ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವನ್ನು ಬಾಯಿಗೆ ಬಂದಂತೆ ರಾಜ್ಯದ ಎಟಿಎಂ ಸರ್ಕಾರ ಟೀಕಿಸುತ್ತಿದೆ ಎಂದು ಕಿಡಿಕಾರಿದೆ.
ಇನ್ನು ಬಿಜೆಪಿ ಅನ್ನಭಾಗ್ಯ ಎಂಬ ಸಿದ್ದರಾಮಯ್ಯನವರ ರಾಜಕೀಯ ಸೀರೀಸ್‌ನ 5 ಎಪಿಸೋಡುಗಳು ಎಂಬ ಪಟ್ಟಿಯೊಂದನ್ನು ಮಾಡಿ ಟ್ವೀಟ್ ಮಾಡಿದೆ. ಬಿಜೆಪಿ ರಚಿಸಿದ ಅನ್ನಭಾಗ್ಯ ಎಂಬ ಸಿದ್ಧರಾಮಯ್ಯನವರ ರಾಜಕೀಯ ಸೀರೀಸ್‌ನ 5 ಎಪಿಸೋಡುಗಳು ಹೀಗಿವೆ..
- ಮೊದಲ ಎಪಿಸೋಡ್ – ಎಲ್ಲರಿಗೂ 10 ಕೆಜಿ ಅಕ್ಕಿ ಫ್ರೀ.
- ಎರಡನೇ ಎಪಿಸೋಡ್ – ಮೋದಿ ಸರ್ಕಾರ ನಮಗೆ ಅಕ್ಕಿ ಕೊಡ್ತಾ ಇಲ್ಲ.
- ಮೂರನೇ ಎಪಿಸೋಡ್ – ನಾವು ಕೊಡ್ತೀವಿ ಅಂದಿದ್ದೇ ಬರೀ ಐದು ಕೆಜಿ ಅಕ್ಕಿ, ಮೋದಿ ಸರ್ಕಾರ ಈಗಾಗಲೇ ಐದು ಕೆಜಿ ಅಕ್ಕಿ ಕೊಡುತ್ತಿದೆ.
- ನಾಲ್ಕನೇ ಎಪಿಸೋಡ್ – ನಮಗೆ ಮಾರುಕಟ್ಟೆಯಲ್ಲಿ ಅಕ್ಕಿ ಸಿಗುತ್ತಿಲ್ಲ, ಬೇರೆ ರಾಜ್ಯಗಳಿಂದ ಖರೀದಿಸಿ ಕೊಡುತ್ತೇವೆ. ಹೊಟ್ಟೆಗೆ ದುಡ್ಡು ತಿನ್ನೋಕ್ಕೆ ಆಗತ್ತಾ?
- ಐದನೇ ಎಪಿಸೋಡ್ – ಮೋದಿ ಸರ್ಕಾರ 5 ಕೆಜಿ ಅಕ್ಕಿ ಕೊಡ್ತಿದೆ. ಆದರೆ, ನಾವು ಅಕ್ಕಿ ಕೊಡಲ್ಲ. ಬೇಕಾದ್ರೆ ತಿಂಗಳಿಗೆ ₹170 ತಿಂದು ಹೊಟ್ಟೆ ತುಂಬಿಸಿಕೊಳ್ಳಿ.
To be continued…
- ಆರನೇ ಎಪಿಸೋಡ್ – ಮುಂದಿನ ತಿಂಗಳು ಹಣ ನೀಡದಿರಲು ಸರ್ವರ್ ಹ್ಯಾಕ್ ಕಾರಣ ನೀಡಲಾಗುವುದು.
- ಏಳನೇ ಎಪಿಸೋಡ್ – ಆ ನಂತರ ಮತ್ತೂ ಒಂದು ತಿಂಗಳೂ ಆಗಲ್ಲ, ಲೆಕ್ಕ ಬರೆದಿಟ್ಕೊಳಿ ಅನ್ನುತ್ತೆ ಸರ್ಕಾರ.
ನುಡಿದಂತೆ ಅನ್ನಭಾಗ್ಯ ಯೋಜನೆ ಜಾರಿ ಮಾಡಲಾಗದೆ ಇದಕ್ಕೆ ಹೊಸ ಎಪಿಸೋಡುಗಳು ಮಾತ್ರವಲ್ಲ, ಹೊಸ ಸೀಸನ್ ಆರಂಭವಾದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇನ್ನು ರಾಜ್ಯ ಕಾಂಗ್ರೆಸ್ ಕೂಡ ಬಿಜೆಪಿಗೆ ಟ್ವೀಟ್ ಮೂಲಕ ಟಾಂಗ್ ನೀಡಿದೆ. ಪಡಿತರ ವಿತರಣಾ ಯೋಜನೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ . ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದು ಕಾಂಗ್ರೆಸ್. ಅನ್ನಭಾಗ್ಯ ಜಾರಿಗೆ ತಂದಿದ್ದು ಕಾಂಗ್ರೆಸ್ . ರಾಜ್ಯದಲ್ಲಿ ಅನ್ನಭಾಗ್ಯ ಜಾರಿಗೆ ಬರುವಾಗ ಕೇಂದ್ರದಲ್ಲಿದ್ದಿದ್ದು ಕಾಂಗ್ರೆಸ್ ಆದರೆ ಬಿಜೆಪಿ ನಾಯಕರು “ಮೋದಿ ಅಕ್ಕಿ“ ಎಂದು ಬೊಬ್ಬೆ ಹೊಡೆಯುತ್ತಿರುವುದು ನೋಡಿದರೆ ಮೋದಿಯೇ ತಮ್ಮ ಜಮೀನಿನಲ್ಲಿ ಉತ್ತಿ, ಬಿತ್ತಿ, ಬೆಳೆದು ಅಕ್ಕಿ ತಂದುಕೊಡುತ್ತಿರುವಂತೆ ಭಾಸವಾಗುತ್ತಿದೆ! ಗರೀಬ್ ಕಲ್ಯಾಣ್ ಯೋಜನೆ ಡಿಸೆಂಬರ್ ನಂತರ ಸ್ಥಗಿತಗೊಳ್ಳಲಿದೆ, ಆಗ ಯಾರ ಅಕ್ಕಿ ಎಂದು ಬೊಬ್ಬೆ ಹೊಡೆಯುತ್ತಾರೆ? ಎಂದು ಪ್ರಶ್ನಿಸಿದೆ.
ಕರ್ನಾಟಕಕ್ಕೆ ಅಕ್ಕಿ ಪೂರೈಸಲು ನಿರಾಕರಿಸಿದ ಕೇಂದ್ರ ಆಹಾರ ನಿಗಮದ ಹರಾಜು ಪ್ರಕ್ರಿಯೆಯಲ್ಲಿ ಅಕ್ಕಿ ಖರೀದಿಗೆ ಖಾಸಗಿ ಕಂಪೆನಿಗಳು ಆಸಕ್ತಿಯೇ ತೋರುತ್ತಿಲ್ಲ. ನಮ್ಮ ಸರ್ಕಾರ 34 ರೂಪಾಯಿಗಳ ಖರೀದಿ ದರಕ್ಕೆ ಕೇಳಿದರೂ ನಿರಾಕರಿಸಿದ ಕೇಂದ್ರ ಸರ್ಕಾರ ಖಾಸಗಿಯವರಿಗೆ 31 ರೂಪಾಯಿಗಳಿಗೆ ನೀಡಲು ಸಿದ್ಧವಾದರೂ ಖರೀದಿದಾರರು ಮುಂದೆ ಬರುತ್ತಿಲ್ಲ. ಹುಳು ಹಿಡಿದು ಅಕ್ಕಿ ವ್ಯರ್ಥವಾದರೂ ಸರಿ ಜನರ ಹಸಿವು ನೀಗಿಸಬಾರದು ಎನ್ನುವ ಧೋರಣೆ ಬಿಜೆಪಿಯದ್ದು. ಬಿಜೆಪಿಯ ರಾಜಕೀಯ ದುರುದ್ದೇಶವು ಜನತೆಯನ್ನು ಬಲಿಪಶು ಮಾಡುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ.