ಕಾಂಗ್ರೆಸ್ ನಲ್ಲಿ ದಿಢೀರ್ ಬೆಳವಣಿಗೆ – ಸಿಎಂ ಬೊಮ್ಮಾಯಿ ವಿರುದ್ಧ ಅಭ್ಯರ್ಥಿ ಬದಲಾವಣೆ!
ಬೆಂಗಳೂರು: ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಗುರುವಾರ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಇದೀಗ ಕಾಂಗ್ರೆಸ್ ಮತ್ತೊಂದು ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದೆ.
ಸಿಎಂ ವಿರುದ್ದದ ಅಭ್ಯರ್ಥಿಯನ್ನು ಕಾಂಗ್ರೆಸ್ ಬದಲಾಯಿಸಿದೆ. ಮೊದಲಿಗೆ ಮಹಮ್ಮದ್ ಯುಸೂಫ್ ಸವಣೂರು ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಆದ್ರೆ ಈಗ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಯಾಸೀರ್ ಪಠಾಣಗೆ ಶಿಗ್ಗಾಂವಿಯಲ್ಲಿ ಟಿಕೆಟ್ ನೀಡಲಾಗಿದೆ. ಮೊದಲು ಘೋಷಿಸಿದ್ದ ಅಭ್ಯರ್ಥಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಅವರಿಗೆ ಶಿಗ್ಗಾಂವಿಯಲ್ಲಿ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾಯಿಸಿದೆ.
ಇದನ್ನೂ ಓದಿ: ಗೆದ್ದೇ ಗೆಲ್ಲುವ ಒಂದು ದಿನ, ಗೆಲ್ಲಲೇಬೇಕು ಒಳ್ಳೇತನ – ಕಿಚ್ಚನ ಬಾಯಲ್ಲಿ ಬೊಮ್ಮಾಯಿ ಮಾಮನ ಗುಣಗಾನ!
ಭಾರೀ ಕುತೂಹಲ ಹುಟ್ಟಿಸಿದ್ದ ಮಂಗಳೂರು ಉತ್ತರದ ಅಭ್ಯರ್ಥಿಯನ್ನು ಕೊನೆಗೂ ಘೋಷಣೆ ಮಾಡಿದೆ. ಇಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹಾಗೂ ಮಾಜಿ ಶಾಸಕ ಮೊಯ್ದಿನ್ ಬಾವ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇದೀಗ ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಇನಾಯತ್ ಅಲಿ ಅವರಿಗೆ ಟಿಕೆಟ್ ಘೋಷಿಸಿದೆ.
ಇನ್ನು ಬಾಕಿ ಉಳಿದುಕೊಂಡಿದ್ದ ಮುಳಬಾಗಿಲು ಕ್ಷೇತ್ರದಲ್ಲಿ ಡಾ. ಬಿ. ಸಿ ಮುದ್ದುಗಂಗಾಧರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಕೆ. ಆರ್ ಪುರಂ ಕ್ಷೇತ್ರಕ್ಕೆ ಡಿ.ಕೆ ಮೋಹನ್ ಅವರನ್ನು ಕಣಕ್ಕಿಳಿಸಿದೆ. ಪುಲಕೇಶಿ ನಗರದಲ್ಲಿ ಎ.ಸಿ ಶ್ರೀನಿವಾಸ್ ಸ್ಪರ್ಧಿಸಲಿದ್ದಾರೆ. ರಾಯಚೂರು ನಗರದಲ್ಲಿ ಮೊಹಮ್ಮದ್ ಶಾಲಮ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿ.ವಿ ರಾಜೀವ್ ಗೌಡ ಅವರನ್ನು ಕಣಕ್ಕಿಳಿಸಿದೆ. ಸಿ.ವಿ ರಾಮನ್ ನಗರದಲ್ಲಿ ಎಸ್. ಆನಂದ್ ಕುಮಾರ್ ಅನಂದ್ ಅವರಿಗೆ ಟಿಕೆಟ್ ಸಿಕ್ಕಿದೆ. ಅರಕಲಗೂಡು ಕ್ಷೇತ್ರದಲ್ಲಿ ಹೆಚ್ ಪಿ ಶ್ರೀಧರ್ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.